ಜನರ ಸಮಸ್ಯೆ ನಿವಾರಣೆಗೆ ಆದ್ಯತೆ : ಉದ್ಧವ ಠಾಕ್ರೆ

ಮುಂಬೈ, ಡಿ 1 - ಎಲ್ಲಾ ಸದಸ್ಯರು ಮತ್ತು ಎಲ್ಲಾ ರಾಜಕೀಯ ಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಆಡಳಿತ ನಡೆಸುವುದೆ  ಆದ್ಯತೆಯಾಗಿದೆ ಎಂದು  ನೂತನ ಮುಖ್ಯಮಂತ್ರಿ ಉದ್ಧವ ಠಾಕ್ರೆ ಹೇಳಿದ್ದಾರೆ.

ಕಳೆದ ಗುರುವಾರವಷ್ಟೇ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಅವರು, ವಿಧಾನಸಭೆಯಲ್ಲಿ ಇಂದು ಸ್ಪೀಕರ್ ಆಯ್ಕೆಯ ನಂತರ ಮಾತನಾಡಿ, ಹಿಂದಿನ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಸಲಹೆ ಸೂಚನೆ ಸಹ ತೆಗೆದುಕೊಂಡು ಸರ್ಕಾರ ನಡೆಸುವುದಾಗಿ ತಿಳಿಸಿದ್ದಾರೆ.

“ಜನರ ಆಶೀರ್ವಾದದಿಂದ ನನಗೆ ಈ ಪಟ್ಟ ದೊರಕಿದೆ. ದೇವೇಂದ್ರ ಫಡ್ನವಿಸ್ ಅವರಿಂದ ನಾನು ಬಹಳಷ್ಟು ಕಲಿತಿದ್ದೇನೆ” ಎಂದು ನೇರವಾಗಿಯೇ ಸದನದಲ್ಲಿ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

“ ನಾನು ಎಂದೂ, ಯಾವುದೇ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡಿಲ್ಲ, ಮುಂದೆ ಮಾಡುವುದೂ ಇಲ್ಲ. ಜನರ ನಂಬಿಕೆ, ವಿಶ್ವಾಸಕ್ಕೆ ತಕ್ಕ ರೀತಿಯಲ್ಲಿ ನಡೆದುಕೊಂಡು ಜನರ ಸಮಸ್ಯೆಗಳನ್ನು ಪರಿಹಾರ ಮಾಡಬೇಕು ಎಂದು ಸಚಿವರಿಗೂ ಸ್ಪಷ್ಟವಾಗಿ ಸೂಚನೆ ಕೊಟ್ಟಿದ್ದೇನೆ. 

ಜನರ ಸಮಸ್ಯೆ ನಿವಾರಣೆ, ಅಭಿವೃದ್ಧಿಗೆ ವೇಗದ ಚಾಲನೆ ನೀಡುವುದು ತಮ್ಮ ಸರ್ಕಾರದ ಪ್ರಥಮ ಆದ್ಯತೆಯಾಗಿದೆ”  ಎಂದು ಉದ್ಧವ ಠಾಕ್ರೆ ವಿಧಾನಸಭೆಯಲ್ಲಿಂದು ಹೇಳಿದರು.ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬದಿಗೊತ್ತಿ, ಎಲ್ಲರೂ ಸಹಕರಿಸುವಂತೆ ಅವರು ಇದೆ  ಸಮಯದಲ್ಲಿ ಮನವಿ ಮಾಡಿದರು.