ಸಂಗೀತ, ನೃತ್ಯ, ಕಲೆಗಳು ಮಾತ್ರ ಮನುಷ್ಯನ ಮನಸ್ಸನ್ನು ಅರಳಿಸಬಲ್ಲವು: ಸಂಗಮೇಶ ಬಬಲೇಶ್ವರ

Only music, dance, and art can blossom the human mind: Sangamesh Babaleshwar

ಸಂಗೀತ, ನೃತ್ಯ, ಕಲೆಗಳು ಮಾತ್ರ ಮನುಷ್ಯನ ಮನಸ್ಸನ್ನು ಅರಳಿಸಬಲ್ಲವು: ಸಂಗಮೇಶ ಬಬಲೇಶ್ವರ

ಧಾರವಾಡ 22 : ಕಲೆ, ಸಾಹಿತ್ಯ, ಸಂಗೀತಕ್ಕೆ ಯಾವತ್ತೂ ಸಾವಿಲ್ಲ.  ಸಂಗೀತ, ನೃತ್ಯ, ಕಲೆಗಳು ಮಾತ್ರ ಮನುಷ್ಯನ ಮನಸ್ಸನ್ನು ಅರಳಿಸಬಲ್ಲವು.  ಇಂತಹ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡುತ್ತಿರುವ ಫ್ರೆಂಡ್ಸ್‌ ಸೋಶಿಯಲ್ ಕ್ಲಬ್‌ನ ಕಾರ್ಯ ಶ್ಲಾಘನೀಯವಾದುದು ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.   

ಧಾರವಾಡದ ಫ್ರೆಂಡ್ಸ್‌ ಸೋಶಿಯಲ್ ಕ್ಲಬ್ ಕೇಂದ್ರ ಸಂಸ್ಕೃತಿ ಮಂತ್ರಾಲಯದ ಸಹಕಾರದಲ್ಲಿ ದಿನಾಂಕ: 21.03.2025ರಂದು ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಏರಿ​‍್ಡಸಿದ್ದ ಸಾಂಸ್ಕೃತಿಕ ಕಲಾ ಪ್ರತಿಭೋತ್ಸವ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಗಮೇಶ ಬಬಲೇಶ್ವರ ಮಾತನಾಡುತ್ತ ಭಾರತೀಯ ತಾಯಿಯು ತನ್ನ ಇಡೀ ಜೀವನವನ್ನು ಮಕ್ಕಳಿಗಾಗಿ, ಬಂಧುಗಳಿಗಾಗಿ, ತನ್ನ ಅವಲಂಬಿತರಿಗಾಗಿ ಸಮರ​‍್ಿಸುವ ತ್ಯಾಗವಿದೆಯಲ್ಲ ಅದು ಜಗತ್ತಿನ ಯಾವುದೇ ನೊಬೆಲ್ ಬಹುಮಾನಕ್ಕಿಂತ ದೊಡ್ಡದಾಗಿದೆ. ಅಂತಹ ತಾಯಿ ಸ್ವರೂಪದ ಮಹಿಳೆಯನ್ನು ನಾವಿಂದು ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಸನ್ಮಾನಿಸಿ ಗೌರವಿಸಿರುವುದು ಭಾರತೀಯ ತಾಯಿಗೆ ನೀಡುವ ಬಹುದೊಡ್ಡ ಗೌರವವಾಗಿದೆ ಎಂದರು.   

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಿ.ಆರ್‌.ಟಿ.ಎಸ್‌. ವ್ಯವಸ್ಥಾಪಕ ನಿರ್ದೇಶಕಿ ಸಾವಿತ್ರಿ ಕಡಿ ಮಾತನಾಡುತ್ತ ಯತ್ರನಾರೆಸ್ತು ಪೂಜ್ಯಂತೆ ರಮಂತೇ ತತ್ರ ದೇವತಾ ಎಂದು ಋಗ್ವೇದ ಕಾಲದಿಂದಲೂ ಸ್ತ್ರೀಯನ್ನು ದೇವತೆಯ ಸ್ಥಾನದಲ್ಲಿ ಕಾಣುತ್ತಾ ಬಂದಿದ್ದಾರೆ.  ಬಸವಾದಿ ಶರಣರ ಕಾಲದಲ್ಲೂ ಸ್ತ್ರೀಗೆ ಉನ್ನತ ಸ್ಥಾನ ಕಲ್ಪಿಸಿದ್ದಾರೆ.  ಇಂದಿನ ಆಧುನಿಕ ಕಾಲದಲ್ಲಿ ಸ್ತ್ರೀ ಎಲ್ಲ ರಂಗಗಳಲ್ಲೂ ಸವಾಲುಗಳನ್ನೆ ಮೆಟ್ಟಿಲುಗಳನ್ನಾಗಿಸಿಕೊಂಡು ಮೇರು ಸಾಧನೆಗೈದಿದ್ದಾರೆ.  ಭಾರತೀಯ ಸಂವಿಧಾನ ಮಹಿಳೆಗೆ ಸಾಕಷ್ಟು ಅವಕಾಶ ಕಲ್ಪಿಸಿದೆ. ಆದರೆ ನಾವಿಂದು ಮಕ್ಕಳನ್ನು ಬೆಳೆಸುವ ಮತ್ತು ಸಮಾಜದಲ್ಲಿ ನಾವಿರುವ ರೀತಿ ಬದಲಾಗಬೇಕಿದೆ.  ಮಕ್ಕಳು ತಮ್ಮಲ್ಲಿರುವ ಸಾಮರ್ಥ್ಯವನ್ನು ಹೊರಹಾಕಬೇಕಿದೆ.  ಶೈಕ್ಷಣಿಕ, ಸಾಹಿತ್ಯಿಕ ಸಾಂಸ್ಕೃತಿಕ ಹಾಗೂ ಆರ್ಥಿಕವಾಗಿ ದೇಶದ ಅಭಿವೃದ್ಧಿಗೆ ಮಹಿಳೆಯ ಕೊಡುಗೆ ಬಹಳಷ್ಟಿದೆ.  ಪುರುಷರಿಗಿಂದ ಹೆಚ್ಚಿನ ಸಾಮರ್ಥ್ಯವನ್ನು ಮಹಿಳೆ ಹೊಂದಿದ್ದಾಳೆ ಎಂದರು.    

ಹಿರಿಯ ನಟ, ನಿರ್ದೇಶಕ ಡಾ.ಶಶಿಧರ ನರೇಂದ್ರ ಮಾತನಾಡಿ ನಾವಿಂದು ಸಂಭ್ರಮದಲ್ಲಿದ್ದೇವೆ.  ಭಾರತ ಸಂಜಾತೆ ಸುನಿತಾ ವಿಲಿಯಮ್ಸ್‌ ವಿಶ್ವ ಭೂಗರ್ಭದಾಚೆ ಸುಮಾರು 9 ತಿಂಗಳುಕಾಲ ನೆಲೆಸಿ, ಮರಳಿ ಭೂಮಿಗೆ ಯಶಸ್ವಿಯಾಗಿ ಆಗಮಿಸಿದ್ದು ಪ್ರಶಂಸನೀಯವಾದುದು. ನಾವಿಂದು ಇಂತಹ ವಿವಿಧ ಕ್ಷೇತ್ರದ ಸಾಧಕರನ್ನು ಸ್ಮರಿಸುವುದು ಓಚಿತ್ಯಪೂರ್ಣವಾಗಿದೆ. ಫ್ರೆಂಡ್ಸ್‌ ಸೋಶಿಯಲ್ ಕ್ಲಬ್ ವಿಧಾಯಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದೆ ಎಂದರು.   

ಕರ್ನಾಟಕ ರೇಶ್ಮೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷತೆ ಸವಿತಾ ಅಮರಶೆಟ್ಟಿ ಮಾತನಾಡುತ್ತ ಕಿತ್ತೂರ ಚನ್ನಮ್ಮ, ಬೆಳವಡಿ ಮಲ್ಲಮ್ಮ, ಒನಕೆ ಓಬವ್ವರಂತ ಧೀರ ಮಹಿಳೆಯರು ಜನಿಸಿದ ನಾಡಿನಲ್ಲಿ ನಾವೆಲ್ಲ ಇದ್ದೇವೆ ಅನ್ನೋದೆ ನಮ್ಮೆಲ್ಲರ ಸೌಭಾಗ್ಯದ ಸಂಗತಿಯಾಗಿದೆ ಎಂದರು.   

ಅಧ್ಯಕ್ಷತೆ ವಹಿಸಿದ್ದ ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅವರು ಮಾತನಾಡುತ್ತ ಫ್ರೆಂಡ್ಸ್‌ ಸೋಶಿಯಲ್ ಕ್ಲಬ್ ಧಾರವಾಡದ ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಕ್ಕೆ ಒಂದು ವಿಶೇಷ ಆಯಾಮವನ್ನು ನೀಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಇಂದು ಎಲ್ಲ ರಂಗಗಳಲ್ಲೂ ಮಹಿಳೆಯರಿಗೆ ಸಮಾನತೆ ಒದಗಬೇಕು ಎಂಬ ಪ್ರಶ್ನಿಸುವ ಮನೋಭಾವನೆ ಬರಬೇಕು ಎಂದರು.      

ಮಲ್ಲಿಕಾರ್ಜುನ ಚಿಕ್ಕಮಠ ನಿರೂಪಿಸಿದರು. ಮಲ್ಲಿಕಾರ್ಜುನ ಸೊಲಗಿ ಪ್ರಾಸ್ತಾವಿಕ ಮಾತನಾಡಿದರು. ವಿನೋದ ಕುಸುಗಲ್ ಸ್ವಾಗತಿಸಿದರು. ಪ್ರಕಾಶ ಬಾಳಿಕಾಯಿ ವಂದಿಸಿದರು.   

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಡಾ.ಪೂರ್ಣಿಮಾ ಮುಕ್ಕುಂದಿ-ಸಂಗೀತ, ವಿದುಷಿ ನಾಗರತ್ನ ಹಡಗಲಿ-ನೃತ್ಯ, ಡಾ.ವೀಣಾ ಬಿರಾದಾರ-ಸಾಮಾಜಿಕ, ಕು.ಅನ್ನಪೂರ್ಣ ಲಿಂಬಿಕಾಯಿ-ಲಲಿತಕಲೆ, ಕು.ಅನನ್ಯ ಶಂಬಯ್ಯ ಹಿರೇಮಠ- ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಅನುಪಮ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.   

ನಂತರ ಜರುಗಿದ ಸಾಂಸ್ಕೃತಿಕ ಕಲಾ ಪ್ರತಿಭೋತ್ಸವದಲ್ಲಿ ಡಾ.ಪೂರ್ಣಿಮಾ ಮುಕ್ಕುಂದಿ ಅವರ ಸುಗಮ ಸಂಗೀತ, ಸಿರಿಗಂಧ ಜಾನಪದ ಕಲಾ ಬಳಗದ ಪ್ರಕಾಶ ಕಂಬಳಿ ಮತ್ತು ಸಂಗಡಿಗರಿಂದ ಜೋಗತಿ ನೃತ್ಯ, ಹರ್ಲಾಪೂರದ ಶರೀಫ ದೊಡ್ಡಮನಿ ಮತ್ತು ತಂಡದಿಂದ ಜಾನಪದ ಗಾಯನ, ವಿದುಷಿ ನಾಗರತ್ನ ಹಡಗಲಿ ಮತ್ತು ತಂಡದಿಂದ ವಚನ ನೃತ್ಯ, ಡಾ.ಗುರುಬಸವ ಮಹಾಮನೆ ಮತ್ತು ತಂಡದಿಂದ ವಯೋಲಿನ್ ವಾದನ, ಯುವ ಡಾನ್ಸ್‌ ಅಕಾಡೆಮಿಯ ರಮೇಶ ಪಾಟೀಲ ಮತ್ತು ತಂಡದಿಂದ ಜಾನಪದ ನೃತ್ಯ, ಡಾ.ಪರಶುರಾಮ ಕಟ್ಟಿಸಂಗಾವಿ, ಸ್ವರಸಂವಾದಿನಿ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಸಮೂಹ ಗಾಯನ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು.  ತಬಲಾದಲ್ಲಿ ದಯಾನಂದ ಸುತಾರ ಹಾಗೂ ಹಾರ್ಮೊನಿಯಂದಲ್ಲಿ ಡಾ.ಪರಶುರಾಮ ಕಟ್ಟಿಸಂಗಾವಿ ಸಾಥ್ ಸಂಗತ ನೀಡಿದರು.