ನಿರ್ವಹಣೆ ಕೊರತೆಯಿಂದ ಬಳಲುತ್ತಿರುವ ಉದ್ಯಾನವನ : ಅಧಿಕಾರಿಗಳ ನಿರ್ಲಕ್ಷ್ಯ
ಕಂಪ್ಲಿ 22: ಪಟ್ಟಣದ ಕೊಟ್ಟಾಲ್ ರಸ್ತೆಯ ಕಾಲುವೆ ಬಳಿಯಲ್ಲಿರುವ ಉದ್ಯಾನವು ನಿರ್ವಹಣೆಯ ಕೊರತೆಯಿಂದಾಗಿ ಅಧ್ವಾನವಾಗಿದೆ. ಸ್ಥಳೀಯರ ವಾಯು ವಿಹಾರಕ್ಕೆ, ಮಕ್ಕಳ ಆಟಕ್ಕೆ ಹಾಗೂ ಯುವಜನರು ಸಮಯ ಕಳೆಯುವ ತಾಣದಲ್ಲಿ ಗಿಡಗಂಟಿ ಬೆಳೆದು ನಿಂತಿದೆ. ಸ್ವಚ್ಛತೆ ಮರೀಚಿಕೆಯಾಗಿದ್ದು ಪಾಳು ಬೀಳುವ ಸ್ಥಿತಿಗೆ ಉದ್ಯಾನ ಬಂದು ನಿಂತಂತಾಗಿದೆ.
ಗಿಡ ಕಂಟಿ, ಮಾಯವಾದ ಸ್ವಚ್ಚತೆ, ತುಕ್ಕಿಡಿದ ಆಟದ ಸಾಮಾಗ್ರಿಗಳು, ಹೀಗೆ ನಾನಾ ಸಮಸ್ಯೆಗಳನ್ನೊಳಗೊಂಡಂತೆ ಸರಿಯಾಗಿ ನಿರ್ವಹಣೆ ಇಲ್ಲದೇ ಅವ್ಯವಸ್ಥೆಯ ಆಗರವಾಗಿ ಮಾರ್ಪಟಟಿರುವುದು ಉದ್ಯಾನವನಲ್ಲಿ ಕಂಡು ಬಂತು. ನಾನಾ ಸಮಸ್ಯೆಗಳ ಕೊರತೆಯಿಂದ ಇಲ್ಲಿನ ಸಾರ್ವಜನಿಕರ ಉದ್ಯಾನವವು ಪಾಳು ಬಿದ್ದಿದೆ. ಈ ಉದ್ಯಾನವನದ ಒಳಹೊಕ್ಕರಂತೂ ಮತ್ತೆ ಅತ್ತ ಮುಖ ಹಾಕುವ ಸ್ಥಿತಿಯಿಲ್ಲ. ಕಂಪ್ಲಿ ಪುರಸಭೆ ಅಧೀನದಲ್ಲಿದ್ದರೂ ಅದರ ಸರಿಯಾದ ನಿರ್ವಹಣೆ ಇಲ್ಲದೇ ಇರುವುದರಿಂದ ನಳನಳಿಸುತ್ತಿರಬೇಕಾದ ಉದ್ಯಾನವನ ಸೊರಗಿ ಅಸಹ್ಯ ವಾತಾವರಣ ಸೃಷ್ಟಿ ಮಾಡುತ್ತಿವೆ.
ಚೆಂದದ ಹೂ ಗಿಡಗಳು ಆಕರ್ಷಕವಾಗಿರಬೇಕಾದ ಉದ್ಯಾನವನದಲ್ಲಿ ಅನಗತ್ಯವಾಗಿ ಬೆಳೆದು ನಿಲ್ಲುವ ಗಿಡಗಂಟಿಗಳು ಇಲ್ಲಿ ಬೆಳೆದು ನಿಂತಿವೆ. ಒಣಗಿದ ಗಿಡಗಳ ರಾಶಿ, ಕಸಗಳ ಆವಾರದಲ್ಲಿ ತುಂಬಿವೆ. ಇಲ್ಲಿ ಕೆಲ ತೆಂಗಿನ ಗಿಡಗಳನ್ನು ಹೊರತುಪಡಿಸಿದರೇ ಬೇರೆನೂ ಇಲ್ಲಿ ಕಾಣಸಿಗದು. ಇಲ್ಲಿನ ಗಿಡಗಳಿಗೆ ಪ್ರಕೃತಿಯ ನೀರೇ ಗತಿ ಎಂಬಂತಾಗಿದೆ. ಎಲ್ಲಿ ನೋಡಿದರೂ, ಮುಳ್ಳಿನ ಗಿಡಗಳು ಆವರಿಸಿಕೊಂಡಿದ್ದು, ಇದರಿಂದ ಇಲ್ಲಿನ ಆಸನಗಳಲ್ಲಿ ಜನರು ಕೂರುವದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇಲ್ಲಿನ ಉದ್ಯಾನಕ್ಕೆ ರಕ್ಷಣೆ ಇಲ್ಲದಂತಾಗಿದ್ದು, ಉಪಕರಣಗಳು ಕಳ್ಳರ ಪಾಲಾಗಿ, ಗುಜುರಿ ಸೇರುತ್ತಿವೆ. ಈ ಎಲ್ಲಾ ಸಮಸ್ಯೆಗಳಲ್ಲಿ ಉದ್ಯಾನವು ಬಳಲುತ್ತಿದ್ದು, ಇದರ ಜವಾಬ್ದಾರಿ ಹೋರಬೇಕಾದ ಪುರಸಭೆಗೆ ಇದು ನಮಗೆ ಸಂಬಂಧವಿಲ್ಲ ಎನ್ನುವಂತಾಗಿದೆ.
ಇಲ್ಲಿನ ಆಟದ ಉಪಕರಣಗಳು ತುಕ್ಕು ಹಿಡಿದು ಹಾಳಾಗುತ್ತಿವೆ. ಕೆಲವೊಂದು ಉಪಕರಣಗಳು ಕಳ್ಳರ ಪಾಲಾಗಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬಹಳಷ್ಟು ಜನರಿಗೆ ಇಲ್ಲಿ ಉದ್ಯಾನವನ ಇದೆ ಎಂಬುದೇ ಗೊತ್ತಿಲ್ಲ. ಗೊತ್ತಾದರೂ ಇದು ಉದ್ಯಾನವನವೇ ಎಂದು ಪ್ರಶ್ನಿಸುವ ಸ್ಥಿತಿಯಿದೆ. ಇಷ್ಟಿದ್ದರೂ ಒಮ್ಮೆ ನೋಡಿ ಬರೋಣ ಎಂದು ಉದ್ಯಾನದೊಳಗೆ ಸಾಗಿದರೆ ಇಲ್ಲಿನ ಮುಖವಾಡ ಕಳಚಿ ಬೆರಗಾಗುವಂತಾಗುತ್ತದೆ.
ಒಂದಷ್ಟು ಹಸಿರು ಉದ್ಯಾನವನಗಳಿಲ್ಲದೇ ಇರುವುದು ವಾಯು ವಿಹಾರಿಗಳು ವ್ಯಥೆ ಪಡುವಂತೆ ಮಾಡಿದೆ. ಇನ್ನಾದರೂ ಪುರಸಭೆಯವರು ಉದ್ಯಾನವನದ ಸ್ಥಿತಿಯನ್ನು ಸುಧಾರಿಸಿ ನಿರಂತರವಾಗಿ ಜನ ಕಣ್ಣೋಟ ಬೀರುವಂತೆ ರೂಪಿಸುವುದು, ನಿರ್ವಹಣೆ ಮಾಡುವುದು ಒಳಿತು. ಆನೈತಿಕ ಚಟುವಟಿಕೆಗೆ ಉದ್ಯಾನ : ಇಲ್ಲಿನ ಉದ್ಯಾನವು ಸಂಪೂರ್ಣವಾಗಿ ಮುಳ್ಳುಕಂಟಿಗಳಲ್ಲಿ ಮುಳುಗಿದ್ದು, ರಾತ್ರಿಯಾದ್ರೆ ಸಾಕು ಆನೈತಿಕ ಚಟುವಟಿಕೆಯ ತಾಣವಾಗುತ್ತಿದೆ. ಇಲ್ಲಿ ಮದ್ಯದ ಬಾಟಲಿಗಳು ಎಲ್ಲೆಂದರಲ್ಲಿ ಬಿದ್ದಿವೆ. ಆಟದ ಉಪಕರಣಗಳು ಪೊದೆಗಳಲ್ಲಿ ಮಾಯವಾಗಿವೆ.
ಸುತ್ತಲು ಹಾಕಿದ ತಂತಿ ಬೇಲಿ ಕಿತ್ತಿ ಹೋಗಿದೆ. ಇಲ್ಲಿ ಹಾವುಗಳ ವಾಸಸ್ಥಾನವಾಗಿದೆ. ಸರ್ಕಾರ ಉದ್ಯಾನದ ಅಭಿವೃದ್ಧಿಗೆ ಮುಜಾಗ್ರತೆವಹಿಸಿದರೂ, ಇಲ್ಲಿನ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಉದ್ಯಾನವು ಅವನತಿಯತ್ತ ಸಾಗುವಂತಾಗಿದೆ. ಕಂಪ್ಲಿ-ಕೊಟ್ಟಾಲ್ ಮುಖ್ಯರಸ್ತೆ ಬದಿಯಲ್ಲಿ ಇರುವುದರಿಂದ ದಿನನಿತ್ಯದ ವಾಯು ವಿಹಾರಕ್ಕೆ ಹಾಗೂ ಬೇಸಿಗೆ ಸಮಯದಲ್ಲಿ ಬರುವ ಜನರಿಗೆ ಇದೊಂದೆ ಉದ್ಯಾನವಾಗಿದ್ದು, ಆದರೆ, ಇಲ್ಲಿನ ಅವ್ಯವಸ್ಥೆ ನೋಡಿದರೆ, ಯಾರು ಬಾರದಂತ ಸ್ಥಿತಿ ನಿರ್ಮಾಣವಾಗಿದೆ.
ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಕಂಪ್ಲಿ ಕ್ಷೇತ್ರ ಅಧ್ಯಕ್ಷ ಸಿ.ಎ.ಚನ್ನಪ್ಪ ಮಾತನಾಡಿ, ಬಹಳ ಹಿಂದೆ ಇಲ್ಲಿ ಉದ್ಯಾನ ನಿರ್ಮಿಸಿದೆ. ಇಲ್ಲಿನ ಉದ್ಯಾನದಲ್ಲಿ ಕೆಲ ಉಪಕರಣಗಳನ್ನು ಉದ್ಯಾನದಲ್ಲಿ ಅಳವಡಿಸಲಾಗಿದೆ. ಆ ಪೈಕಿ, ಒಂದೆರಡರನ್ನು ಬಿಟ್ಟರೆ ಬಹುತೇಕ ಉಪಕರಣಗಳು ಹಾಳಾಗಿವೆ. ಸ್ಥಳದಲ್ಲಿ ಹುಲ್ಲು ಮತ್ತು ಕಳೆ ಹಾಗೂ ಮುಳ್ಳಿನ ಗಿಡಗಳು ಬೆಳೆದಿರುವುದರಿಂದ ಮಕ್ಕಳನ್ನು ಆಟವಾಡಲು ಕಳಿಸಲು ಭಯವಾಗುತ್ತದೆ. ಉದ್ಯಾನವನ್ನು ನಿತ್ಯ ಸ್ವಚ್ಛಗೊಳಿಸಲು ಸಾಧ್ಯವಾಗದಿದ್ದರೆ, ಕನಿಷ್ಠ ಎರಡು ದಿನಕ್ಕೊಮ್ಮೆಯಾದರೂ ಸ್ವಚ್ಛಗೊಳಿಸಬೇಕು. ಆಗ ಮಾತ್ರ ಆಕರ್ಷಣೀಯವಾಗಿರುತ್ತದೆ. ಇಲ್ಲದಿದ್ದರೆ, ಉದ್ಯಾನ ಇದ್ದೂ ನಾಗರಿಕರ ಪ್ರಯೋಜನಕ್ಕೆ ಬಾರದಂತಾಗುತ್ತದೆ’. ಕೂಡಲೇ ಅಧಿಕಾರಿಗಳು ಗಮನ ಹರಿಸಿ, ಉದ್ಯಾನವನಗಳ ಅಭಿವೃದ್ಧಿಗೆ ಮುಂದಾಗಬೇಕು. ಇಲ್ಲವಾದಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಡಿ.001: ಪಟ್ಟಣದ ಕೊಟ್ಟಾಲ್ ರಸ್ತೆಯಲ್ಲಿರುವ ಉದ್ಯಾನವನವು ಮುಳ್ಳುಗಿಡಗಲ್ಲಿ ಪಾಳು ಬೀಳುವ ಸ್ಥಿತಿಗೆ ತಲುಪಿರುವುದು.