ಕಾರವಾರದಲ್ಲಿ ಮಾ.15 ರಂದು ರಾಷ್ಟ್ರೀಯ ಏಕತಾ ಓಟ ಮತ್ತು ಸೈಕಲ್ ಜಾಥಾ
National Unity Run and Cycle Jatha to be held in Karwar on March 15
ಕಾರವಾರ11: ಭಗವಾನ್ ಶ್ರೀ ಸತ್ಯಸಾಯಿಬಾಬಾ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಹಾಗೂ ದೇಶದ ಸದೃಢತೆಯ ಅಭಿಯಾನದ ಸಹಯೋಗದೊಂದಿಗೆ, ಸತ್ಯಸಾಯಿ ಸೇವಾ ಸಂಸ್ಥೆಗಳು ಕರ್ನಾಟಕದ ವತಿಯಿಂದ ಮಾರ್ಚ್ 15ರ ಭಾನುವಾರ ಕಾರವಾರದಲ್ಲಿ ’ರಾಷ್ಟ್ರೀಯ ಏಕತಾ ಓಟ ಮತ್ತು ಸೈಕಲ್ ಜಾಥಾ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಜಿಲ್ಲಾಧ್ಯಕ್ಷ ರಾಮದಾಸ ಆಚಾರಿ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸತ್ಯಸಾಯಿ ಸೇವಾ ಸಂಸ್ಥೆಯು ಬಾಬಾ ಅವರ ಬೋಧನೆಗಳಿಂದ ಪ್ರೇರಿತವಾದ ಜಾಗತಿಕ ಆಧ್ಯಾತ್ಮಿಕ ಮತ್ತು ಸೇವಾ ಸಂಸ್ಥೆಯಾಗಿದೆ. ಏಕತೆ, ಶಿಸ್ತು ಮತ್ತು ನಿಸ್ವಾರ್ಥ ಸೇವೆಯ ಆಶಯದೊಂದಿಗೆ ಆರೋಗ್ಯ, ಶಿಕ್ಷಣ ಮತ್ತು ಸಮಾಜ ಸೇವೆಯ ಕ್ಷೇತ್ರಗಳಲ್ಲಿ ಈ ಸಂಸ್ಥೆ ನಿರಂತರವಾಗಿ ತೊಡಗಿಸಿಕೊಂಡಿದೆ.
ಇದರ ಭಾಗವಾಗಿ ದೇಶದ ವಿವಿಧ ನಗರಗಳಲ್ಲಿ ಆಯೋಜಿಸುತ್ತಿರುವ ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಶಾಂತಿ, ಶಿಸ್ತು, ಸಾಮಾಜಿಕ ಸಾಮರಸ್ಯ ಮತ್ತು ರಾಷ್ಟ್ರೀಯ ಭಾವೈಕ್ಯತೆಯನ್ನು ಕ್ರೀಡೆಯ ಮೂಲಕ ಜನರಲ್ಲಿ ಮೂಡಿಸುವುದಾಗಿದೆ ಎಂದರು.ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದ ರಾಜ್ಯ ಉಸ್ತುವಾರಿ ತಿಮ್ಮಯ್ಯ ಮಿರಾಶಿ ಅವರು, ಮಾರ್ಚ್ 15ರಂದು ಬೆಳಿಗ್ಗೆ 5.30ರಿಂದ 10.00 ಗಂಟೆಯವರೆಗೆ ಈ ಓಟ ಮತ್ತು ಜಾಥಾ ನಡೆಯಲಿದೆ. ಕಾರವಾರದ ಶ್ರೀ ಮಾಲಾದೇವಿ ಕ್ರೀಡಾಂಗಣವು ಈ ಓಟದ ಆರಂಭ ಮತ್ತು ಅಂತ್ಯದ ಸ್ಥಳವಾಗಿರುತ್ತದೆ. 15 ವರ್ಷ ಮೇಲ್ಪಟ್ಟ ಎಲ್ಲರಿಗೂ ಇದರಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದ್ದು, ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ಉಚಿತವಾಗಿ ಕ್ರೀಡಾ ಉಡುಪು (ಟಿ-ಶರ್ಟ), ಪದಕ, ವಿದ್ಯುನ್ಮಾನ ಪ್ರಮಾಣಪತ್ರ ಹಾಗೂ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಆಸಕ್ತರು ಈಗಾಗಲೇ ಹಂಚಿಕೊಳ್ಳಲಾದ ಅಂತರ್ಜಾಲ ಕೊಂಡಿಯ ಮೂಲಕ ಮುಂಚಿತವಾಗಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಆಫ್ ಲೈನ್ ಮೂಲಕ ಹೆಸರು ನೋಂದಾಯಿಸಿಕೊಳ್ಳಲು ತಿಮ್ಮಯ್ಯ ವಿರಾಶಿ, ಜಿ.ಡಿ. ಮನೋಜೆ, ನಂದಕುಮಾರ ಭಟ್, ರೇಷ್ಮಾ ಬಾಡಕರ ಅವರನ್ನು ಸಂಪರ್ಕಿಸಬಹುದಾಗಿದೆ.
ವಿವಿಧ ವಿಭಾಗಗಳ ವಿವರ: ಓಟದ ಸ್ಪರ್ಧೆಯನ್ನು 3 ಕಿ.ಮೀ, 5 ಕಿ.ಮೀ ಮತ್ತು 10 ಕಿ.ಮೀ ಎಂದು ಮೂರು ವಿಭಾಗಗಳಲ್ಲಿ ಆಯೋಜಿಸಲಾಗಿದೆ. 3 ಕಿ.ಮೀ ಓಟವು ಮಾಲಾದೇವಿ ಕ್ರೀಡಾಂಗಣದಿಂದ ಆರಂಭವಾಗಿ ವಿಠಲ ರಖುಮಾಯಿ ಮಂದಿರ, ಕಾಜುಬಾಗ್ ವೃತ್ತ, ಅರ್ಜುನ್ ಚಿತ್ರಮಂದಿರದ ಮಾರ್ಗವಾಗಿ ಪುನಃ ಕ್ರೀಡಾಂಗಣಕ್ಕೆ ತಲುಪಲಿದೆ. 5 ಕಿ.ಮೀ ಓಟವು ಇದೇ ಮಾರ್ಗದ ಮೂಲಕ ಕೋಡಿಬಾಗದ ಮಾರುತಿ ದೇವಸ್ಥಾನದವರೆಗೆ ಸಾಗಿ ವಾಪಸ್ ಬರಲಿದೆ. 10 ಕಿ.ಮೀ ಓಟವು ಸಾರ್ವಜನಿಕ ಶಾಲೆ, ಹೆಂಜಾ ನಾಯ್ಕ ವೃತ್ತ, ಗೀತಾಂಜಲಿ ಚಿತ್ರಮಂದಿರ, ಗ್ರಾಮದೇವ ದೇವಸ್ಥಾನ, ತಾಂತ್ರಿಕ ಶಿಕ್ಷಣ ಸಂಸ್ಥೆ ಕಾಲೇಜು, ಶಿಬವಾಡ ಟೋಲ್ ನಾಕಾ ಮತ್ತು ಶಿವಾನಂದ ಮಠದ ಮಾರ್ಗವಾಗಿ ಸಾಗಿ ಮರಳಲಿದೆ.
ಸೈಕಲ್ ಜಾಥಾ ವಿಭಾಗ: ಮಹಿಳೆಯರಿಗೆ 16 ಕಿ.ಮೀ ಮತ್ತು ಪುರುಷರಿಗೆ 22 ಕಿ.ಮೀ ಸೈಕಲ್ ಜಾಥಾವನ್ನು ನಿಗದಿಪಡಿಸಲಾಗಿದೆ. ಮಹಿಳೆಯರ ಜಾಥಾವು ಕಾಜುಬಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ, ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆ, ಕಾಳಿ ಸೇತುವೆ ಮೂಲಕ ಸದಾಶಿವಗಡ ಹಾಗೂ ರಾಮನಾಥ ವೃತ್ತದವರೆಗೆ ಸಾಗಿ ಮರಳಲಿದೆ. ಪುರುಷರ ಜಾಥಾವು ಮಾಜಾಳಿ ಕ್ರಾಸ್ ಸಮೀಪದ ದೇವತಿ ದೇವಿ ದೇವಸ್ಥಾನದವರೆಗೆ ಸಾಗಿ ಪುನಃ ಕ್ರೀಡಾಂಗಣಕ್ಕೆ ಅಂತ್ಯಗೊಳ್ಳಲಿದೆ. ಕಾರ್ಯಕ್ರಮದ ಯಶಸ್ವಿಗಾಗಿ ಸಂಸ್ಥೆಯ ನೂರಾರು ಸ್ವಯಂಸೇವಕರನ್ನು ನಿಯೋಜಿಸಲಾಗಿದ್ದು, ಪೊಲೀಸ್ ಹಾಗೂ ಸಂಚಾರ ವಿಭಾಗದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು . ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು...
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 