ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಪುರಸಭೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು: ಶಾಸಕ ಜೆ.ಎನ್‌.ಗಣೇಶ

Municipality should work sincerely in providing basic facilities: MLA JN Ganesh

ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಪುರಸಭೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು: ಶಾಸಕ ಜೆ.ಎನ್‌.ಗಣೇಶ 

ಕಂಪ್ಲಿ 20: ಬೇಸಿಗೆ ಇರುವದರಿಂದ ಪಟ್ಟಣದಲ್ಲಿ ಕುಡಿಯುವ ನೀರು, ಬೀದಿ ದೀಪ, ರಸ್ತೆ ಚರಂಡಿ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪುರಸಭೆ ಆಡಳಿತ ಹಾಗೂ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಲು ಮುಂದಾಗಬೇಕು ಎಂದು ಶಾಸಕ ಜೆ.ಎನ್‌.ಗಣೇಶ ಹೇಳಿದರು.  ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ರಸ್ತೆ, ವೃತ್ತ, ಸಮುದಾಯ ಭವನ ಸೇರಿದಂತೆ ಕೊಟ್ಯಾಂತರ ಅನುದಾನದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆ. ಮತ್ತು ಇನ್ನಷ್ಟು ಅಭಿವೃದ್ಧಿಗೆ ಸಹಕರಿಸಲಾಗುವುದು. ಮಾದರಿ ಪಟ್ಟಣವನ್ನಾಗಿ ನಿರ್ಮಿಸುವ ಜವಾಬ್ದಾರಿ ಪ್ರತಿಯೊಬ್ಬರ ಹೆಗಲಮೇಲಿದೆ ಎಂದರು. ನಂತರ ಅಧ್ಯಕ್ಷ ಭಟ್ಟ ಪ್ರಸಾದ್ ಇವರು ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಪಟ್ಟಣದ ಎಲ್ಲಾ ವಾರ್ಡ್‌ಗಳಲ್ಲಿ ಫಾಗಿಂಗ್ ಮಾಡುವ ಮೂಲಕ ಸೊಳ್ಳೆಗಳ ಕಾಟ ನಿಯಂತ್ರಿಸಬೇಕು. ಮತ್ತು ಚರಂಡಿ ಸ್ವಚ್ಚತೆಗೆ ಹೆಚ್ಚಿನ ಆಧ್ಯತೆ ನೀಡಬೇಕು. ಮತ್ತು ಪಟ್ಟಣದ ಬೀದಿಗಳಲ್ಲಿ ಸಾರ್ವಜನಿಕರ ಹಾಗೂ ವಾಹನ ಸವಾರರಿಗೆ ದೊಡ್ಡ ತಲೆನೊವಾಗಿರುವ ಬೀದಿ ದನಗಳ ಹಾವಳಿಗೆ ಸಂಪೂರ್ಣವಾಗಿ ಕಡಿವಾಣ ಹಾಕಬೇಕು.  ಸದಸ್ಯ ಸಿ.ಆರ್‌.ಹನುಮಂತ ಮಾತನಾಡಿ, ಪುರಸಭೆ ಪಕ್ಕದಲ್ಲಿರುವ ಬಿಎಸ್‌ವಿ ಶಾಲೆ ಕಟ್ಟಡ ಪುರಸಭೆ ಆಸ್ತಿಯಾಗಿದ್ದು, ಕಳೆದ ಹತ್ತು ವರ್ಷದಿಂದ ಇಲ್ಲಿನ ಶಾಲೆಯನ್ನು ಪುರಸಭೆ ವಶಕ್ಕೆ ತೆಗೆದುಕೊಳ್ಳಬೇಕೆಂದು ಪ್ರತಿ ಸಭೆಯಲ್ಲಿ ಹೇಳುತ್ತಾ ಬಂದರೂ, ಆಗುತ್ತಿಲ್ಲ. ಆದ್ದರಿಂದ ಕೂಡಲೇ ಅಧಿಕಾರಿಗಳು ಇಲ್ಲಿನ ಶಾಲೆಯನ್ನು ಪುರಸಭೆ ವಶಕ್ಕೆ ಪಡೆದುಕೊಳ್ಳಬೇಕು. ಆದಷ್ಟು ಬೇಗ ಶಾಲೆಯವರು ಜಾಗ ಖಾಲಿ ಮಾಡಬೇಕು. ಇಲ್ಲವಾದಲ್ಲಿ ಹೋರಾಟ ಮಾಡಲಾಗುತ್ತದೆ. ಪೋಷಕರು ಮಕ್ಕಳನ್ನು ಬೇರೆ ಕಡೆ ಶಾಲೆಗೆ ಸೇರಿಸಬೇಕು ಎಂದರು. ಪುರಸಭೆ ಸಭಾಂಗಣ ಅಭಿವೃದ್ಧಿಪಡಿಸುವುದು. ಇಂದಿರಾ ಕ್ಯಾಂಟಿನ್‌ಗೆ ಕಾಂಪೌಂಡ್ ಗೋಡೆ, ವಾಚ್ ಮ್ಯಾನ್ ನಿಯೋಜನೆ ಮಾಡುವುದು. ಜಾಕ್‌ವೆಲ್‌ಗೆ 30 ಅಶ್ವಶಕ್ತಿಯ ಮೋಟರ್ ಖರೀದಿಸಿ ಅಳವಡಿಕೆ ಮಾಡುವುದು. ವೃತ್ತಗಳಿಗೆ ಪುತ್ತಳಿ ಅನಾವರಣಗೊಳಿಸುವುದು, ಹೊಸ ವೃತ್ತ ನಿರ್ಮಿಸುವುದು. ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಸಿಸಿ ಕ್ಯಾಮರ ಅಳವಡಿಸುವುದು. ಹೀಗೆ ನಾನಾ ವಿಷಯಗಳ ಸಂಬಂಧ ಚರ್ಚಿಸಿ, ತೀರ್ಮಾನ ಕೈಗೊಳ್ಳುವ ಜತೆಗೆ ಅಧ್ಯಕ್ಷರ ಅಪ್ಪಣೆ ಮೇರೆಗೆ ಇನ್ನಿತರ ವಿಷಯಗಳನ್ನು ಚರ್ಚಿಸಲಾಯಿತು.  ಈ ಸಂಧರ್ಭದಲ್ಲಿ ಮುಖ್ಯಾಧಿಕಾರಿ ಕೆ.ದುರುಗಣ್ಣ, ಉಪಾಧ್ಯಕ್ಷೆ ಸುಶೀಲಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಉಸ್ಮಾನ್, ಸದಸ್ಯರಾದ ಸದಸ್ಯ ಟಿ.ವಿ.ಸುದರ್ಶನರೆಡ್ಡಿ ವೀರಾಂಜನೇಯ, ಲೊಡ್ಡು ಹೊನ್ನೂರವಲಿ, ರಾಮಾಂಜನೀಯಲು, ಮೌಲಾ, ಆಂಜನೇಯ, ಸುಮಾ, ನಾಗಮ್ಮ, ಗುಡುದಮ್ಮ, ನಾಮ ನಿರ್ದೇಶಿತ ಸದಸ್ಯರಾದ ಕೆ.ಕೃಷ್ಣ, ಗದ್ಗಿ ವಿರೂಪಾಕ್ಷಿ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.