ಮೋಕಾ: ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಕಾನೂನುಗಳ ಕುರಿತು ಜಾಗೃತಿ ಕಾರ್ಯಕ್ರಮ
ಬಳ್ಳಾರಿ 12: ತಾಲ್ಲೂಕಿನ ಮೋಕಾ ಗ್ರಾಮದ ಕರ್ನಾಟಕ ಪಬ್ಲಿಕ್ ಫ್ರೌಡ ಶಾಲೆಯ ಮಕ್ಕಳಿಗೆ ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಕಾನೂನುಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ಬುಧವಾರ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಮೋಕಾ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಕಾಳಿಂಗ ಅವರು ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಮಕ್ಕಳ ರಕ್ಷಣೆ ಮತ್ತು ಪೋಷಣೆ ನಮ್ಮೆಲರ ಹೊಣೆಯಾಗಿದ್ದು, ಮಕ್ಕಳನ್ನು ಬಾಲ್ಯವಿವಾಹ, ಬಾಲಕಾರ್ಮಿಕ, ಭಿಕ್ಷಾಟನೆ, ಲೈಂಗಿಕ ಕಿರುಕುಳದಿಂದ ಮತ್ತು ಇನ್ನಿತರೆ ಸಂಕಷ್ಟಕ್ಕೆ ಒಳಗಾದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅಂತಹ ಸಮಸ್ಯೆಗಳು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಅಥವಾ 112 ಗೆ ಕರೆ ಮಾಡಿ ತಿಳಿಸಬೇಕು ಎಂದು ಹೇಳಿದರು.ಮಕ್ಕಳ ಸಹಾಯವಾಣಿ ಜಿಲ್ಲಾ ಸಂಯೋಜಕ ಆನಂದ್ ಅವರು ಮಕ್ಕಳ ಸಹಾಯವಾಣಿ(1098)ಯ ಕಾರ್ಯವೈಖರಿ, ಬಾಲ್ಯವಿವಾಹ ಹಾಗೂ ಬಾಲಕಾರ್ಮಿಕತೆಯ ದುಷ್ಪರಿಣಾಮ ಮತ್ತು ಕಾಯ್ದೆ ಕುರಿತು ತಿಳಿಸಿದರು.
ಕಾನೂನು ಪರೀವೀಕ್ಷಣಾಧಿಕಾರಿ ಈಶ್ವರ್ ರಾವ್ ಅವರು, ಪೋಕ್ಸೋ ಕಾಯ್ದೆ ಹಾಗೂ ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶ ಕುರಿತು ಸಂಪೂರ್ಣ ಮಾಹಿತಿ ನೀಡಿದರು.ಮಕ್ಕಳ ವಿಶೇಷ ಪೊಲೀಸ್ ಘಟಕದ ಅಧಿಕಾರಿ ಲಲಿತಮ್ಮ ಅವರು ಹೆಣ್ಣು ಮಕ್ಕಳ ಸುರಕ್ಷತೆ ಮತ್ತು ನವದುರ್ಗಿ ಪೊಲೀಸ್ ತಂಡದ ಕುರಿತು ಜಾಗೃತಿ ಮೂಡಿಸಿದರು.ನಂತರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಯೋಜನೆಗಳ ಕುರಿತು ಮಕ್ಕಳ ರಕ್ಷಣಾಧಿಕಾರಿ ಚನ್ನಬಸಪ್ಪ ಪಾಟೀಲ್ ಅವರು ಮಾಹಿತಿ ನೀಡಿದರು. ಬಳಿಕ ಮಿಷನ್ ಶಕ್ತಿ ಯೋಜನೆಯ ಜಿಲ್ಲಾ ಸಂಯೋಜರಕರಾದ ಶಹಜಾನ್ ಅವರು “ಭೇಟಿ ಬಚವೋ, ಭೇಟಿ ಪಡವೋ” ಅಭಿಯಾನದ ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆ ಮತ್ತು ಸಬಲೀಕರಣ ಕುರಿತು ಮಾತನಾಡಿದರು.
ಇದೇ ವೇಳೆ ಎಲ್ಲಾ ಮಕ್ಕಳಿಗೆ ಹೆಣ್ಣು ಮಕ್ಕಳ ರಕ್ಷಣೆ ಕುರಿತು ಪ್ರತಿಜ್ಞಾವಿಧಿ ಭೋದಿಸಿದರು.ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರುಗಳಾಧ ಜೆ.ಭಾರತಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ಮಹೇಶ್ ಗೌಡ, ಅಂಗನವಾಡಿ ಮೇಲ್ವಿಚಾರಕರಾದ ಪಿ.ಚಾಂದಿಬಾಯಿ, ಆಪ್ತಸಮಾಲೋಚಕರಾದ ಸುಧಾ, ಹಿಂದಿ ಮತ್ತು ದೈಹಿಕ ಶಿಕ್ಷಕರಾದ ಗಾದಿಲಿಂಗಪ್ಪ,, ನವದುರ್ಗಿ ತಂಡದ ಸರಸ್ವತಿ ಮತ್ತು ಶಿಲ್ಪ ಸೇರಿದಂತೆ ಶಾಲೆಯ ಸಹ ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.