ಮೂಲಸೌಕರ್ಯಗಳಿಲ್ಲದೆ ಪರದಾಡುತ್ತಿರುವ ಬಬಲೇಶ್ವರ ಜನತೆ; ಭರವಸೆಗಳ ನೀಡಿ ವಂಚನೆ

ಮೂಲಸೌಕರ್ಯಗಳಿಲ್ಲದೆ ಪರದಾಡುತ್ತಿರುವ ಬಬಲೇಶ್ವರ ಜನತೆ; ಭರವಸೆಗಳ ನೀಡಿ ವಂಚನೆ People of Babaleshwar are struggling without infrastructure; Deception through promises

 ವಿಜಯಪುರ 06 : 4.48 ಲಕ್ಷ ಕೋಟಿ ಬಜೆಟ್ನಲ್ಲಿ ಬಬಲೇಶ್ವರಕ್ಕೆ ಕೇವಲ 'ತಾತ್ವಿಕ' ಮಂಕುಬೂದಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ 2026-27ನೇ ಸಾಲಿನ 4.48 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಬಜೆಟ್ನಲ್ಲಿ ಬಬಲೇಶ್ವರ ಮತ್ತು ತಿಕೋಟಾ ತಾಲೂಕುಗಳ ಜನತೆಗೆ ಕೇವಲ ಕಾಗದದ ಮೇಲಿನ ಭರವಸೆಗಳನ್ನು ನೀಡಿ ವಂಚಿಸಲಾಗಿದೆ. ರಾಜ್ಯದ ಪ್ರಭಾವಿ ಸಚಿವರಾಗಿರುವ ಎಂ.ಬಿ.ಪಾಟೀಲರು ತಮ್ಮ ಸ್ವಕ್ಷೇತ್ರಕ್ಕೆ ವಾಸ್ತವಿಕ ಅನುದಾನ ತರುವಲ್ಲಿ ಮತ್ತು ಆಡಳಿತಾತ್ಮಕ ಮೂಲಸೌಕರ್ಯ ಒದಗಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಭಾರತೀಯ ಜನತಾ ಪಾರ್ಟಿ ತೀವ್ರವಾಗಿ ಖಂಡಿಸುತ್ತದೆ. 

ಬಜೆಟ್ ದಾಖಲೆ ಹೇಳುವ ಸತ್ಯ ಮತ್ತು ನನೆಗುದಿಗೆ ಬಿದ್ದಿರುವ ಅಭಿವೃದ್ಧಿ: 

ಸಿ ಅನುದಾನವಿಲ್ಲದ ಬರೀ 'ತಾತ್ವಿಕ' ಅನುಮೋದನೆ: ಬಜೆಟ್ನ ಕಂಡಿಕೆ 95ರಲ್ಲಿ ವಿಜಯಪುರ ಜಿಲ್ಲೆಯ ಬಾಬಾ ನಗರದಲ್ಲಿ 0.67 ಟಿ.ಎಂ.ಸಿ ಸಾಮರ್ಥ್ಯದ ಸಂಗ್ರಹಣಾ ಜಲಾಶಯವನ್ನು ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯಡಿ ನಿರ್ಮಿಸಲು ಕೇವಲ 'ತಾತ್ವಿಕ ಅನುಮೋದನೆ' ನೀಡಲಾಗಿದೆ. ಯೋಜನೆಗೆ ಬಿಡಿಗಾಸೂ ಮೀಸಲಿಡದೆ ಕೇವಲ ತಾತ್ವಿಕ ಒಪ್ಪಿಗೆ ನೀಡಿರುವುದು ಬಬಲೇಶ್ವರದ ರೈತರ ಕಣ್ಣಿಗೆ ಮಂಕುಬೂದಿ ಎರಚುವ ತಂತ್ರವಾಗಿದೆ. 

ಬಬಲೇಶ್ವರ ಮತ್ತು ತಿಕೋಟಾ ತಾಲೂಕುಗಳ ಜ್ವಲಂತ ಸಮಸ್ಯೆಗಳು ಹಾಗೂ ಬೇಡಿಕೆಗಳು: 

ಕ್ಷೇತ್ರದ ಜನತೆ ಸಣ್ಣಪುಟ್ಟ ಕೆಲಸಗಳಿಗೂ ಜಿಲ್ಲಾ ಕೇಂದ್ರಕ್ಕೆ ಅಲೆಯುವಂತಾಗಿದ್ದು, ಬಜೆಟ್ನಲ್ಲಿ ಈ ಕೆಳಗಿನ ತುರ್ತು ಅಗತ್ಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ: 

1. ತಾಲೂಕು ಆಡಳಿತ: ಬಬಲೇಶ್ವರ ಹಾಗೂ ತಿಕೋಟಾದಲ್ಲಿ ತಾಲೂಕು ಮಟ್ಟದ ಎಲ್ಲಾ ಆಡಳಿತ ಇಲಾಖೆಗಳನ್ನು ಕೂಡಲೇ ಪ್ರಾರಂಭಿಸಬೇಕು. 

2. ಕೋಲ್ಡ್‌ ಸ್ಟೋರೇಜ್‌: ದ್ರಾಕ್ಷಿ ಬೆಳೆಗಾರರ ಅನುಕೂಲಕ್ಕಾಗಿ ಬಬಲೇಶ್ವರದಲ್ಲಿ ಸರ್ಕಾರಿ ಸ್ವಾಮ್ಯದ ಶೀತಲ ಗೃಹ ನಿರ್ಮಾಣ ಮಾಡಬೇಕು. 

3. ನೋಂದಣಿ ಕಚೇರಿ: ಬಬಲೇಶ್ವರದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಯನ್ನು ಕೂಡಲೇ ಪೂರ್ಣ ಪ್ರಮಾಣದಲ್ಲಿ ಆರಂಭಿಸಿ, ಅಗತ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಬೇಕು. 

4. ನ್ಯಾಯಾಲಯ ಸ್ಥಾಪನೆ: ಎರಡೂ ತಾಲೂಕು ಕೇಂದ್ರಗಳಲ್ಲಿ ಸಿವಿಲ್ ಹಾಗೂ ಜೆ.ಎಂ.ಎಫ್‌.ಸಿ ನ್ಯಾಯಾಲಯಗಳನ್ನು ಸ್ಥಾಪಿಸಬೇಕು. 

5. ಇತರೆ ಸೇವೆಗಳು: ಅಗ್ನಿಶಾಮಕ ಠಾಣೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ  ಕಚೇರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಕಚೇರಿಗಳನ್ನು ತುರ್ತಾಗಿ ಆರಂಭಿಸಬೇಕು. 

ಸಾರ್ವಜನಿಕರು ಮತ್ತು ರೈತರು ತಮ್ಮ ಪ್ರತಿಯೊಂದು ಕೆಲಸಗಳಿಗೂ ಜಿಲ್ಲಾ ಕೇಂದ್ರಕ್ಕೆ ಅಲೆಯುವುದನ್ನು ತಪ್ಪಿಸಲು, ಸರ್ಕಾರ ಮತ್ತು ಸಚಿವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಕೇವಲ 'ತಾತ್ವಿಕ ಅನುಮೋದನೆ'ಯಂತಹ ನಾಮಕಾವಸ್ತೆ ಘೋಷಣೆಗಳ ಮೂಲಕ ಬಬಲೇಶ್ವರದ ಪ್ರಜ್ಞಾವಂತ ಮತದಾರರನ್ನು ದಾರಿ ತಪ್ಪಿಸುವುದನ್ನು ಬಿಟ್ಟು, ಕೂಡಲೇ ಬಾಬಾ ನಗರದ ಜಲಾಶಯಕ್ಕೆ ಅನುದಾನ ಬಿಡುಗಡೆ ಮಾಡಬೇಕು ಹಾಗೂ ಮೇಲ್ಕಂಡ ಎಲ್ಲಾ ಆಡಳಿತಾತ್ಮಕ ಕಚೇರಿಗಳನ್ನು ಕಾರ್ಯಗತಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರೈತರು ಮತ್ತು ಸಾರ್ವಜನಿಕರನ್ನು ಒಗ್ಗೂಡಿಸಿ ಬಬಲೇಶ್ವರದಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು.