ನವದೆಹಲಿ: ಲೋಕಸಭೆ ಪ್ರತಿಪಕ್ಷ ನಾಯಕ, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು ಲೋಕಪಾಲ್ ಆಯ್ಕೆ ಸಮಿತಿಯ ಸಭೆಯಲ್ಲಿ ತಾನು ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
ಏಕೈಕ ಅತಿದೊಡ್ಡ ವಿರೋಧ ಪಕ್ಷದ ನಾಯಕರಾದ ಖರ್ಗೆ ಸಮಿತಿಯಲ್ಲಿ ತಮಗೆ ಪೂರ್ಣ ಪ್ರಮಾಣದ ಸದಸ್ಯತ್ವ ನೀಡದೆ ಕೇವಲ ನಿಮಿತ್ತ ಮಾತ್ರಕ್ಕೆ ಆಹ್ವಾನಿಸಲಾಗಿದೆ ಎಂದು ದೂರಿದ್ದಾರೆ.
ಗುರುವಾರ ಸಂಜೆ ಸಭೆ ನಿಗದಿಯಾಗಿದೆ. ಇದಕ್ಕೂ ಮುನ್ನ ನಡೆದಿದ್ದ ಸಭೆಗಳನ್ನು ಸಹ ಖರ್ಗೆ ಇದೇ ಕಾರಣಗಳನ್ನು ನೀಡಿ ಬಹಿಷ್ಕರಿಸಿದ್ದರು.
ಪ್ರಸ್ತುತ ಮೋದಿಗೆ ಬರೆದ ಪತ್ರದಲ್ಲಿ ಅವರು ತಮ್ಮ ಹಿಂದಿನ ಪತ್ರಗಳ ವಿಚಾರಗಳನ್ನು ಸಹ ಪ್ರಸ್ತಾಪಿಸಿದ್ದಾರೆ.
"ಈ ಹಿಂದೆಯೇ ತಿಳಿಸಿದಂತೆ ಲೋಕಸಭೆಯಲ್ಲಿ ಅತಿ ದೊಡ್ಡ ವಿರೋಧ ಪಕ್ಷದ ನಾಯಕನಾದ ನನಗೆ ಲೋಕಪಾಲ್ ಆಯ್ಕೆ ಸಮಿತಿ ಸಭೆಯಲ್ಲಿ ಸರಿಯಾದ ಸ್ಥಾನ ನೀಡದ ಕಾರಣ ಸಭೆಯಲ್ಲಿ ನಾನು ಹಾಜರಾಗಲು ಸಾಧ್ಯವಿಲ್ಲ ಎಂದು ಈ ಮೂಲಕ ತಿಳಿಸಲು ಇಚ್ಚಿಸುತ್ತೇನೆ"
'ವಿಶೇಷ ಆಹ್ವಾನಿತರಾಗಿ' ಅವರನ್ನು ಆಮಂತ್ರಿಸಿದ್ದನ್ನು ಅವರು ಒಪ್ಪಿಕೊಳ್ಳದೆ ಆಕ್ಷೇಪಿಸಿದ್ದು ಲೋಕಪಾಲ್ ಕಾಯ್ದೆಯ ಸೆಕ್ಷನ್ 4 ರ ಅಡಿಯಲ್ಲಿಅಂತಹ ಯಾವುದೇ ನಿಬಂಧನೆ ಇಲ್ಲ ಎಂದು ಸರ್ಕಾರವು ಚೆನ್ನಾಗಿ ತಿಳಿದಿತ್ತು ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
""ನಿಮ್ಮ ಸರ್ಕಾರವು ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಾಗಿದೆ. ಈ ಪ್ರಕ್ರಿಯೆಯಲ್ಲಿ ಪ್ರತಿಪಕ್ಷದ ದನಿಗೆ ಸರ್ಕಾರ ನಿಜಕ್ಕೂ ಗೌರವ ಕೊಡುವುದಾದರೆ ಅದನ್ನು ಖಚಿತಪಡಿಸಲು ಅಗತ್ಯ ತಿದ್ದುಪಡಿಯನ್ನು ಜಾರಿಗೊಳಿಸಲುಬೇಕು" ಖರ್ಗೆ ಪತ್ರದಲ್ಲಿ ಬರೆದಿದ್ದಾರೆ.