ನೇತಾಜಿ ಸುಭಾಷ್ ಚಂದ್ರ ಬೋಸ್ 128ನೇ ಜನ್ಮದಿನ ವಿದ್ಯಾರ್ಥಿ -ಯುವಕರು ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕತೆ ಇದೆ- ಎಐಡಿಎಸ್‌ಓ
ಬಳ್ಳಾರಿ 05: ಮಹಾನ್ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 128ನೇ ಜನ್ಮದಿನ ಸಂದರ್ಭದಲ್ಲಿ ವಿದ್ಯಾರ್ಥಿ-ಯಕವಜನರಲ್ಲಿ ನೇತಾಜಿ ಅವರ ವಿಚಾರಗಳನ್ನು ತೆಗೆದುಕೊಂಡು ಹೋಗಲು ಸಂಡೂರು ವಿಕ್ಷಣೀಯ ಸ್ಥಳಗಳಲ್ಲಿ ಟ್ರೆಕ್ಕಿಂಗ್ ಹಮ್ಮಿಕೊಳ್ಳಲಾಗಿತ್ತು. ಸಂಡೂರಿನ ವಿಕ್ಷಣೀಯ ಸ್ಥಳಗಳಾದ ನಾರಿಹಳ್ಳ ಕೆರೆ, ’ಸಿ ಸಂಡೂರು ಇನ್ ಸೆಪ್ಟೆಂಬರ್’ ವ್ಯಿ ಪಾಯಿಂಟ್ ಹಾಗೂ ಇನ್ನಿತರ ಪ್ರದೇಶಗಳಿಗೆ ಭೇಟಿ ನೀಡಲಾಯಿತು.ಎಐಡಿಎಸ್‌ಓ ರಾಜ್ಯ ಖಜಾಂಚಿಗಳು ಸುಭಾಷ್ ಬೆಟ್ಟದಕೊಪ್ಪ ಅವರು ಮಾತನಾಡಿ ಇವತ್ತಿನ ಸಾಂಸ್ಕೃತಿಕ ವಾತಾವರಣ ಹಾಳಾಗುತ್ತೀರುವ ಸಂದರ್ಭದಲ್ಲಿ ವಿದ್ಯಾರ್ಥಿ -ಯುವಕರಿಗೆ ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿಸುವ ಅವಶ್ಯಕತೆ ಇದೆ ಎಂದರು.
ನೇತಾಜಿಯವರ ಎಚ್ಚರಿಕೆಗಳಿಗೆ ಅಂದೇ ಲಕ್ಷ್ಯ ಕೊಟ್ಟಿದ್ದರೆ, ಬ್ರಿಟೀಷರಿಂದ ಶ್ರೀಮಂತ ಭಾರತೀಯ ಬಂಡವಾಳಶಾಹಿಗಳಿಗೆ ಅಧಿಕಾರ ವರ್ಗಾವಣೆಯಾಗುವ ದುರಂತವನ್ನು ತಪ್ಪಿಸಬಹುದಿತ್ತು. ಆದರೆ, ಆ ತಪ್ಪಿಗೆ ಇಂದು ನಾವು ತೆರುತ್ತಿರುವ ಬೆಲೆ ಅಪಾರ!! ಸ್ವಾತಂತ್ರೋತ್ತರ ಭಾರತದಲ್ಲಿ ಇಂದಿಗೂ ಪ್ರತಿ ದಿನ 5000 ಕ್ಕೂ ಹೆಚ್ಚು ಮಕ್ಕಳು ಅಪೌಷ್ಠಿಕತೆಯಿಂದ ಅಸು ನೀಗುತ್ತಿದ್ದಾರೆ. ಶೇ.60ಕ್ಕೂ ಹೆಚ್ಚು ಮಹಿಳೆಯರು ನಿಶ್ಯಕ್ತಿಯಿಂದ ಬಳಲುತ್ತಿದ್ದಾರೆ. ಸುಮಾರು ಅರ್ಧ ಮಿಲಿಯನ್ ಮಕ್ಕಳು ತಮ್ಮ 5ನೇ ವಯಸ್ಸಿನ ಹುಟ್ಟುಹಬ್ಬವನ್ನು ಕಾಣುವ ಮೊದಲೇ ಸಾವನ್ನಪ್ಪುತ್ತಿದ್ದಾರೆ.
ಶಿಕ್ಷಣದ ವ್ಯಾಪಾರೀಕರಣ, ಶೇ.65 ರಷ್ಟು ಯುವಜನರು ಉನ್ನತ ಶಿಕ್ಷಣದಿಂದ ದೂರವುಳಿಯುವಂತೆ ಮಾಡಿದೆ. ಕೇವಲ ಶೇ.10ರಷ್ಟು ಭಾರತೀಯ ಶ್ರೀಮಂತರು ದೇಶದ ಒಟ್ಟಾರೆ ಶೇ.79ರಷ್ಟು ಸಂಪತ್ತಿನ ಮೇಲೆ ಒಡೆತನ ಸಾಧಿಸಿದ್ದಾರೆ. ಮಿಲಿಯಾಂತರ ರೈತರು ಕಳೆದ ಹಲವು ವರ್ಷಗಳಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಶೇ.55ಕ್ಕೂ ಹೆಚ್ಚು ಜನ ರೈತರು ಹಸಿವಿನಲ್ಲಿ ಮಲಗುತ್ತಾರೆ. ರೈತರಿಗೆ ಸಬ್ಸಿಡಿಗಳನ್ನು ನೀಡುವ ಬದಲಿಗೆ ಕೇಂದ್ರ ಸರ್ಕಾರ ಶ್ರೀಮಂತ ಕಾರ್ೋರೇಟ್ ಮನೆತನಗಳಿಗೆ ಬರೋಬ್ಬರಿ 20 ಲಕ್ಷ ಕೋಟಿಯಷ್ಟು ತೆರಿಗೆ ವಿನಾಯಿತಿ ನೀಡಿದೆ. ಇಂದಿನ ಆಳುವ ವರ್ಗದ ಅತಿ ಕ್ರೂರ ಆಕ್ರಮಣ ನಡೆಯುತ್ತಿರುವುದು ದೇಶದ ಯುವಜನತೆಯ ಆಲೋಚನಾ ಪ್ರಕ್ರಿಯೆಯ ಮೇಲೆ. ಜರ್ಮನಿಯಲ್ಲಿ ಹಿಟ್ಲರ್ ಮಾಡಿದಂತೆಯೇ ಇಂದು ಆಳುವ ಎಲ್ಲಾ ಸರ್ಕಾರಗಳು ಧರ್ಮಾಂಧತೆ, ಜಾತಿ ವೈಷಮ್ಯ ಹಾಗು ಅವೈಜ್ಞಾನಿಕ ಆಲೋಚನೆಗಳನ್ನು ಜನಗಳ ಮಧ್ಯೆ ಹರಿಬಿಡುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ನೇತಾಜಿಯವರ ನೈಜ ಉತ್ತರಾಧಿಕಾರಿಗಳಾಗಬೇಕಾದ ದೇಶದ ವಿದ್ಯಾರ್ಥಿ -ಯುವಜನತೆ ನೇತಾಜಿ ಅವರ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಎಐಡಿಎಸ್‌ಓ ಜಿಲ್ಲಾ ಅಧ್ಯಕ್ಷರು ಕೆ.ಈರಣ್ಣ, ಕಾರ್ಯದರ್ಶಿ ಕಂಬಳಿ ಮಂಜುನಾಥ, ಉಪಾಧ್ಯಕ್ಷರು, ಎಂ.ಶಾಂತಿ, ಉಮಾ, ಮತ್ತು ಕಛೇರಿ ಕಾರ್ಯದರ್ಶಿ ನಿಹಾರಿಕ, ಸದಸ್ಯರು ಸಮೀರ್, ವಿರುಪಾಕ್ಷ, ಸತೀಶ್, ಪೂಜಿತ ಇತರರು ಭಾಗವಹಿಸಿದ್ದರು.