ಪಿ.ಸಿ ್ಘ ಪಿ.ಎನ್‌.ಡಿ.ಟಿ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆ ಅನಧಿಕೃತ ಗರ್ಭಪಾತ ನಡೆಸುವ ಆಸ್ಪತ್ರೆಯ ಪರವಾನಿಗೆ ರದ್ದು: ಡಾ ಲಿಂಗರಾಜು

PCG PNDT District Level Advisory Committee Meeting Cancels License of Unauthorized Abortion Hospita

ಪಿ.ಸಿ ್ಘ ಪಿ.ಎನ್‌.ಡಿ.ಟಿ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆ ಅನಧಿಕೃತ ಗರ್ಭಪಾತ ನಡೆಸುವ ಆಸ್ಪತ್ರೆಯ ಪರವಾನಿಗೆ ರದ್ದು: ಡಾ ಲಿಂಗರಾಜು 

ಕೊಪ್ಪಳ 12: ಆಸ್ಪತ್ರೆಗಳಲ್ಲಿ ಅನಧಿಕೃತ ಗರ್ಭಪಾತ ನಡೆಸಿದರೆ ಪ್ರಕರಣ ದಾಖಲಿಸಿ, ಅಂತಹ ಆಸ್ಪತ್ರೆಯ ಪರವಾನಿಗೆ ರದ್ದುಪಡಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ ಟಿ.ಲಿಂಗರಾಜು ಹೇಳಿದರು. 

ಅವರು ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಆಯೋಜಿಸಿದ್ದ ಪಿ.ಸಿ ಮತ್ತು ಪಿ.ಎನ್‌.ಡಿ.ಟಿ ಕಾಯ್ದೆ ಮತ್ತು ಎಂ.ಟಿ.ಪಿ ಕಾಯ್ದೆಯ ಅಡಿ ಬರುವ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. 

ಪಿ.ಸಿ ್ಘ ಪಿ.ಎನ್‌.ಡಿ.ಟಿ ಕಾಯ್ದೆ-1994 ರಡಿಯಲ್ಲಿ ಭ್ರೂಣ ಲಿಂಗ ಪತ್ತೆ ಮತ್ತು ಭ್ರೂಣಲಿಂಗ ಆಯ್ಕೆಗೆ ಅವಕಾಶವಿಲ್ಲ. ಆದಾಗ್ಯೂ ಇಂತಹ ಕಾನೂನು ಬಾಹಿರ ಕ್ರಮಗಳಲ್ಲಿ ಭಾಗಿಯಾದಲ್ಲಿ ಅಂತವರ ವಿರುದ್ಧ ಕಠಿಣವಾದ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಕಾಯ್ದೆಯಡಿ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಕಾನೂನು ಬಾಹಿರ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ. ಇದಲ್ಲದೆ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಕುರಿತಂತೆ ಯಾವುದೇ ರೀತಿಯ ಜಾಹೀರಾತು ನೀಡುವಂತಿಲ್ಲ. ಸರ್ಕಾರಿ ಅಥವಾ ಖಾಸಗಿ ಯಾವುದೇ ವೈದ್ಯರು ಇಂತಹ ಕೃತ್ಯಗಳಲ್ಲಿ ಭಾಗಿಯಾದಲ್ಲಿ ಅವರ ವಿರುದ್ಧ ಕಠಿಣ ಕ್ರಮಕ್ಕೂ ಅವಕಾಶವಿದ್ದು, ಇದರ ತಪಾಸಣಾ ಮತ್ತು ಮೇಲ್ವಿಚಾರಣೆಗಾಗಿ ಜಿಲ್ಲಾ ಮಟ್ಟದ, ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿಯನ್ನು ಕಾಯ್ದೆಯಡಿ ರಚಿಸಲಾಗಿದೆ. ತಪಾಸಣಾ ಸಮಿತಿಯು ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಭೇಟಿ ನೀಡಿ, ಪರೀಶೀಲಿಸಿ, ಸಲಹಾ ಸಮಿತಿ ಸಭೆಯಲ್ಲಿ ವರದಿ ನೀಡುತ್ತದೆಂದರು. 

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ರವೀಂದ್ರನಾಥ್ ಎಂ.ಎಚ್ ಅವರು ಮಾತನಾಡಿ, ಎಲ್ಲ  ಸ್ಕ್ಯಾನಿಂಗ್ ಸೆಂಟರ್‌ಗಳು ಪಿ.ಸಿ ್ಘ ಪಿ.ಎನ್‌.ಡಿ.ಟಿ ಕಾಯ್ದೆಯಡಿ ನಿಯಮಾನುಸಾರ ನೋಂದಣಿ ಮಾಡಿಕೊಳ್ಳಬೇಕು ಹಾಗೂ ನೋಂದಣಿ ಅವಧಿ ಪೂರ್ಣಗೊಳ್ಳುವುದಕ್ಕಿಂತ ಮೂರು ತಿಂಗಳ ಮುಂಚೆ ಅರ್ಜಿ ಸಲ್ಲಿಸಿ ನವೀಕರಣ ಮಾಡಿಕೊಳ್ಳಬೇಕು. ಸ್ಕ್ಯಾನಿಂಗ್ ಕುರಿತಾದ ಮಾರ್ಗಸೂಚಿಗಳನ್ನು ಪಾಲಿಸಿ ನಿಗದಿತ ನಮೂನೆಗಳನ್ನು ನಿರ್ವಹಿಸಬೇಕು. ನೋಂದಣಿ, ಪರವಾನಗಿ ನವೀಕರಣವಿಲ್ಲದ ಆರೋಗ್ಯ ಸಂಸ್ಥೆಗಳ ಮೇಲೆ, ನಿಗದಿತ ನಿಯಮ ಪಾಲನೆ ಹಾಗೂ ದಾಖಲಾತಿಗಳನ್ನು ನಿರ್ವಹಿಸದ ಆರೋಗ್ಯ ಸಂಸ್ಥೆಗಳನ್ನು ಮುಚ್ಚಿಸಲು ಅಥವಾ ಸ್ಥಗಿತಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲು ಕಾಯ್ದೆಯಡಿ ಅವಕಾಶವಿದೆ. ಪಿ.ಸಿ ಮತ್ತು ಪಿ.ಎನ್‌.ಡಿ.ಟಿ ಕಾಯ್ದೆ ಅನುಸಾರ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧಿಸಲಾಗಿದ್ದು, ಸರ್ಕಾರಿ ಅಥವಾ ಖಾಸಗಿ ಯಾವುದೇ ವೈದ್ಯರು ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆಯಂತಹ ಕೃತ್ಯಗಳಲ್ಲಿ ಭಾಗಿಯಾದಲ್ಲಿ ಅವರಿಗೆ ಕಾರಾಗೃಹ ಶಿಕ್ಷೆ ಸಹಿತ ದಂಡವನ್ನು ವಿಧಿಸಲಾಗುವುದು. ಮೊದಲ ಅಪರಾಧಕ್ಕೆ 5 ವರ್ಷ ವೈದ್ಯಕೀಯ ಪರವಾನಿಗೆಯನ್ನು ರದ್ದುಪಡಿಸುವುದು. ನಂತರದ ಅಪರಾದಕ್ಕೆ ಸಂಬಂಧಿಸಿದ ವೈದ್ಯರ ವೈದ್ಯಕೀಯ ಪರವಾನಿಗೆಯನ್ನು ರಾಜ್ಯ ವೈದ್ಯಕೀಯ ಮಂಡಳಿಯಿಂದ ಶಾಶ್ವತವಾಗಿ ತೆಗೆದು ಹಾಕಿ, ವೈದ್ಯಕೀಯ ವೃತ್ತಿ ನಡೆಸಲು ಆಜೀವ ನಿಷೇಧ ಹೇರಲಾಗುವುದು. ಒಂದು ವೇಳೆ ಸ್ವತಃ ಮಹಿಳೆ, ಆಕೆಯ ಪತಿ ಅಥವಾ ಸಂಬಂಧಿಕರು ಭ್ರೂಣ ಲಿಂಗ ಪತ್ತೆಗೆ ಯತ್ನಿಸಿ, ವೈದ್ಯರಿಗೆ ಒತ್ತಡ ಹೇರಿದಲ್ಲಿ ಅವರಿಗೆ ಮೂರರಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ರೂ.50 ಸಾವಿರದಿಂದ 1 ಲಕ್ಷದವರೆಗೆ ದಂಡವನ್ನು ವಿಧಿಸಲು ಅವಕಾಶವಿದೆ ಎಂದು ಸಭೆಗೆ ತಿಳಿಸಿದರು.  

ಸಭೆಯಲ್ಲಿ ಮುನಿರಾಬಾದ್ ಸಮುದಾಯ ಆರೋಗ್ಯ ಕೇಂದ್ರದ ಪ್ರಸೂತಿ ತಜ್ಞರು ಹಾಗೂ ಪಿ.ಸಿ ್ಘ ಪಿ.ಎನ್‌.ಡಿ.ಟಿ ಜಿಲ್ಲಾ ಮಟ್ಟದ ಸಲಹಾ ಸಮಿತಿಗೆ ಅಧ್ಯಕ್ಷರಾದ ಡಾ ಕೆ.ಹೆಚ್‌.ತೊಗರಿ, ಸಮಿತಿ ಸದಸ್ಯರುಗಳಾದ ಜಿಲ್ಲಾಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥರು ಹಾಗೂ ಮಕ್ಕಳ ತಜ್ಞರಾದ ಡಾ.ಗೀರೀಶ, ರೆಡಿಯಾಲಜಿಸ್ಟ್‌ ಡಾ.ದಯಾನಂದಸ್ವಾಮಿ, ಗಂಗಾವತಿ ಉಪ ವಿಭಾಗ ಆಸ್ಪತ್ರೆಯ ಪುಸೂತಿ ತಜ್ಞರಾದ ಡಾ. ಈಶ್ವರ ಸವಡಿ, ಸ್ತ್ರೀರೋಗ ತಜ್ಞರಾದ ಡಾ. ಸ್ಮಿತಾ ಜೆ. ಐಲಿ,  ಆರ್‌.ಐ.ಎಮ್ ಅಧ್ಯಕ್ಷರಾದ ಡಾ. ಶ್ರೀನಿವಾಸ್, ಗಂಗಾವತಿಯ ರಾಜಹಂಸ ಡಯಾಗೋಸ್ಟಿಕ್ ಸೆಂಟರ್‌ನ ಡಾ.ಮಲ್ಲನಗೌಡ ಪೊಲೀಸ್ ಪಾಟೀಲ್, ವಕೀಲರಾದ ಶಂಕರ ಬಿಸರಳ್ಳಿ, ಎನ್‌.ಜಿ.ಓ.ಗಳ ಪ್ರತಿನಿಧಿಗಳಾದ ಡಾ ವಿಶ್ವನಾಥ ಬಸವರಾಜ ನಲ್ವಾಡ, ಶಂಕ್ರ​‍್ಪ ಬಿ ಸುರಳ್, ರೇಷ್ಮಾ ಮತ್ತು ಸಲೀಮಾ ಜಾನ್ ಸೇರಿದಂತೆ ಇತರ ಸದಸ್ಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.