ಜಿಲ್ಲಾಡಳಿತದಿಂದ ವಿಶ್ವ ಮಾನವ ದಿನಾಚರಣೆ ಅರ್ಥಪೂರ್ಣ ಆಚರಣೆ
ಹಾವೇರಿ 02: ಕುವೆಂಪು ಅವರು ಜಗತ್ತು ಕಂಡ ಅತ್ಯದ್ಭುತ ಕವಿಗಳು. ಇವರ ವಿಚಾರಧಾರೆಗಳನ್ನು ನಾವೆಲ್ಲರು ಅಳವಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಎಲ್ ನಾಗರಾಜ್ ಹೇಳಿದರು.ನಗರದ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಬಸವೇಶ್ವರ ಬಿ ಇಡಿ ಕಾಲೇಜ್ ಸಹಯೋಗದಲ್ಲಿ ಬುಧವಾರ ರಾಷ್ಟ್ರ ಕವಿ ಕುವೆಂಪು ಅವರ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಲಾದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದ ಅವರು, ರಾಷ್ಟ್ರ ಕವಿ ಕುವೆಂಪು ಅವರು ತಮ್ಮ ರಾಮಾಯಣ ದರ್ಶನಂದಲ್ಲಿ ಸಾಕ್ಷಷ್ಟು ವೈಚಾರಿಕತೆ ವಿಷಯನ್ನು ಕುರಿತು ತಿಳಿಸಿದ್ದಾರೆ. ಅವುಗಳನ್ನು ಅರ್ಥೈಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.
ಮನುಷ್ಯ ಹುಟ್ಟುವಾಗ ಯಾವುದೇ ಸಂಕೋಲೆಗಳಿಗೆ ಒಳಗಾಗದೆ ವಿಶ್ವ ಮಾನವನಾಗಿ ಹುಟ್ಟುತ್ತಾನೆ, ನಂತರದಲ್ಲಿ ವಿವಿಧ ಕಟ್ಟಪ್ಪಣೆಗೆ ಒಳಗಾಗಿ ಅಲ್ಪ ಮಾನವನಾಗಿ ಬಿಡುತ್ತಾನೆ. ಇದು ಹೀಗಾಗಬಾರದು ಮನುಷ್ಯ ಸ್ವತಂತ್ರನಾಗಿರಬೇಕು, ತನ್ನ ಇಷ್ಟದ ಜೀವನ ಸಾಗಿಸುವಂತಿರಬೇಕು, ಆಗ ಮಾತ್ರ ಪ್ರಬುದ್ಧ ಮಾನವನಾಗಿ ಇರಲು ಸಾಧ್ಯವಾಗುತ್ತದೆ ಎಂದರು.
ಬಳಿಕ ನಗರ ಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ ಮಾತನಾಡಿ, ರಾಷ್ಟ್ರ ಕವಿ ಕುವೆಂಪು ರವರು ಸಮಾಜದ ಒಳತಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ಅವರು ಬರೆದ ಅನೇಕ ಕೃತಿಗಳು, ಪುಸ್ತಕಗಳು ಇಂದಿನ ಯುವ ಸಮುದಾಯಕ್ಕೆ ತುಂಬಾ ಸಹಕಾರಿಯಾಗಿದೆ ಎಂದರು.
ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಶೇಖರ ಭಜಂತ್ರಿ ಹಾಗೂ ಬಿ.ಇಡ್ ಕಾಲೇಜ್ ಪ್ರಾಂಶುಪಾಲ ಬಿ ವಿ ಮಂಜುನಾಥ, ರಾಷ್ಟ್ರ ಕವಿ ಕುವೆಂಪು ಅವರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಶೀಲಾ ಪಾಟೀಲ್ ಹಾಗೂ ಶಿವಬಸವ ಬಣಕಾರ ರಾಷ್ಟ್ರ ಕವಿ ಕುವೆಂಪು ರಚಿತ ಗೀತೆಗಳನ್ನು ಹಾಡಿದರು.ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಮಾಳಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ.ಚಿನ್ನಿಕಟ್ಟಿ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.