ಒಪ್ಪಿಸಿದ ಜವಾಬ್ದಾರಿ, ಕೆಲಸ ಬಿಟ್ಟು, ದಾರಿ ತಪ್ಪಿ ಬೇರೆಲ್ಲವನ್ನೂ ಮಾಡುತ್ತಿರುವ ಪರಿಣಾಮದಿಂದ ಸಂಕಷ್ಟ ಎದುರಿಸಬೇಕಾಗಿದೆ : ಶ್ರೀನಿವಾಸ ಮಾನೆ

One has to face hardships as a result of leaving responsibility, leaving work, going astray and doi

ಒಪ್ಪಿಸಿದ ಜವಾಬ್ದಾರಿ, ಕೆಲಸ ಬಿಟ್ಟು, ದಾರಿ ತಪ್ಪಿ ಬೇರೆಲ್ಲವನ್ನೂ ಮಾಡುತ್ತಿರುವ ಪರಿಣಾಮದಿಂದ ಸಂಕಷ್ಟ ಎದುರಿಸಬೇಕಾಗಿದೆ : ಶ್ರೀನಿವಾಸ ಮಾನೆ 

ಹಾನಗಲ್ 09: ಭಗವಂತ ನಮಗೆಲ್ಲ ಜವಾಬ್ದಾರಿ, ಕೆಲಸ ಒಪ್ಪಿಸಿದ್ದಾನೆ. ಅದನ್ನು ಶ್ರದ್ಧೆ, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಮಾಡಬೇಕಿದೆ. ಒಪ್ಪಿಸಿದ ಜವಾಬ್ದಾರಿ, ಕೆಲಸ ಬಿಟ್ಟು, ದಾರಿ ತಪ್ಪಿ ಬೇರೆಲ್ಲವನ್ನೂ ಮಾಡುತ್ತಿರುವ ಪರಿಣಾಮದಿಂದ ಸಂಕಷ್ಟ ಎದುರಿಸಬೇಕಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. 

        ತಾಲೂಕಿನ ಮಲ್ಲಿಗಾರ ಗ್ರಾಮದ ಗುರುಸಿದ್ದರಾಮೇಶ್ವರ ದೇವಸ್ಥಾನದಲ್ಲಿ ನೂತನ ಸಮುದಾಯ ಭವನ ಉದ್ಘಾಟಿಸಿ, ಧರ್ಮಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬಸವಣ್ಣ, ಗುರುಸಿದ್ದರಾಮೇಶ್ವರರ ಆದಿಯಾಗಿ ಎಲ್ಲ ಬಸವಾದಿ ಪ್ರಮಥರು ನಮಗೆ ಆ ದಿನಗಳಲ್ಲಿಯೇ ಸಮಾನತೆಯ ಮಹತ್ವ ಸಾರಿದ್ದಾರೆ. ಬೇಧ, ಭಾವ ದೂರ ಮಾಡಿ ಮಾನವೀಯ ಮೌಲ್ಯ ಅಳವಡಿಸಿಕೊಂಡು ಸಾಗಲು ಮಾರ್ಗದರ್ಶನ ಮಾಡಿದ್ದಾರೆ.ಮುಂದಿನ ಪೀಳಿಗೆಯ ಭವಿಷ್ಯಕ್ಕೆ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ. ಧರ್ಮಗಳ ಆಧಾರದಲ್ಲಿ ಜಗಳವಾಡಲು ಚೀನಾ ದೇಶದ ಜನತೆಗೆ ಸಮಯವಿಲ್ಲ. ಹಾಗಾಗಿ ಚೀನಾ ಎಲ್ಲರನ್ನೂ ಹಿಂದಿಕ್ಕಿ ಬಹಳ ವೇಗವಾಗಿ ಮುನ್ನಡೆಯುತ್ತಿದೆ ಎಂದರು. 

       ಸಾನ್ನಿಧ್ಯ ವಹಿಸಿದ್ದ ಪುಷ್ಪಗಿರಿಯ ಮಹಾಸಂಸ್ಥಾನದ ಡಾ.ಸೋಮಶೇಖರ ಸ್ವಾಮೀಜಿ ಮಾತನಾಡಿ, ಜಾತಿ, ಜಾತಿಗಳ ಮಧ್ಯದ ಸಂಘರ್ಷ, ದೇವರ ಹೆಸರಿನಲ್ಲಿ ಅನಾಚಾರ, ಭಕ್ತಿ ಮಾರ್ಗದಲ್ಲಿ ದಾರಿ ತಪ್ಪುತ್ತಿರುವ ಕಾರಣ ಅವಾಂತರಗಳು ಸೃಷ್ಟಿಯಾಗುತ್ತಿವೆ.ಗುರುವಿನ ಮೇಲೆ ಅಪನಂಬಿಕೆ ಬೆಳೆಸಿಕೊಳ್ಳುತ್ತಿದ್ದೇವೆ. ಶರಣರನ್ನು ಜಾತಿಯ ಚೌಕಟ್ಟಿಗೆ ಸಿಲುಕಿಸಲಾಗುತ್ತಿದೆ. ಬೇಲಿಯೇ ಎದ್ದು ಹೊಲ ಮೇಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು ಜಾತಿ, ಮತದ ಸಂಕೋಲೆಯಿಂದ ಹೊರ ಬರದಿದ್ದರೆ ಭವಿಷ್ಯವೇ ಮುಸುಕಾಗಲಿದೆ. ಜಗಳದಿಂದ ಎಲ್ಲವೂ ನಾಶವಾಗಲಿದ್ದು, ಪ್ರೀತಿಯಿಂದಷ್ಟೇ ಮೋಕ್ಷ ಪ್ರಾಪ್ತಿಯಾಗಲಿದೆ ಎಂದರು. 

       ಈ ಸಂದರ್ಭದಲ್ಲಿ ಅಕ್ಕಿಆಲೂರಿನ ವಿರಕ್ತಮಠದ ಶಿವಬಸವ ಸ್ವಾಮೀಜಿ, ಶಿರಕೋಳದ ಗುರುಸಿದ್ದೇಶ್ವರ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ನಾಗಪ್ಪ ಸವದತ್ತಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕೆಎಎಸ್ ಅಧಿಕಾರಿ ವಿಶ್ವನಾಥ ಹಿರೇಮಠ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ರಾಘವೇಂದ್ರ ಪಟಗಾರ, ಕರೀಂ ಮಾಸನಕಟ್ಟಿ, ಬಸವರಾಜ ಹಾದಿಮನಿ, ಸಿದ್ದಲಿಂಗಪ್ಪ ಕಮಡೊಳ್ಳಿ ಇದ್ದರು.