ವಿಶೇಷ ತೆರಿಗೆ ವಸೂಲಾತಿ ಅಭಿಯಾನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿ
ಗದಗ 09: ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಡಿಸೆಂಬರ್ 11 ಬುಧವಾರ 'ವಿಶೇಷ ತೆರಿಗೆ ವಸೂಲಾತಿ ಅಭಿಯಾನ' ಹಮ್ಮಿಕೊಳ್ಳಲಾಗಿದ್ದು, ತಾಲೂಕಿನ ಎಲ್ಲಾ ಗ್ರಾ.ಪಂ ಸಿಬ್ಬಂದಿಗಳು ಕೈಜೋಡಿಸಿ ಅಭಿಯಾನ ಯಶಸ್ವಿಗೊಳಿಸಬೇಕೆಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಮಲ್ಲಯ್ಯ ಕೊರವನವರ ಹೇಳಿದರು.
ಗ್ರಾಮ ಪಂಚಾಯಿತಿಗೆ ಸಲ್ಲಿಕೆ ಆಗಬೇಕಾಗಿರುವ ತೆರಿಗೆಯಲ್ಲಿ ಶೇ.100ರಷ್ಟು ವಸೂಲಿ ಮಾಡುವುದು ಗ್ರಾಪಂನ ಪ್ರಾಥಮಿಕ ಹೊಣೆಗಾರಿಕೆಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾ.ಪಂಗಳಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಕ್ರೋಢೀಕರಿಸಿಕೊಳ್ಳಲು ಕರವಸೂಲಾತಿ ಅಭಿಯಾನವನ್ನು ವಿಶೇಷ ಆಂದೋಲನವನ್ನಾಗಿ ತಾಲೂಕಿನಲ್ಲಿ ನಡೆಸಬೇಕಿದೆ. ಎಲ್ಲಾ ಗ್ರಾ.ಪಂಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ಗ್ರಾ.ಪಂ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಡಿ.11ರಿಂದ ಡಿ.30ರವರೆಗೆ ಕಡ್ಡಾಯವಾಗಿ ತೆರಿಗೆ ವಸೂಲಾತಿ ಅಭಿಯಾನ ಹಮ್ಮಿಕೊಳ್ಳಬೇಕು ಎಂದರು.
ತಾಲೂಕಿನ ಎಲ್ಲಾ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಕರ ವಸೂಲಾತಿ ಅಭಿಯಾನವನ್ನು ಗ್ರಾ.ಪಂ ಕಾರ್ಯದರ್ಶಿಗಳು, ನೀರಗಂಟಿಗಳು ಸಿಬ್ಬಂದಿಗಳು ಜೊತೆ ಸೇರಿಕೊಂಡು ಮನೆಗಳು, ಅಂಗಡಿ ಮುಂಗಟ್ಟು, ಮಳಿಗೆಗಳಿಗೆ ತೆರಳಿ ಕರ ವಸೂಲಾತಿ ಕೈಗೊಂಡು ಅಭಿಯಾನ ಯಶಸ್ವಿಗೊಳಿಸಲು ಸಹಕಾರ ನೀಡಿದರೆ ನಿಗದಿತ ಗುರಿಯನ್ನು ಸಾಧಿಸಬಹುದು ಎಂದರು