ಪಾಲಕರು ಮಕ್ಕಳನ್ನು ವಿದ್ಯಾರ್ಜನೆಗೆ ಪ್ರೋತ್ಸಾಹಿಸಿ, ಭವಿಷ್ಯದ ಕನಸುಕಟ್ಟಿಕೊಡಿ: ಜಿಲ್ಲಾಧಿಕಾರಿ ದಿವ್ಯ ಪ್ರಭು

Parents should encourage children to study and dream of future: District Collector Divya Prabhu

ಪಾಲಕರು ಮಕ್ಕಳನ್ನು ವಿದ್ಯಾರ್ಜನೆಗೆ ಪ್ರೋತ್ಸಾಹಿಸಿ, ಭವಿಷ್ಯದ ಕನಸುಕಟ್ಟಿಕೊಡಿ: ಜಿಲ್ಲಾಧಿಕಾರಿ ದಿವ್ಯ ಪ್ರಭು 

ಹುಬ್ಬಳ್ಳಿ 8: ಮನೆಯೆ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು ಎನ್ನುವುದು ಬಹಳ ಮುಖ್ಯವಾದ ಸಂದೇಶವಾಗಿದೆ, ನಮ್ಮ ಮಕ್ಕಳಿಗೆ ತಮ್ಮ ಪ್ರಯತ್ನಗಳನ್ನು ಮತ್ತು ಸಾಧನೆಗಳನ್ನು ಶ್ಲಾಘಿಸಿ, ಪ್ರೋತ್ಸಾಹ ನೀಡಿ. ಅವರಿಗೆ ಈ ಪ್ರಪಂಚದಲ್ಲಿ ಯಶಸ್ಸು ತಲುಪಲು ಬೇಕಾದ ಸಾಮರ್ಥ್ಯವಿದೆ ಎಂದು ತೋರಿಸಿಕೊಡಿ, ಮಕ್ಕಳಿಗೆ ಅರ್ಥವಾಗುವಂತಹ ರೀತಿಯಲ್ಲ ಓಡನಾಡುತ್ತ, ಜೀವನದ ಗುರಿಗಳನ್ನು ತಿಳಿಸಿ. ಅವರಲ್ಲಿ ಸದಾ ಆಶಾವಾದ ಇರುವಂತೆ, ಅವರು ಮಾಡುವ ನಿಜವಾದ ಪ್ರಯತ್ನ ಮತ್ತು ಸಾಧನೆಗಳನ್ನು ಎಷ್ಟೇ ಚಿಕ್ಕದು ಇದ್ದರೂ ಪ್ರೋತ್ಸಾಹಿಸಿ ಅದರಲ್ಲೂ ಬಾಲಕರಿಗೆ ಸೂಕ್ತ ಪ್ರಮಾಣದಲ್ಲಿ ಪ್ರಶಂಸೆ ನೀಡಿ.ಮಕ್ಕಳುನಿಮ್ಮನ್ನೇ ಅನುಕರಣೆ ಮಾಡುತ್ತಾರೆ,  

ಹಾಗಾಗಿ ನೀವೇ ಸ್ವಯಂ ಮಾದರಿ ಆಗಿರಿ. ಅಂದರೆ ನೀವೂ ಅವರೊಟ್ಟಿಗೆ ಓದಿರಿ, ಮಾತನಾಡಿರಿ, ಸಮಯ ವ್ಯರ್ಥವಾಗದಂತೆ ಮೇಲ್ವಿಚಾರಣೆ ಮಾಡಿರಿ, ಮತ್ತೆ ಅವರ ಅಭ್ಯಾಸದಲ್ಲಿ ಏನಾದರೂ ಕಠಿಣ ಅನಿಸಿದಾಗ,  ಮಧ್ಯದಲ್ಲಿ ಸಣ್ಣ ಬಿಡುವುಗಳನ್ನು ಕೊಡಿ. ಅವರು ಹೊಸ ಮಾಹಿತಿಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ. ನೀವು ಓದದೇ ಇರಬಹುದು ಆದರೆ ನಿಮ್ಮ ಮಕ್ಕಳಿಗೆ ಮನೆಯಲ್ಲಿ ಅಧ್ಯಯನಕ್ಕೆ ಉತ್ತಮವಾದ ಪರಿಸರವನ್ನು ಒದಗಿಸಿ. ಚಿತ್ತಾಸಕ್ತಿಯನ್ನು ಹೆಚ್ಚಿಸುವ ಹಾಗೂ ಯಾವುದೇ ಅಡಚಣೆಗಳನ್ನು ಕಡಿಮೆ ಮಾಡುವಂತಹ ಸ್ಥಿತಿಯನ್ನು ಸೃಷ್ಟಿಸಿ, ಮಕ್ಕಳಿಗೆ ಸಮಯ ನಿರ್ವಹಣೆ, ದಿನಚರಿ ಹಾಗೂ ಅಧ್ಯಯನಕ್ಕೆ ನೀಡುವ ಪ್ರಾಶಸ್ತ್ಯವನ್ನು ಕಲಿಸಿ. ಅವರ ಸಹಾಯಕ್ಕೆ ಅವರ ವಿದ್ಯಾರ್ಥಿ ಜೀವನವನ್ನು ಉತ್ತಮಗೊಳಿಸಲು ಪೂರಕವಾದ ನಿಯಮಗಳನ್ನು ಅನುಸರಿಸಿ. ನಿಮ್ಮ ಜೀವನದ ಅನುಭವದ ಪ್ರೇರಣಾದಾಯಕ ಕಥೆಗಳನ್ನು ಆಗಾಗ ನಿಮ್ಮ ಮಕ್ಕಳಿಗೆ ಹೇಳಿರಿ, ಅಲ್ಲದೇ  ಯಶಸ್ವೀ ವ್ಯಕ್ತಿಗಳ ಕಥೆಗಳ ಮೂಲಕ ಮಕ್ಕಳಿಗೆ ಪ್ರೇರಣೆಯನ್ನು ಒದಗಿಸಿರಿ. ಇದರಿಂದ ಅವರು ನಂಬಿಕೆ ಹೊಂದಿ ತಮ್ಮ ಗುರಿಗಳನ್ನು ತಲುಪಲು ಸಹಾಯವಾಗುತ್ತದೆ. ಶಿಕ್ಷಕರೊಡನೆ ಮಕ್ಕಳ ಕಲಿಕಾ ನ್ಯೂನತೆಗಳ ಬಗ್ಗೆ ಚರ್ಚಿಸಿ, ಶಾಲೆಗೆ ತಪ್ಪದೇ ಮಕ್ಕಳನ್ನು ಕಳುಹಿಸಿರಿ,  ಹೀಗೆಲ್ಲಾ ಮಾಡುವುದರ ಮೂಲಕ ಪಾಲಕರು ನಿಮ್ಮ ಮಕ್ಕಳ ವಿದ್ಯಾರ್ಜನೆಗೆ ಭವಿಷ್ಯದ ಕನಸು ಕಟ್ಟಿಕೊಡಿರಿ” ಎಂದು ಧಾರವಾಡ ಜಿಲ್ಲಾದಿಕಾರಿಗಳಾದ ದಿವ್ಯಪ್ರಭು ಅವರು ಕುಸುಗಲ್ಲ ಗ್ರಾಮದ ಮಕ್ಕಳ ಪಾಲಕರಿಗೆ ಕರೆ ಕೊಟ್ಟರು. 

ಅವರು ಇಂದು ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹುಬ್ಬಳ್ಳಿ ಗ್ರಾಮೀಣ ವಲಯ, ಸರಕಾರಿ ಪ್ರೌಢಶಾಲೆಯ ಸಭಾಭವನದಲ್ಲಿ ಎಸ್‌.ಎಸ್‌.ಎಲ್ ಸಿ. ವಿದ್ಯಾರ್ಥಿಗಳಿಗಾಗಿ ಗುಣಾತ್ಮಕ ಫಲಿತಾಂಶ ಸುಧಾರಣೆಗಾಗಿ ಆಯೋಜಿಸಿದ್ದ, ಯಶೋವಿಶ್ವಾಸ 2025 ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳ ಪಾಲಕರೊಡನೆ ನೇರ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. 

ಹುಬ್ಬಳ್ಳಿ ತಹಶೀಲ್ದಾರ ಮಜ್ಜಗಿ, ಗ್ರಾಮಪಂಚಾಯತಿ ಅಧ್ಯಕ್ಷೆ ನೇತ್ರಾವತಿ ಸುಂಕದ, ಎಸ್ ಡಿಎಮ್ ಸಿ ಉಪಾಧ್ಯಾಕ್ಷ ಕಲ್ಲನಗೌಡ ಕೌಜಗೇರಿ, ಜಿಲ್ಲಾ ಸಾಕ್ಷರತಾ ಅಧಿಕಾರಿ ಜಯಶ್ರೀ ವರೂರ, ಶಿಕ್ಷಣಾಧಿಕಾರಿ ದಾಲಸಾಬನವರ, ಪ್ರಭಾರ ಬಿಇಓ ಎಮ್‌.ಎಸ್‌.ಶಿವಳ್ಳಿಮಠ, ಸಂತೋಷ ದಂಡಗಲ್, ಪಿಡಿಓ ಶಶಿಧರ ಮಂಟೂರ, ಗ್ರಾಮಪಂಚಾಯತಿಯ ಸದಸ್ಯರುಗಳು, ಎಸ್‌ಡಿಎಮ್‌ಸಿ ಪದಾಧಿಕಾರಿಗಳು, ಪಾಲಕರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.  

ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯಣಿ ಶಿವಲೀಲಾ ಕಳಸಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾನುಮತಿ ಆಡಗಲ್ಲ, ಗುರುನಾಥ ಬರದೇಲಿ, ಐ.ಎಂ.ಇಳಕಲ್ಲ, ಅಮೀರಾಬಾನುದಲಾಲ, ಪ್ರೀತಾಫನಾಂರ್ಡಿಸ್, ಸುರೇಶ ನಾಯ್ಕ, ಪ್ರಭಾಕರ ಪತ್ತಾರ, ಸುಮಾ, ಉಪಸ್ಥಿತರಿದ್ದರು.  

ಸಂಜೀವಕುಮಾರ ಭೂಶೆಟ್ಟಿ ನಿರೂಪಿಸಿದರು, ಸುರೇಶ ನಾಯ್ಕ ವಂದಿಸಿದರು, ಲೋಕೇಶ ಡಿ. ಸ್ವಾಗತಿಸಿದರು.