ಡಿ.13ರಂದು ಬೆಳಗಾವಿ ಸುವರ್ಣ ಸೌಧ ಚಲೋ
ಬಳ್ಳಾರಿ 03: ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಸೂಕ್ತ ಪ್ರಾತಿನಿಧ್ಯವನ್ನು ಪಡೆಯದೇ ಇರುವ 49 ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಅಲೆಮಾರಿ ಸಮುದಾಯ ಗಳಿಗೆ ಶೇ 3ರಷ್ಟು ಒಳಮೀಸಲಾತಿ ಕಲ್ಪಿಸುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅಲೆಮಾರಿಗಳ ಮುಂದಿನ ಪೀಳಿಗೆಯ ಸ್ವಾಭಿಮಾನ, ಗೌರವ, ಘನತೆ ಮತ್ತು ನೆಮ್ಮದಿಯ ಬದುಕಿಗಾಗಿ "ಪರಿಶಿಷ್ಟ ಜಾತಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಅಲೆಮಾರಿ ಸಮುದಾಯಗಳ ಒಳಮೀಸಲಾತಿ ಹೋರಾಟ ಸಮಿತಿ (ಪರಿಶಿಷ್ಟ ಜಾತಿ 49 ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟ)ಯು ಇದೇ ಡಿ.13 ರಂದು ಬೆಳಗಾವಿಯ ಸುವರ್ಣಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದೆ.
ಈ ಕುರಿತು ಕರ್ನಾಟಕ ರಾಜ್ಯ ಎಸ್.ಸಿ., ಎಸ್.ಟಿ., ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾಧ್ಯಕ್ಷ ಶಿವಕುಮಾರ್ ವೈ. ಅವರು ಮಾಹಿತಿ ನೀಡಿದ್ದು, ಹೆಚ್ಚಿನ ಜನಸಂಖ್ಯೆ ಹಾಗೂ ಪ್ರಬಲ ಅಲೆಮಾರಿ ಸಮುದಾಯಗಳಾದ ಕೊರಮ ಮತ್ತು ಕೊರಚ ಸಮುದಾಯಗಳನ್ನು ಹಾಲಿ ಇರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದಿಂದ ಬೇರಿ್ಡಸಿ, 49 ಸೂಕ್ಷ್ಮ ಮತ್ತು 63 ಸೂಕ್ಷ್ಮ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಒದಗಿಸಲು ಮನವಿ ಮಾಡಲು ಈ ಸುವರ್ಣ ಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದ್ದಾರೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯಗಳಿಗೆ ಅಲೆಮಾರಿ ಆಯೋಗವನ್ನು ಶೀಘ್ರವಾಗಿ ಸ್ಥಾಪಿಸುವುದು, ರಾಜ್ಯದ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಅಲೆಮಾರಿ ಬುಡಕಟ್ಟು ಅಧ್ಯಯನ ಕೇಂದ್ರ ತೆರೆಯುವುದು, ಹಿಂದಿನ ಸರ್ಕಾರ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಲೆಮಾರಿಗಳ ಮನೆ ನಿರ್ಮಾಣಕ್ಕೆ ಹೆಚ್ಚುವರಿಯಾಗಿ ಅನುದಾನ ನೀಡಿ ನಂತರ ವಾಪಸ್ ಪಡೆದ 300 ಕೋಟಿ ರೂ. ಹಣವನ್ನು ಪುನಃ ತಕ್ಷಣ ಬಿಡುಗಡೆ ಮಾಡುವುದು, ವಿಧಾನ ಪರಿಷತ್ತಿಗೆ ನಡೆಯುವ ಆಯ್ಕೆಗಳಲ್ಲಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಅಲೆಮಾರಿ ಸಮುದಾಯದಿಂದ ಒಬ್ಬ ವ್ಯಕ್ತಿಯನ್ನು ಸದಸ್ಯರಾಗಿ ಆಯ್ಕೆ ಮಾಡುವುದನ್ನು ಕಡ್ಡಾಯಗೊಳಿಸುವುದು ಸೇರಿ ಹಲವು ಬೇಡಿಕೆಗಳಿಗೆ ಒತ್ತಾಯಿಸಲಾಗುತ್ತದೆ.
ಮಾನ್ಯ ಸರ್ವೋಚ್ಚ ನ್ಯಾಯಾಲಯವು ಒಳ ಮೀಸಲಾತಿ ಕಲ್ಪಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ನೀಡಿದ್ದು, ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಹಿಂದುಳಿದಿರುವ ಸಮುದಾಯಗಳಿಗೆ ಮೊದಲ ಆದ್ಯತೆ ಮತ್ತು ಕಲ್ಪಿಸುವಂತೆ ತೀರ್ಿನಲ್ಲಿ ಆದೇಶವಾಗಿದೆ. ಇದರ ಅನ್ವಯ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಬರುವ 49 ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಅಲೆಮಾರಿ ಸಮುದಾಯಗಳು ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಅತ್ಯಂತ ಹಿಂದುಳಿದಿರುವುದನ್ನು ಪರಿಗಣಿಸಿ ಮೀಸಲಾತಿ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ನೀಡಲು ಸಾವಿರಾರು ಸಂಖ್ಯೆಗೂ ಅಧಿಕ ಅಲೆಮಾರಿಗಳು ಅವರ ಸಾಂಸ್ಕೃತಿಕ ವೇಷ ಭೂಷಣಗಳೊಂದಿಗೆ ಬೆಳಗಾವಿಯ ಸುವರ್ಣ ಸೌಧ ಚಲೋ ಹಮ್ಮಿಕೊಂಡಿದ್ದಾರೆ. ಅಂದು ಬೆಳಿಗ್ಗೆ 10 ಗಂಟೆಗೆ ಬೆಳಗಾವಿಯ ಸುವರ್ಣ ಸೌಧದ ಎದುರು ಸಮುದಾಯಗಳ ಸಾವಿರಾರು ಬಂಧುಗಳು ಒಂದೆಡೆ ಸೇರಿ ಸರ್ಕಾರದ ಮೇಲೆ ಒತ್ತಡ ತರಲು ಧ್ವನಿಗೂಡಿಸಲು ಪರಿಶಿಷ್ಟ ಜಾತಿ 49 ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟ ಕರೆ ನೀಡಿದ್ದು, ಬಳ್ಳಾರಿ ಜಿಲ್ಲೆಯಿಂದಲೂ ಸಾವಿರಾರು ಸಂಖ್ಯೆಯಲ್ಲಿ ತೆರಳುವುದಾಗಿ ಶಿವಕುಮಾರ್ ವೈ.ತಿಳಿಸಿದ್ದಾರೆ.