ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮ ಗೌಡ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಸಚಿವರು
ಕಾರವಾರ 13: ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು, ಗುರುವಾರ ನಿಧನರಾದ ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮ ಗೌಡ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾರ್ಕೇಟಿಂಗ್ ಕನ್ಸಲೆಂಟ ಅಂಡ್ ಏಜೆನ್ಸಿಸ್ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಸೈಲ್, ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಮತ್ತಿತರರು ಉಪಸ್ಥಿತರಿದ್ದರು. ಪದ್ಮಶ್ರೀ ಪುರಷ್ಕೃತೆ ಸುಕ್ರಿ ಬೊಮ್ಮ ಗೌಡ ನಿಧನ ; ಗಣ್ಯರಿಂದ ಸಂತಾಪ ಜಿಲ್ಲಾ ಉಸ್ತುವಾರಿ ಸಚಿವರ ಸಂತಾಪ: ಜಾನಪದ ಗಾನಕೋಗಿಲೆ ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮ ಗೌಡ ಅವರು ನಮ್ಮನ್ನೆಲ್ಲ ಅಗಲಿರುವ ಸುದ್ದಿ ತಿಳಿದು ಮನಸ್ಸಿಗೆ ದುಃಖ ಉಂಟಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಜನಿಸಿ, ತಮ್ಮ ಜಾನಪದ ಗಾಯನದ ಮೂಲಕ ಜಾನಪದ ಕ್ಷೇತ್ರದಲ್ಲಿ ಮೈಲುಗಲ್ಲು ಸೃಷ್ಟಿಸಿದ ಸುಕ್ರಿ ಗೌಡರನ್ನು ಕಳೆದುಕೊಂಡಿರುವುದು ಜಾನಪದ ಕ್ಷೇತ್ರಕ್ಕೆ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಕೋರಿ, ಕುಟುಂಬ ವರ್ಗಕ್ಕೆ ಹಾಗೂ ಅಭಿಮಾನಿಗಳಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ಸಂಸದ ಕಾಗೇರಿ ಸಂತಾಪ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜಾನಪದ ಗಾಯಕಿ ಹೋರಾಟಗಾರ್ತಿ ಸುಕ್ರಿ ಬೊಮ್ಮ ಗೌಡ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಗುರುವಾರ ನಿಧನರಾದ ಸುದ್ದಿ ಕೇಳಿ ಅಘಾತವಾಯಿತು. ಸುಕ್ರಜ್ಜಿ ಎಂದೇ ಖ್ಯಾತರಾಗಿದ್ದ ಅವರು ಹಾಲಕ್ಕಿ ಜನಪದ ಹಾಡುಗಳನ್ನು ಹಾಡುವ ಮೂಲಕ ಚಿರಪರಿಚಿತರಾಗಿದ್ದರು ಮತ್ತು ಮಧ್ಯ ಮಾರಾಟ ಹಾವಳಿ ಹೆಚ್ಚಿದ್ದರಿಂದ ಅದನ್ನು ತಡೆಯಲು ಹಲವು ದಶಕಗಳ ಹಿಂದೆ ಜನಾಂದೋಲನ ಸಹ ನಡೆಸಿದ್ದರು. ಜಾನಪದ ಶ್ರೀ, ನಾಡೋಜ ಪ್ರಶಸ್ತಿಗೆ ಕೂಡ ಅವರು ಭಾಜನರಾಗಿದ್ದರು. ಕೇಂದ್ರ ಸರಕಾರ ಅವರ ಜನಪದ ಪ್ರೇಮ ಮತ್ತು ಸಾಮಾಜಿಕ ಸೇವೆಯನ್ನು ಮೆಚ್ಚಿ ಭಾರತ ಸರ್ಕಾರದಿಂದ ಕೊಡಮಾಡುವ "ಪದ್ಮಶ್ರೀ" ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಸುಕ್ರಿ ಗೌಡ ಅವರ ಅಗಲುವಿಕೆಯಿಂದ ಜನಪದ ಸಂಸ್ಕೃತಿ ಸಂರಕ್ಷಕಿಯಾಗಿದ್ದ, ಅದಮ್ಯ ಚೇತನವನ್ನು ನಾಡು ಕಳೆದುಕೊಂಡಂತಾಗಿದೆ. ಸುಕ್ರಿ ಗೌಡರ ಅಗಲುವಿಕೆಯಿಂದ ಅವರ ಕುಟುಂಬ ವರ್ಗದವರಿಗೆ ಮತ್ತು ಅಭಿಮಾನಿಗಳಿಗೆ ಬಂಧುಗಳಿಗೆ ಹಾಗೂ ಸಮುದಾಯದವರಿಗೆ ದುಃಖವನ್ನು ಬರಿಸುವ ಶಕ್ತಿಯನ್ನು ನೀಡಲೆಂದು ಮತ್ತು ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.