ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಹಣ ನೀಡಿ ಸೇವೆ ಪಡೆಯುವ ಪ್ರತಿಯೊಬ್ಬರೂ ಗ್ರಾಹಕರಾಗಿದ್ದಾರೆ
ಹಾವೇರಿ 24: ಒಂದು ವಸ್ತು ಅಥವಾ ಸೇವೆಯನ್ನು ಹಣ ಕೊಟ್ಟು ಪಡೆಯುವ ಪ್ರತಿಯೊಬ್ಬರೂ ಗ್ರಾಹಕರಾಗಿರುತ್ತಾರೆ. ವಸ್ತುಗಳನ್ನು ಖರೀದಿಸುವಾಗ ಆತುರಮಾಡದೇ ಯೋಚನೆಮಾಡಿ ಖರೀದಿಸಬೇಕು ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಈಶ್ವರ್ಪ ಬಿ.ಎಸ್. ಅವರು ಹೇಳಿದರು.
ಹಾವೇರಿ ನಗರದ ಶ್ರೀ ಹುಕ್ಕೇರಿಮಠದ ಪ್ರೌಢಶಾಲೆಯಲ್ಲಿ ಮಂಗಳವಾರ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಹೆಚ್ಚಾಗಿ ಆನ್‌ಲೈನ್ ಖರೀದಿಗೆ ಮೊರೆಹೋಗುತ್ತಿದ್ದು, ಆನ್‌ಲೈನ್ ಸೇವೆಯಲ್ಲಿ ಲೋಪಗಳು ಕಂಡುಬಂದಲ್ಲಿ ನಿರ್ಲಕ್ಷ್ಯ ವಹಿಸದೇ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದೂರು ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು. ಖರೀದಿಸಿ ವಸ್ತುಗಳ ರಸೀದಿ, ವಾರಂಟಿ ಹಾಗೂ ಗ್ಯಾರಂಟಿ ದಾಖಲೆಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು. ಅಂದಾಗ ಮಾತ್ರ ಮಾರಾಟಗಾರರ ವಿರುದ್ಧ ದೂರು ದಾಖಲಿಸಿ ಪರಿಹಾರ ಪಡೆದುಕೊಳ್ಳಲು ಸಾಧ್ಯ ಎಂದು ಹೇಳಿದರು.
ದೈನಂದಿನ ವ್ಯವಹಾರದಲ್ಲಿ ಖರೀದಿಸಿದ ವಸ್ತುಗಳಲ್ಲಿ ನ್ಯೂನ್ಯತೆ ಅಥವಾ ದೋಷಗಳು ಕಂಡುಬಂದಲ್ಲಿ ಖರೀದಿಸಿದ ರಸೀದಿಯೊಂದಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರ ಸಲ್ಲಿಸುವ ಮೂಲಕ ಪರಿಹಾರವನ್ನು ಪಡೆಯಬಹುದು ಎಂದು ಮಾಹಿತಿ ನೀಡಿದರು.
ಉಪನ್ಯಾಸಕರಾಗಿ ಭಾಗವಹಿಸಿದ ಶಿವರಾಜ ಕಂಬಳಿ ಅವರು ಗ್ರಾಹಕರ ಹಕ್ಕುಗಳ ಕುರಿತು ವಿವರವಾದ ಮಾಹಿತಿ ನೀಡಿದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ಶ್ರೀಮತಿ ಉಮಾದೇವಿ ಹಿರೇಮಠ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟ್ರಾರ್ ಹಾಗೂ ಸಹಾಯಕ ಆಡಳಿತಾಧಿಕಾರಿ ಚಂದ್ರಶೇಖರ, ಮುಖ್ಯೋಪಾಧ್ಯಾಯರಾದ ಚಿ.ವೈ.ಅಂತರವಳ್ಳಿ ಹಾಗೂ ಮದರಲಿ ಕಾಗಿನೆಲಿ ಇತರರು ಉಪಸ್ಥಿತರಿದ್ದರು.