ಫೆ 14ರಂದು ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ
ಹೂವಿನಹಡಗಲಿ 12: ನಾಡಿನ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಮೈಲಾರದಲ್ಲಿ 14ರಂದು ನಡೆಯುವ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವಕ್ಕೆ ಭರತ್ ಹುಣ್ಣಿಮೆ ಬುಧವಾರ ನಾಡಿನ ಮೂಲೆ ಮೂಲೆಗಳಿಂದ ಸಾಲು ಸಾಲು ಬಂಡಿಗಳು ಹಾಗೂ ಟಾಕ್ಟರ್ ಮತ್ತು ಇತರೆ ವಾಹನ ಸೇರಿದಂತೆ ಪಾದಯಾತ್ರೆ ಮೂಲಕ ಭಕ್ತಸಾಗರ ಹರಿದು ಬರುತ್ತಿದೆ. ಈಗಾಗಲೇ ಲಕ್ಷಾಂತರ ಭಕ್ತರು ಜಾತ್ರೆಯಲ್ಲಿ ಬೀಡು ಬಿಟ್ಟಿದ್ದಾರೆ. ಫೆ.14 ರಂದು ನಡೆಯುವ ಕಾರ್ಣಿಕೋತ್ಸವ ಹಾಗೂ ಫೆ.15 ರಂದು ಜರುಗಲಿರುವ ಸರಪಳಿ ಪವಾಡ ಸೇರಿದಂತೆ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ನಾಲೈದು ದಿನಗಳ ಕಾಲ ಜಾತ್ರೆಯಲ್ಲಿ ಬೀಡು ಬಿಡುತ್ತಾರೆ. ಜಾತ್ರೆಗೆ ಬರುವ ಭಕ್ತರಿಗೆ ಜಿಲ್ಲಾ ಹಾಗೂ ತಾಲೂಕಾಡಳಿತ ಕುಡಿಯುವ ನೀರು, ಚರಂಡಿ ಸ್ವಚ್ಚತೆ, ರಸ್ತೆ, ಬೆಳಕಿನ ವ್ಯವಸ್ಥೆ ಸೇರಿದಂತೆ ಮೂಲಸೌಲಭ್ಯವನ್ನು ಕಲ್ಪಿಸಲಾಗಿದೆ.
ಭಾರತ ಹುಣ್ಣಿಮೆಯಂದರೆ ಮೈಲಾರಲಿಂಗೇಶ್ವರನ ಭಕ್ತರಿಗೆ ಮಹತ್ವದ ಹುಣ್ಣಿಮೆಯಾಗಿದೆ. ಈ ಹುಣ್ಣಿಮೆಯಂದು ದುಷ್ಪರ ಸಂಹಾರ ಶಿಷ್ಟರ ರಕ್ಷಣೆಗಾಗಿ ಮಾರ್ತಾಂಡ ಭೈರವನ ರೂಪದಲ್ಲಿ ಧರೆಗೆ ಬಂದ ಭಗವಂತ, ಮಣಿ ಮಲ್ಲಾಸುರರ ಸಂಹಾರ ಮಾಡಿ ಮರಳಿ ಕೈಲಾಸಕ್ಕೆ ಹೋಗುತ್ತಿರಲು ಪುರಜನರು ಇಲ್ಲೇ ನೆಲೆಸಬೇಕೆಂದು ಮೊರೆ ಇಡುತ್ತಾರೆ.ಭಕ್ತರ ಭಕ್ತಿಗೆ ಮಣಿದ ಭಗವಂತ ಮಣಿಚೂಲ ಪರ್ವತ(ಇಂದಿನ ಮೈಲಾರ)ದಲ್ಲಿ ಲಿಂಗರೂಪದಲ್ಲಿ ನೆಲೆಸಿ, ನನ್ನನ್ನು ಸ್ಮರಣೆ ಮಾಡುವ ಭಕ್ತರ ಹಿಂದೆ ನಾನು ಸದಾ ಇದ್ದು, ಅವರ ಇಷ್ಟಾರ್ಥಗಳನ್ನು ಈಡೇರಿಸುತ್ತೇನೆ.
ಗಂಗೆ ಪಾರ್ವತಿಯರು ಗಂಗೆ ಮಾಳವ್ವರಾಗಿ ನನ್ನೊಡನೆ ನೆಲೆಸುತ್ತಾರೆ. ಪ್ರತಿ ವರ್ಷ ಮಾರ್ಗಶಿರ ಷಷ್ಠಿಯಂದು ಚಂದ್ರನು ಶತತಾರ ನಕ್ಷತ್ರದಲ್ಲಿರುವಾಗ ವಠವೃಕ್ಷದಡಿಯಲ್ಲಿ ಲಿಂಗರೂಪದಲ್ಲಿ ಭಕ್ತರಿಗೆ ದರ್ಶನ ನೀಡುತ್ತೇನೆ. ನಂತರ ಭಕ್ತರ ಉದ್ಧಾರಕ್ಕಾಗಿ ದೇಶದ ರಾಜಕೀಯ ಏಳುಬೀಳು ಹಾಗೂ ಪ್ರಕೃತಿಯಲ್ಲಾಗುವ ಬದಲಾವಣೆ ಕುರಿತಂತೆ ದೇವವಾಣಿಯನ್ನು ನುಡಿಯುತ್ತೇನೆ ಎಂದು ಪರಶಿವನು ಭಕ್ತರಿಗೆ ತಿಳಿಸಿದನಂತೆ ಹೇಳುತ್ತಾರೆ.ವಿಶೇಷ ಬಸ್ ವ್ಯವಸ್ಥೆ ; ಹೂವಿನಹಡಗಲಿ ತಾಲ್ಲೂಕಿನಮೈಲಾರ ಗ್ರಾಮದ ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕೋತ್ಸವ ಪ್ರಯಾಣಿಕರು ಹಾಗೂ ಭಕ್ತಾಧಿಗಳ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವತಿಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.ಹೊಸಪೇಟೆ, ಕೂಡ್ಲಿಗಿ, ಕೊಟ್ಟೂರು, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ ಭಾಗಗಳಿಂದ ಫೆ.12 ರಿಂದ 15ರವರೆಗೆ ವಿಶೇಷ ಬಸ್ಗಳು ಸಂಚರಿಸಲಿವೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಮ್ಮಾರೆಡ್ಡಿ ತಿಳಿಸಿದ್ದಾರೆ.
ಭಕ್ತರ ದರ್ಶನಕ್ಕೆ ಅವಕಾಶಹೂವಿನಹಡಗಲಿ ; ತಾಲ್ಲೂಕಿನ ಮೈಲಾರ ಗ್ರಾಮದ ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕೋತ್ಸವ ಫೆ.14ರಂದು ಬೆಳಗಿನ ಜಾವ 4 ಗಂಟೆಗೆ ಗುಪ್ತ ಮೌನ ಸವಾರಿ ಹಾಗೂ ಸಂಜೆ 5.30 ಕ್ಕೆ ಕಾರ್ಣಿಕೋತ್ಸವ ಜರುಗಲಿದೆ. ಅಂದು ಬೆಳಿಗ್ಗೆ 6 ಗಂಟೆಯಿಂದ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಹಾಗೂ ವಿಶೇಷ ದರ್ಶನ ಮತ್ತು ಸಾರ್ವಜನಿಕ ದರ್ಶನಕ್ಕೆ ಅವಕಾಶ ಇರುತ್ತದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.