ಹಾವೇರಿ ಜುಲೈ 08: ಕೊರೊನಾ ಮಹಾಮಾರಿಯಿಂದಾಗಿ ಎಲ್ಲಾ ಕ್ಷೇತ್ರಗಳ ಮೇಲೆ ಅಪಾರವಾದ ಪರಿಣಾಮ ಬೀರಿದೆ. ಅದರಲ್ಲಿಯೂ ಶಿಕ್ಷಣ ಕ್ಷೇತ್ರದ ಮೇಲೆ ಅಪಾರ ವಾದ ಪರಿಣಾಮ ಬೀರಿದೆ.
ಎಲ್ಲ ಶಾಲೆಗಳ ಬಾಗಿಲು ತೆರೆದು ವಿದ್ಯಾರ್ಥಿಗಳ ಬರುವಿಕೆಗಾಗಿ ಜಾತಕ ಪಕ್ಷಿಯಂತೆ ಕಾಯ್ದುಕೊಂಡು ಕುಳಿತಿರುವ ಶಿಕ್ಷಕರು. ಈಗಾಗಲೇ ಸರಿ ಸುಮಾರು ಒಂದು ತಿಂಗಳವಾಗುತ್ತ ಬರುತ್ತಿದೆ. ಶಿಕ್ಷಕರು ಶಾಲೆಯಲ್ಲಿ ಬಂದು ಕುಳಿತು ಹೋಗುವಂತಾಗುತ್ತಿದೆ. ಜೊತೆಗೆ ಶಾಲೆಯಲ್ಲಿ ಯೇ ಅವರಿಗೆ ಆನ್ಲೈನ್ ತರಬೇತಿ ನಡೆಯುತ್ತಿದೆ. ಆದರೆ ವಿದ್ಯಾರ್ಥಿಗಳು ಮನೆಯಲ್ಲಿಯೇ ಕುಳಿತು ಆಟೋಟಗಳಲ್ಲಿಯೇ ಕಾಲ ಕಳೆಯುವಂತಾಗಿದೆ.
ಆಗಸ್ಟನಲ್ಲಿ ಶಾಲೆ ಪ್ರಾರಂಭವಾಗುವುದು ಡೌಟು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ಆಗಸ್ಟ್ನಲ್ಲಿ ಇನ್ನೂ ಹೆಚ್ಚಾಗುವ ಸಾದ್ಯತೆ ಇದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳ ಹೇಳಿದ್ದಾರೆ. ಆಗಸ್ಟ್ನಲ್ಲಿ ಶಾಲೆ ಪ್ರಾರಂಭವಾಗುವುದು ಅನುಮಾನ.
ಆನ್ಲೈನ್ ಕಲಿಕೆಗೆ ವಿರೋಧ: ಈಗಾಗಲೇ ಸರ್ಕಾರ 1ರಿಂದ 5ನೇ ತರಗತಿಯವರೆಗೆ ಆನ್ಲೈನ್ ಶಿಕ್ಷಣ ರದ್ದುಪಡಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಈಗ ಖಾಸಗಿ ಶಾಲೆಗಳ ಒತ್ತಾಯಕ್ಕೆ ಮಣಿದು ಆನ್ಲೈನ್ ಶಿಕ್ಷಣಕ್ಕೆ ಅಸ್ತು ಎಂದಿದೆ. ಸರಕಾರದ ಗೊಂದಲ ಮಯವಾದ ಆದೇಶದಿಂದ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ, ಪಾಲಕರಿಗೆ ಕಿರಿಕಿರಿಯುಂಟಾಗಿದೆ.
ಶಾಲೆಗೆ ಶಿಕ್ಷಕರು ಬಂದು ತಮ್ಮ ಆನ್ಲೈನ್ ತರಬೇತಿ ಅವಧಿ ಹೊರತುಪಡಿಸಿ ಉಳಿದ ಸಮಯದಲ್ಲಿ ಗ್ರಾಮದ ತಮ್ಮ ವಿದ್ಯಾರ್ಥಿಗಳ ಮನೆಗೆ ತೆರಳಿ ಐದಾರು ಮಕ್ಕಳನ್ನು ಸಮಾಜಿಕ ಅಂತರ ಕಾಯ್ದುಕೊಂಡು ಅವರಿಗೆ ಬೋಧನೆ ಮಾಡಿ ಹೋಮ್ವರ್ಕನೀಡಿ ಬಂದರೆ ಉತ್ತಮವಾದ ಕಾರ್ಯವಾಗುತ್ತದೆ.
- ನಾಗಪ್ಪ ಕಟ್ಟೆಣ್ಣನವರ ವಿದ್ಯಾರ್ಥಿ ಪೋಷಕರು
ಶಾಲೆಯಲ್ಲಿ ಮಕ್ಕಳು ಸರಿಯಾಗಿ ಕಲಿಯುವುದೇ ದುರ್ಲಭ. ಇನ್ನು ಆನ್ಲೈನ್ನಲ್ಲಿ ಕಲಿಯುವುದು ದೂರದ ಮಾತು. ಜೊತೆಗೆ ಅನೂಕಲಸ್ಥರ ಬಳಿ ಸ್ಮಾರ್ಟ್ಫೋನ್ಗಳಿವೆ. ಆದರೆ ಬಡಕೂಲಿ ಕಾರ್ಮಿಕರ ಮಕ್ಕಳ ಗತಿಯೇನು ? ಹೀಗಾಗಿ ಆನ್ಲೈನ್ ಅವೈಜ್ಞಾನಿಕ ವಿಧಾನವಾಗಿದ್ದು, ಇದು ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಮನೋವೈದ್ಯರ ಅಭಿಪ್ರಾಯವಾಗಿದೆ. ಸರ್ಕಾರ ಆನ್ಲೈನ್ ಶಿಕ್ಷಣ ಕುರಿತು ನೀಡಿದ ತನ್ನ ಆದೇಶ ಮರುಪರಿಶೀಲಿಸಬೇಕೆಂಬುದು ಪಾಲಕರ ಒತ್ತಾಯವಾಗಿದೆ.
"ಈಗಾಗಲೇ ಶಾಲೆಗಳು ಪ್ರಾರಂಭವಾಗಿ ತಿಂಗಳೇ ಕಳೆದರೂ ಶಿಕ್ಷಕರು ಮಾತ್ರ ಶಾಲೆಗೆ ಬರುತ್ತಿದ್ದು, ಮಕ್ಕಳು ಮನೆಯಲ್ಲಿ ಉಳಿಯುವಂತಾಗಿದೆ. ಹೀಗಾಗಿ ಮಕ್ಕಳು ಈಗಾಗಲೇ ಕಲಿತ ಪಾಠಗಳನ್ನು ಮರೆತಂತಾಗಿದೆ. ಕೇವಲ ಆಟೋಟಗಳಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ. ಹಾಗಾಗಿ ಶೀಘ್ರವೇ ಸರಕಾರ ಮಕ್ಕಳ ಕಲಿಕೆ ಕುಂಠಿತವಾಗದಂತೆ ಹಾಗೂ ಯಾರಿಗೂ ಹೊರೆಯಾಗದಂತಹ ಸೂಕ್ತ ಕ್ರಮಗಳನ್ನು ಅನುಸರಿಸಿ ಮಕ್ಕಳ ಕಲಿಕೆ ಪ್ರಗತಿಗೆ ಸಹಕರಿಸಲಿ." - ರವಿಚಂದ್ರ ಎನ್.ಬಾಲಣ್ಣನವರ ನೆಗಳೂರ ಗ್ರಾಮಸ್ಥ