ಧ್ಯಾನದಿಂದ ಮನಸ್ಸಿನ ನಿಯಂತ್ರಣ ಸಾಧ್ಯ: ಹಿರೇಮಠ

Meditation can control the mind: Hirematha

ಧ್ಯಾನದಿಂದ ಮನಸ್ಸಿನ ನಿಯಂತ್ರಣ ಸಾಧ್ಯ: ಹಿರೇಮಠ  

ತಾಳಿಕೋಟಿ: ಮನುಷ್ಯನ ಮನಸ್ಸು ಚಂಚಲ ಅದು ವಿಕಾರಗೊಳ್ಳದಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ ಆಧ್ಯಾತ್ಮಿಕ ಒಲವು,ಧ್ಯಾನದಿಂದ ಮನಸ್ಸಿನ ನಿಯಂತ್ರಣ ಸಾಧ್ಯವಾಗುತ್ತದೆ ಎಂದು ಪುರಾಣಿಕ ಸಿ.ಎಂ. ಹಿರೇಮಠ ಹೇಳಿದರು.  

ಪಟ್ಟಣದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಹುಣ್ಣಿಮೆ ಸತ್ಸಂಗದ ಅಂಗವಾಗಿ ಭಾನುವಾರ ಹಮ್ಮಿಕೊಂಡ ಆಧ್ಯಾತ್ಮಿಕ ಚಿಂತನ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿ ಶರಣರ ಬದುಕಿನ ಚಿಂತನೆಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಅದರಿಂದಲೇ ನಮಗೆ ನಿಜವಾದ ಜ್ಞಾನದ ಅರಿವಾಗುತ್ತದೆ ಜ್ಞಾನದ ಬಲದಿಂದಲೇ ಅಜ್ಞಾನವು ದೂರವಾಗುತ್ತದೆ ಎಂದರು. 

ಎಸ್‌.ಎಂ. ಬೇನಾಳಮಠ ಹಾಗೂ ಶಿವಶರಣೆ ಕಾಶಿಬಾಯಿ ಬಂಟನೂರ ಅಮ್ಮನವರು ಮಾತನಾಡಿ ಪ್ರತಿಯೊಬ್ಬರಿಗೂ ಧರ್ಮ ಸಂಸ್ಕಾರ ಅಗತ್ಯವಾಗಿದೆ. ಉತ್ತಮ ಸಂಸ್ಕಾರಗಳಿಂದಲೇ ಬದುಕು ಪಾವನವಾಗುತ್ತದೆ, ಶರಣರು ಕಾಯಕ ಹಾಗೂ ದಾಸೋಹ ತತ್ವಕ್ಕೆ ಹೆಚ್ಚು ಮಹತ್ವ  ನೀಡಿದ್ದಾರೆ ಅದನ್ನು ಬದುಕಿನುದ್ದಕ್ಕೂ ಪಾಲಿಸುವವ ರಾಗೋಣ  ಎಂದರು.  

ಸಾನಿಧ್ಯ ವಹಿಸಿ ಮಾತನಾಡಿದ ಶಿವಶರಣೆ ಕೋಳೂರ ಅಮ್ಮನವರು ಮಾನವ ಜನ್ಮ ದೊಡ್ಡದು, ಜನ್ಮ ಜನ್ಮಗಳ ಪುಣ್ಯದ ಫಲದಿಂದ ಈ ಜೀವನ ಪ್ರಾಪ್ತವಾಗಿದೆ ಇದನ್ನು ಮೋಜು ಮಜಾಗಾಗಿ ವ್ಯರ್ಥಗೊಳಿಸದೆ ಇಂಥ ಸತ್ಸಂಗಗಳಲ್ಲಿ ಭಾಗವಹಿಸಿ ಅರಿವು ಆದರ್ಶ ಮತ್ತು ಆಚರಣೆಗಳ ಮೂಲಕ ಸಾರ್ಥಕ ಮಾಡಿಕೊಳ್ಳಿ ಎಂದರು.  

ಗೌರಿ ಪ್ರಾರ್ಥಿಸಿದರು. ಮುಖ್ಯ ಶಿಕ್ಷಕಿ ಸುಮಂಗಲಾ ಕೋಳೂರ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದ ನಂತರ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು.