ಅಂಗನವಾಡಿ ಬಾಲಕಿ ಸಾವಿನ ತನಿಖೆಗೆ ಸಂಘಟನೆಗಳ ಒತ್ತಾಯ

Organizations insist on investigation into Anganwadi girl's death

ಅಂಗನವಾಡಿ ಬಾಲಕಿ ಸಾವಿನ ತನಿಖೆಗೆ ಸಂಘಟನೆಗಳ ಒತ್ತಾಯ

ಮುಂಡಗೋಡ 02: ಮುಂಡಗೋಡ ಮಾರಿಕಾಂಬಾ ನಗರದ ಐದು ವರ್ಷದ ಅಂಗನವಾಡಿ ಬಾಲಕಿ ಮಯೂರಿ ಸುರೇಶ ಕುಂಬಳೆಪ್ಪನವರ ಸಾವಿನ ಬಗ್ಗೆ ತನಿಖೆ ನಡೆಸಲು ತಾಲೂಕಿನ ವಿವಿಧ ಸಂಘಟನೆಗಳು ಜನಸ್ಪೂರ್ತಿ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟದ ಮೂಲಕ ತಹಶೀಲ್ದಾರರವರನ್ನು ಒತ್ತಾಯಿಸಿ ಮನವಿ ಸಲ್ಲಿಸಿದರು.   

 ತಾಲೂಕಾ ಆಸ್ಪತ್ರೆಯಲ್ಲಿ ಯಾವುದೇ ಪ್ರಥಮ ಚಿಕಿತ್ಸೆ ಕೊಡಿಸದೇ ಎರಡು ತಾಸು ಚಿಕಿತ್ಸೆಯ ನೆಪದಲ್ಲಿ ವಿಳಂಬ ಮಾಡಿ, ಕೆಎಮ್ ಸಿ..ಗೆ ಕರೆದುಕೊಂಡು ಹೋಗಿ ಎಂದು ಹೇಳಿದ ತಾಲೂಕಾ ಆಸ್ಪತ್ರೆಯ ಮುಖ್ಯಸ್ಥರು ಹಾಗೂ ಅಂಗನವಾಡಿಯ ಶೌಚಾಲಯ ಬಳಸಲು ಮಕ್ಕಳಿಗೆ ಅವಕಾಶ ಕೊಡದೇ ಹೊರಗಡೆ ಮೂತ್ರ ವಿಸರ್ಜನೆಗೆ ಕಳಿಸಿದ ಅಂಗನವಾಡಿ ಸಿಬ್ಬಂದಿಗಳ ಮೇಲ್ವಿಚಾರಕರಾದ ಸಿಡಿಪಿಒ., ವಿರುದ್ಧ ಸಂಘಟನೆಗಳು ಆಕ್ರೋಶ ವ್ಯಕ್ತ ಪಡಿಸಿ ತ್ವರಿತ ತನಿಖೆಗೆ ಹಾಗೂ ಸೂಕ್ತ ಕ್ರಮಕ್ಕೆ ಆಗ್ರಹಿಸಿದೆ. 

   ಮಗುವನ್ನು ತಕ್ಷಣ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕಳಿಸಿದರೂ ಕೂಡಾ, ಚಿಕಿತ್ಸೆ ನೀಡದೇ ಕೆಎಮ್ ಸಿ.ಗೆ ಕಳಿಸಿದ್ದು, ಯಾಕೆ? ಲೈಫ್ ಸೇವಿಂಗ್ ಡ್ರಗ್ಸ್‌ (ವಿಷದ ಹಾವು ಕಡಿತದಿಂದ ಜೀವ ರಕ್ಷಣೆಗೆ) ತಾಲೂಕಾ ಸರಕಾರಿ ಆಸ್ಪತ್ರೆಯಲ್ಲಿ ಇರಲಿಲ್ಲವೇ? ಅಥವಾ ಪರಿಣಿತ ಸಿಬ್ಬಂದಿ ಇರಲಿಲ್ಲವೇ? ಎಂಬುದರ ಬಗ್ಗೆಯೂ ತನಿಖೆ ನಡೆಸಲು ಕೋರಿದೆ ಎಂದು ಜನಸ್ಪೂರ್ತಿ ಒಕ್ಕೂಟದ ಮಹಾಲಕ್ಷ್ಮಿ ನಾಯ್ಕ ಹೇಳಿದರು.   ಅಂಗನವಾಡಿಯಲ್ಲಿದ್ದ ಮಕ್ಕಳು ಸುರಕ್ಷಿತವಾಗಿರಲಿಲ್ಲ. ಹೊಲದ ಪಕ್ಕ ಇದ್ದ, 40ಕ್ಕಿಂತ ಹೆಚ್ಚಿನ ಮಕ್ಕಳು ಇರುವ ಅಂಗನವಾಡಿಗೆ ಕಂಪೌಂಡ ಇರಲಿಲ್ಲ. ಅಂಗನವಾಡಿಯಲ್ಲಿ ಮಕ್ಕಳ ಸುರಕ್ಷತೆ, ಸ್ವಚ್ಚತೆ, ಶೌಚಾಲಯ ಮುಂಡಗೋಡ ದ ಬಳಕೆಗೆ ಮಕ್ಕಳಿಗೆ ನಿಷೇಧ ಈ ಬಗ್ಗೆ ಬಾಲವಿಕಾಸ ಸಮಿತಿ ಹಾಗೂ ಅಂಗನವಾಡಿ ಮೇಲ್ವಿಚಾರಕರು ಕ್ರಮ ಜರುಗಿಸಿಲ್ಲ. ಈ ಬಗ್ಗೆ ತನಿಖೆ ನಡೆಸಲು ವಿನಂತಿಸಿದ್ದೇವೆ ಎಂದು ತಾಲೂಕಾ ಯುವ ವೇದಿಕೆ ಒಕ್ಕೂಟದ ಅಧ್ಯಕ್ಷ ತನ್ನೀರ್ ಮಿರ್ಜಾನಕರ್ ವಿವರಿಸಿದರು.  

  ಸಾಮಾಜಿಕ ಸುರಕ್ಷಾ ಜನವೇದಿಕೆ, ಕರ್ನಾಟಕ ತನ್ನ ಅಧ್ಯಯನ ವರದಿಯ ಶಿಫಾರಸ್ಸಿನ ಅನ್ವಯ ಅಂಗನವಾಡಿಗಳಲ್ಲಿ ಮೂಲಭೂತ ಸೌಕರ್ಯಗಳಿಗಾಗಿ ಒತ್ತಾಯಿಸಿ, ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಿಗೆ ಅಗಸ್ಟ 23,2024 ರಲ್ಲಿ ಸಲ್ಲಿಸಿದ ಮನವಿಯ ಮೇಲೆ ತುರ್ತು ಕ್ರಮ ಜರುಗಿಸಲು ಜಿಲ್ಲಾಧಿಕಾರಿಯವರ ಮೂಲಕ ಕರ್ನಾಟಕ ಸರಕಾರ, ಬೆಂಗಳೂರು ಇವರಿಗೆ ತಿಳಿಸಲು ಮನವಿಯಲ್ಲಿ ಕೋರಲಾಗಿದೆ.  

  ಮೃತ ಬಾಲಕಿ ಮಯೂರಿಯ ಪಾಲಕರೂ ಸೇರಿದಂತೆ ಮಾರಿಕಾಂಬಾನಗರದ ಪಾಲಕ-ಪೋಷಕರು ಜನವೇದಿಕೆ, ಸ್ವ-ಸಹಾಯ ಗುಂಪುಗಳ ಸದಸ್ಯರು, ಯುವ ವೇದಿಕೆ, ಕಟ್ಟಡ ಕಾರ್ಮಿಕರ ಸಂಘಟನೆ, ಭೂ- ಹಕ್ಕು ಹೋರಾಟ ಸಮಿತಿ, ಜನಸ್ಪೂರ್ತಿ ಒಕ್ಕೂಟದ ಪದಾಧಿಕಾರಿಗಳು ಸೇರಿದಂತೆ 200 ಕ್ಕೂ ಹೆಚ್ಚಿನ ಜನರು ಸರಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಸಿಡಿಪಿಒ ವಿರುದ್ಧದ ಪ್ರತಿಭಟನೆಯಲ್ಲಿ ತಹಶೀಲ್ದಾರ್ ಕಚೇರಿ ಹಾಗೂ ತಾಲೂಕಾ ಆಸ್ಪತ್ರೆಯಲ್ಲಿ ಹಾಜರಿದ್ದರು.