ರಾಯಚೂರು ಜಿಲ್ಲೆಯ ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಉಂಟಾಗಿರುವ ಓಷಧಿ ಕೊರತೆ; ತುರ್ತು ಕ್ರಮಕ್ಕೆ ಆಗ್ರಹ

ರಾಯಚೂರು ಜಿಲ್ಲೆಯ ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಉಂಟಾಗಿರುವ ಓಷಧಿ ಕೊರತೆ; ತುರ್ತು ಕ್ರಮಕ್ಕೆ ಆಗ್ರಹ Medicine shortage in many government hospitals in Raichur district; Urgent action demanded

ರಾಯಚೂರು 06: ಕಲ್ಯಾಣ ಕರ್ನಾಟಕ ಭಾಗದ ಅತ್ಯಂತ ಹಿಂದುಳಿದ ಪ್ರದೇಶವಾದ ರಾಯಚೂರು ಸೇರಿದಂತೆ ರಾಜ್ಯದಲ್ಲಿನ ಸರ್ಕಾರಿ ಆಸ್ಪತ್ರೆಗಳು ಜೀವರಕ್ಷಕ ಓಷಧಗಳ ಕೊರತೆ ಎದುರಿಸುತ್ತಿರುವುದು ಆಘಾತಕಾರಿಯಾಗಿದೆ. ಇದು ಜನಸಾಮಾನ್ಯರ ಆರೋಗ್ಯದ ಹಕ್ಕಿನ ನಿರಾಕರಣೆಯೂ ಆಗಿದೆ. ಜ್ವರ, ಸಾಮಾನ್ಯ ನೋವು ನಿವಾಕರಗಳು, ಐವಿ ದ್ರಾವಣ ಹಾಗೂ ಆಂಟಿಬಯೋಟಿ-ಕ್ ರೀತಿಯ ನಿತ್ಯ ಬಳಕೆಯ ಓಷಧಗಳು ಅನೇಕ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲ. ರಾಜ್ಯ ಓಷಧ ಉಗ್ರಾಣದಲ್ಲಿ (ವೇರ್ ಹೌಸ್) ಓಷಧಗಳ ಕೊರತೆ ತೀವ್ರಗೊಂಡು, ಸರ್ಕಾರಿ ಆರೋಗ್ಯ ಸಂಸ್ಥೆಗಳಿಗೆ ಬೇಡಿಕೆಗೆ ತಕ್ಕಷ್ಟು ಓಷಧಗಳು ಪೂರೈಕೆಯಾಗುತ್ತಿಲ್ಲ. ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ, ಹಳೇ ಮೈಸೂರು ಭಾಗ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಓಷಧಗಳ ತೀವ್ರ ಕೊರತೆ ಇದೆ.

1100ಕ್ಕೂ ಹೆಚ್ಚು ಮಾದರಿಯ ಓಷಧಗಳ ಸಂಗ್ರಹ ಜಿಲ್ಲಾ ಓಷಧ ಉಗ್ರಾಣಗಳಲ್ಲಿ ಇರುವುದು ಅಗತ್ಯ. ಆದರೆ, ರಾಯಚೂರು ಜಿಲ್ಲೆಯ ಹಲವು ಆಸ್ಪತ್ರೆಗಳಲ್ಲಿ ನಾವು ವಿಚಾರಿಸಿದಾಗ 116ರಿಂದ 120 ಓಷಧಿಗಳು ಮಾತ್ರ ಲಭ್ಯವಿದ್ದು, ಅದರಲ್ಲಿಯೂ 80ಕ್ಕೂ ಹೆಚ್ಚು ಓಷಧಿಗಳು ಅತ್ಯಂತ ಕಡಿಮೆ ಬಳಕೆಯ ಓಷಧಿಗಳಾಗಿವೆ. ಉಳಿದಂತೆ ಕೇವಲ ಬೆರಳೆಣಿಕೆಯ ಓಷಧಿಗಳು ಮಾತ್ರ ಆಸ್ಪತ್ರೆಯಲ್ಲಿ ದಾಸ್ತಾನು ಇದೆ. ಓಷಧಗಳ ಕೊರತೆಯ ಕಾರಣದಿಂದಾಗಿಯೇ ಕೆಲವು ಆಸ್ಪತ್ರೆಗಳಲ್ಲಿ ತುರ್ತಾಗಿ ನಡೆಸಬೇಕಾಗಿದ್ದ ಶಸ್ತ್ರಚಿಕಿತ್ಸೆಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಹೊಲಿಗೆ, ಬ್ಯಾಂಡೇಜ್ ಸಾಮಗ್ರಿಗಳ ಕೊರತೆಯನ್ನೂ ಆಸ್ಪತ್ರೆಗಳು ಎದುರಿಸುತ್ತಿವೆ. ಸರ್ಕಾರದ ನಿರ್ಲಕ್ಷ್ಯ ಮತ್ತು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಜ್ವಲಂತ ನಿದರ್ಶನವಾಗಿದೆ. ತುರ್ತು ಅವಶ್ಯಕತೆ ಆಧರಿಸಿ ರೋಗಿಗಳ ಸಂಬಂಧಿಕರು ಖಾಸಗಿ ಮಳಿಗೆಗಳಿಂದ ಹಣ ತೆತ್ತು ಓಷಧ ಖರೀದಿಸುವ ಸ್ಥಿತಿ ಉಂಟಾಗಿರುತ್ತದೆ. ಸರ್ಕಾರಿ ಆಸ್ಪತ್ರೆಗಳ ವೈದ್ಯರು ಓಷಧಗಳನ್ನು ಹೊರಗೆ ಖರೀದಿಸುವಂತೆ ರೋಗಿಗಳಿಗೆ ಸಲಹೆ ನೀಡುತ್ತಿದ್ದಾರೆ. ಕೆಲವು ಕಡೆ ವಿವಿಧ ಯೋಜನೆಗಳಡಿ ಸ್ಥಳೀಯವಾಗಿ ಓಷಧ ಖರೀದಿಸಿ ಸಮಸ್ಯೆ ಪರಿಹರಿಸಲು ಹರಸಾಹಸ ನಡೆಸಲಾಗುತ್ತಿದೆ. ಓಷಧಗಳ ಕೊರತೆ ನಿವಾರಣೆಗೆ ಸಂಬಂಧಿಸಿದಂತೆ 496 ಓಷಧಗಳ ಖರೀದಿ ಪ್ರಕ್ರಿಯೆ ನಡೆದಿದೆ ಎಂದು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಹೇಳಿದೆ ಆದರೆ ತುರ್ತು ಕ್ರಮವಾಗುತ್ತಿಲ್ಲ.

ಕುಡಿಯುವ ನೀರು, ಶಿಕ್ಷಣ, ವಸತಿಯಂತೆ ಆರೋಗ್ಯವೂ ನಾಗರಿಕರಿಗೆ ಸರ್ಕಾರ ಒದಗಿಸಬೇಕಾದ ಅಗತ್ಯ ಮೂಲ ಸೌಕರ್ಯಗಳಲ್ಲೊಂದು. ಬಡವರು ಹಾಗೂ ಜನಸಾಮಾನ್ಯರು ತಮ್ಮ ಆರೋಗ್ಯ ಸಮಸ್ಯೆಗಳಿಗೆ ಸರ್ಕಾರಿ ಆಸ್ಪತ್ರೆಗಳನ್ನು ಅವಲಂಬಿಸಿರುತ್ತಾರೆ. ಆರ್ಥಿಕವಾಗಿ ದುರ್ಬಲರಾದವರು ಓಷಧಗಳ ಕೊರತೆಯಿಂದ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸುವ ಸ್ಥಿತಿ ಸೃಷ್ಟಿಯಾಗುವುದು ಯಾವುದೇ ಜನಪರ ಸರ್ಕಾರಕ್ಕೆ ಶೋಭೆ ತರುವಂತಹದ್ದಲ್ಲ. ಓಷಧ ಖರೀದಿ ಪ್ರಕ್ರಿಯೆಯನ್ನು ಸರಳಗೊಳಿಸಿ. ಸ್ಥಳೀಯ ಖರೀದಿಗೆ ಹೆಚ್ಚಿನ ಅಧಿಕಾರ ನೀಡುವುದು ಮತ್ತು ಓಷಧಗಳ ಸಂಗ್ರಹದ ವಿವರಗಳನ್ನು ಡಿಜಿಟಲೈಸ್ಗೊಳಿಸುವ ಮೂಲಕ ವೈದ್ಯಕೀಯ ವ್ಯವಸ್ಥೆಯನ್ನು ಸರ್ಕಾರ ಬಲಗೊಳಿಸಬೇಕಾಗಿದೆ.

ಸರ್ಕಾರದ ನಡಾವಳಿಯ ಅನ್ವಯ, ರಾಜ್ಯದ ಸರ್ಕಾರಿ ಆರೋಗ್ಯ ಸಂಸ್ಥೆಗಳಾದ ಜಿಲ್ಲಾ ಆಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಇತರೆ ಆರೋಗ್ಯ ಸಂಸ್ಥೆಗಳಿಗೆ ಅಗತ್ಯ ಓಷಧಿಗಳ ಖರೀದಿಗಾಗಿ ಹೆಚ್ಚಿನ ಅನುದಾನವನ್ನು ನೀಡಲು ತೀರ್ಮಾನಿಸಿದಂತೆ, ದಿನಾಂಕ: 18-02-2026ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ (ಪ್ರ) (ಕುಟುಂಬ ಕಲ್ಯಾಣ) ಇವರು ಆದೇಶ ಹೊರಡಿಸಿರುತ್ತಾರೆ. ಏಖಒಖಅಐ ಬ್ಯಾಂಕ್ ಖಾತೆಯಲ್ಲಿ ಲಭ್ಯವಿರುವ ರೂ. 30 ಕೋಟಿ ಹಣವನ್ನು ತಾತ್ಕಾಲಿಕವಾಗಿ ಎರಡು ತಿಂಗಳ ಅವಧಿಗೆ ಅಗತ್ಯ ಓಷಧಿಗಳ ಸ್ಥಳೀಯ ಖರೀದಿಗಾಗಿ ಬಳಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿರುತ್ತಾರೆ.

ರಾಜ್ಯದಲ್ಲಿ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಅಂದಾಜು 3000 ಆಸ್ಪತ್ರೆಗಳಿದ್ದು, ಈ ಆಸ್ಪತ್ರೆಗಳಿಗೆ ಕೇವಲ 30 ಕೋಟಿ ರೂ. ಹಣದಲ್ಲಿ ಓಷಧಿ ಸೌಲಭ್ಯ ಕಲ್ಪಿಸಲು ಅಸಾಧ್ಯದ ಮಾತಾಗಿದೆ. ಹಾಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ತಡಮಾಡದೇ ವಾರದ ಒಳಗಾಗಿ ಅಗತ್ಯ ಅನುದಾನವನ್ನು ಕಡ್ಡಾಯವಾಗಿ ಮಂಜೂರು ಮಾಡುವ ಮೂಲಕ ಜೀವರಕ್ಷಕ ಓಷಧಗಳನ್ನು ಪೂರೈಸಬೇಕು ಎಂದು ಈ ಮೂಲಕ ಆಗ್ರಹಿಸುತ್ತೇವೆ. ಹಕ್ಕೊತ್ತಾಯಗಳು:-1) ಜೀವ ರಕ್ಷಕ ಓಷಧ ಸೇರಿದಂತೆ ಅಗತ್ಯ ಓಷಧಿಗಳಿಗಾಗಿ ಜಿಲ್ಲಾ ಆಸ್ಪತ್ರೆಗಳಿಗೆ 5 ಕೋಟಿ ಹಾಗೂ ತಾಲೂಕು ಆಸ್ಪತ್ರೆಗಳಿಗೆ 2 ಕೋಟಿ ರೂ. ಅನುದಾನವನ್ನು ತಕ್ಷಣವೇ ಮಂಜೂರು ಮಾಡಬೇಕು.

2) ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಜನರ ತಲಾ ಆದಾಯ ಬಹಳಷ್ಟು ಕಡಿಮೆ ಇರುವುದರಿಂದ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಲು ದುರ್ಬಲ ವರ್ಗಗಳು ಸಂಕಷ್ಟ ಪರಿಸ್ಥಿತಿ ಅನುಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಗಳಿಗೆ ರೂ. 7 ಕೋಟಿ ಹಾಗೂ ತಾಲೂಕು ಆಸ್ಪತ್ರೆಗಳಿಗೆ ರೂ.3 ಕೋಟಿ ಅನುದಾನ ಬಿಡುಗಡೆಗೊಳಿಸಬೇಕು. 3) ಜೀವ ರಕ್ಷಕ ಓಷಧಗಳ ಕೊರತೆ ಸಮಸ್ಯೆ ಮರುಕಳಿಸದಂತೆ ಎಚ್ಚರವಹಿಸಬೇಕು. 4) ಸಿಂಧನೂರಿಗೆ ಮಂಜೂರಾಗಿರುವ 200 ಹಾಸಿಗೆ ಸಾಮರ್ಥ್ಯದ ಜಿಲ್ಲಾ ಆಸ್ಪತ್ರೆ ನೂತನ ಕಟ್ಟಡವನ್ನು ಅತ್ಯಂತ ವ್ಯವಸ್ಥಿತವಾಗಿ ಮತ್ತು ವೈಜ್ಞಾನಿಕ ಮಾನದಂಡಗಳನ್ನು ಅನುಸರಿಸಿ ಅತ್ಯಂತ ಶೀಘ್ರವಾಗಿ ನಿರ್ಮಾಣ ಮಾಡಬೇಕು.

5) ಸಿಂಧನೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಟ್ರಾಮಾ ಸೆಂಟರ್ ನಿರ್ಮಾಣ ವಿಳಂಬವಾಗುತ್ತಿದ್ದು, ಕೆಲಸ ಚುರುಕುಗೊಳಿಸಿ ಸಾರ್ವಜನಿಕರ ಸೇವೆ ಶೀಘ್ರ ಆರಂಭಿಸಬೇಕು.6) ಸಿಂಧನೂರಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅಗತ್ಯ ವೈದ್ಯರು, ಸಿಬ್ಬಂದಿ ನೇಮಕ ಹಾಗೂ ಓಷಧಿಗಳ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕು.7) ಸರ್ಕಾರಿ ಸೇವೆಯಲ್ಲಿದ್ದು, ಸೇವಾವಧಿಯಲ್ಲಿ ಖಾಸಗಿ ಕ್ಲಿನಿಕ್ ನಡೆಸುವ ವೈದ್ಯರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು. ಈ ಸಂದರ್ಭದಲ್ಲಿ: ಸಿಪಿಐಎಂಎಲ್ ಲಿಬರೇಶನ್ ಜಿಲ್ಲಾ ಕಾರ್ಯದರ್ಶಿ ನಾಗರಾಜ್ ಪೂಜಾರ್, ತಾಲೂಕ ಕಾರ್ಯದರ್ಶಿ ಅಜೀಜ್ ಜಾಗೀರ್ದಾರ್, ಮುಖಂಡರಾದ ಜಿಲಾನಿ ಯರಿಗೇರಾ, ಜಗದೀಶ್, ಹನೀಫ್ ಅಬಕಾರಿ, ಭೀಮಣ್ಣ, ಮಹೇಶ್ ನಾಯಕ್, ನಿಸಾರ್ ಅಹ್ಮದ್ ಸೇರಿದಂತೆ ಇದ್ದರು.