ಹೆಗ್ಗೋಡಿನ ನೀನಾಸಂ ರೂವಾರಿ, ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕೃತಬಹುಮುಖೀ ಸಾಧಕ ಕೆ.ವಿ.ಸುಬ್ಬಣ್ಣ

Neenasam Ruwari of Heggodi, Magsaysay awardee KV Subbanna

ಹೆಗ್ಗೋಡಿನ ನೀನಾಸಂ ರೂವಾರಿ, ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕೃತಬಹುಮುಖೀ ಸಾಧಕ ಕೆ.ವಿ.ಸುಬ್ಬಣ್ಣ

ಧಾರವಾಡ 21 : ಮಲೆನಾಡಿನ ಗ್ರಾಮಾಂತರ ಪ್ರದೇಶದಲ್ಲಿ ಹುಟ್ಟಿ, ಹಳ್ಳಿಯಲ್ಲಿಯೇ ವಿದ್ಯಾಭ್ಯಾಸ ಮಾಡಿ ಶಿವಮೊಗ್ಗಾ, ಮೈಸೂರುಗಳಲ್ಲಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ತೆರಳಿ ಅಲ್ಲಿ ಕಲಿತರೂ ಮುಂದೆ ತನ್ನ ಮಣ್ಣಿಗೆ ಮರಳಿ ಬಂದು ಹೆಗ್ಗೋಡಿನಂಥ ಗ್ರಾಮದಲ್ಲಿಯೇ ನೆಲೆಸಿ ನೀನಾಸಂ ಎಂಬ ಸಂಸ್ಥೆಯೊಂದನ್ನು ಹೆಮ್ಮರವಾಗಿ ಬೆಳೆಸಿ ಅದರ ಮೂಲಕ ಒಬ್ಬ ಸಮರ್ಥ ಸಂಘಟಕರಾಗಿ ಬೆಳಗಿದ ಕೆ.ವಿ.ಸುಬ್ಬಣ್ಣನವರ ಹಲವಾರು ಸಾಧನೆಗಳು ತರುಣ ಜನಾಂಗಕ್ಕೊಂದು ಆದರ್ಶವಾಗಿ ಇಂದಿಗೂ ಹೆಸರು ಪಡೆದಿರುವದು ಕನ್ನಡಿಗರ ಸೌಭಾಗ್ಯವೆಂದೇ ಹೇಳಬೇಕು ಎಂದು ಉಪನ್ಯಾಸಕ, ಲೇಖಕ ಡಾಽಽ ಶ್ರೀಧರ ಹೆಗಡೆ ಭದ್ರನ್ ಅಭಿಪ್ರಾಯ ವ್ಯಕ್ತಪಡಿಸಿದರು.ಧಾರವಾಡದ ಸಾಹಿತ್ಯಿಕ ಸಂಘಟನೆ ಅನ್ವೇಷಣ ಕೂಟವು, ಕೆ.ವಿ. ಸುಬ್ಬಣ್ಣನವರ ಜನ್ಮದಿನವಾದ ಫೆಬ್ರುವರಿ 20 ರಂದು ಸಾಧನಕೇರಿಯ ‘ಚೈತ್ರ'ದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸುಬ್ಬಣ್ಣನವರ ನೆನಪಿನ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಬಂದು ವಿಶೇಷ ಉಪನ್ಯಾಸ ನೀಡಿದರು. ಅವರು ಮುಂದುವರಿದು ಮಾತನಾಡಿ ಅಂತರಾ​‍್ರಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ನೀನಾಸಂ ಸಂಸ್ಥೆಯ ತಿರುಗಾಟ, ಮರು ತಿರುಗಾಟಗಳೆಲ್ಲ ರಾಜ್ಯ ವ್ಯಾಪಿಯಾಗಿ ಮೆಚ್ಚುಗೆ ಪಡೆದಿದ್ದು ಗ್ರಾಮಾಂತರದ ಸಂಸ್ಥೆಯೊಂದು ಈ ಮಟ್ಟದಲ್ಲಿ ಬೆಳೆಯಬಹುದೆ? ಎಂಬ ಅಚ್ಚರಿ ಮೂಡಿಸುತ್ತದೆ. ತಮ್ಮ ಬಹುಮುಖೀ ಸಾಧನೆಗಳಿಂದ ಈ ವಾಮನಮೂರ್ತಿ ತ್ರಿವಿಕ್ರಮನಾಗಿ ಬೆಳೆದು ನಿಂತಾಗ ಅವರ ಸಾಧನೆಗಳನ್ನು ಗುರುತಿಸಿ ಏಶಿಯಾದಲ್ಲಿಯೇ ಅತಿ ದೊಡ್ಡ ಪ್ರಶಸ್ತಿ ಎನಿಸಿಕೊಂಡ ಫಿಲಿಫೈನ್ಸ್‌ ದೇಶ ಕೊಡುವ “ರೇಮನ್ ಮ್ಯಾಗಸೇಸೆ ಪ್ರಶಸ್ತಿ'' ಪುರಸ್ಕೃತರಾದದ್ದು ಅವರಿಗೆ ಸಂದ ಅತ್ಯಂತ ಸೂಕ್ತ ಗೌರವವೆನಿಸುತ್ತದೆ ಎಂದು ಸುಬ್ಬಣ್ಣನವರ ದಶಮುಖಗಳನ್ನು ಸವಿವರವಾಗಿ ಪರಿಚಯಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ ಡಾಽಽ ಶಾಲಿನಿ ರಘುನಾಥ ಅವರು ಮಾತನಾಡಿ ಸುಬ್ಬಣ್ಣನವರ ತಾಯಿ ಕೂಡ ಪ್ರಚಾರ ಬಯಸದ ಗೃಹಿಣಿಯಾಗಿದ್ದು ಇವರದ್ದು ಸುಸಂಸ್ಕೃತ ಪರಿವಾರವಾಗಿತ್ತು. ಯು.ಆರ್‌. ಅನಂತಮೂರ್ತಿಯಂಥ ದೈತ್ಯ ಪ್ರತಿಭೆಯೇ “ನನ್ನ ಗೆಳೆಯರಲ್ಲಿ ಎಲ್ಲ ದೃಷ್ಟಿಯಿಂದಲೂ ನಿಜವಾದ ಪುಣ್ಯಜೀವಿ ಸುಬ್ಬಣ್ಣನೇ'' ಎಂದಿದ್ದರಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ ಎಂದು ಡಾಽಽ ಶಾಲಿನಿ ರಘುನಾಥ ಸುಬ್ಬಣ್ಣನವರ ಕೌಟುಂಬಿಕ ಸಂಬಂಧಗಳನ್ನು ಕೊಂಡಾಡಿದರು. ಕೆ.ವಿ. ಸುಬ್ಬಣ್ಣನವರ ಬಹುಮುಖೀ ಸಾಧನೆಗಳ ಕುರಿತು ರೋಚಕ ಸಂವಾದ ಜರುಗಿತು.ಅನ್ವೇಷಣ ಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ, ಅನಿಲ ಕಾಖಂಡಿಕಿ, ಡಾ. ಹ.ವೆಂ. ಕಾಖಂಡಿಕಿ, ಹಿರಿಯ ಚಿತ್ರ ಕಲಾವಿದ ಎಂ.ಆರ್‌.ಬಾಳಿಕಾಯಿ, ಡಾಽಽ ಬಾಳಣ್ಣ ಶೀಗಿಹಳ್ಳಿ, ರಮೇಶ ಇಟ್ನಾಳ, ಶ್ರೀಧರ ಗಾಂವಕರ, ಡಾಽಽ ಅರವಿಂದ ಯಾಳಗಿ, ಎಮ್‌.ಎಸ್‌. ಪರಮೇಶ್ವರ, ಶ್ರೀಪಾದ ಹೆಗಡೆ, ಶ್ರೀನಿವಾಸ ಹುದ್ದಾರ, ಆನಂದ ಕುಲಕರ್ಣಿ, ಶ್ರೀಪಾದ ನಾಡಗೀರ, ಕೆ.ಸಿ. ಪುರಾಣಿಕಮಠ, ಎಮ್‌.ವಿ. ಹೊಸಮನಿ, ಎಂ.ಎ. ಕಾಮಟೆ, ಅನಂತ ಸಿದ್ಧೇಶ್ವರ, ಬದರೀವಿಶಾಲ ಪರ‌್ವತೀಕರ, ರಾಜೀವ ಪಾಟೀಲಕುಲಕರ್ಣಿ, ಎಸ್‌.ಎಂ. ದೇಶಪಾಂಡೆ, ಎಸ್‌.ಎಸ್‌.ಬಂಗಾರಿಮಠ, ಎಮ್‌.ಎಲ್‌. ಕುಲಕರ್ಣಿ, ನಾಗರಾಜ ಹೆಗಡೆ ಅಪಗಾಲ, ಬಿ.ಜಿ ಗುಂಡೂರ, ರಮೇಶ ಗೋಪಾಲ ಹೆಗೆಡೆ, ಡಾಽಽ ಪ್ರಜ್ಞಾಮತ್ತಿಹಳ್ಳಿ, ಲಕ್ಷ್ಮೀ ಆರ್‌. ಹೆಗಡೆ, ಸರೋಜಾ ಕುಲಕರ್ಣಿ, ಆರೋಹಿ ಪರಾಂಜಪೆ ಮುಂತಾದವರು ಉಪಸ್ಥಿತರಿದ್ದರು.