ಲೋಕದರ್ಶನ ವರದಿ
ಗಂಗಾವತಿ 03: ಕರ್ನಾಟಕ ಕಂಡ ರಂಗಭೂಮಿಯ ಅಪ್ರತಿಮ ದಿವ್ಯ ಚೇತನ ಮಾಸ್ಟರ್ ಹಿರಣ್ಣಯ್ಯ ಅವರ ಬದುಕು ನೇರ ನಡೆ-ನುಡಿಗೆ ಹೆಸರಾಗಿದ್ದ ಅವರು ಲಂಚಾವತಾರ ಮುಂತಾದ ನಾಟಕಗಳು ಸಮಾಜದಲ್ಲಿ ಮತ್ತು ರಾಜಕೀಯ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದವು. ಸಾವಿರಾರು ಪ್ರಯೋಗ ಕಂಡ ಅವರ ನಾಟಕಗಳು ಇಂದಿಗೂ ಪ್ರಸ್ತುತವಾಗಿವೆ. ಅವರೊಬ್ಬ ರಂಗಭೂಮಿಯ ವಿಶ್ವವಿದ್ಯಾಲಯದಂತಿದ್ದರು ಎಂದು ಸಾಹಿತಿ ನಿಜಲಿಂಗಪ್ಪ ಮೆಣಸಗಿ ಅಭಿಪ್ರಾಯಪಟ್ಟರು.
ಅವರು ಕಸಾಪ ಭವನದಲ್ಲಿ ಶುಕ್ರವಾರ ಕಸಾಪ ತಾಲೂಕು ಘಟಕ ಏರ್ಪಡಿಸಿದ್ದ ಮಾಸ್ಟರ್ ಹಿರಣ್ಣಯ್ಯರವರಿಗೆ ನುಡಿನಮನ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡುತ್ತಿದ್ದರು.
ಪವನಕುಮಾರ ಗುಂಡೂರು ನುಡಿನಮನ ಸಲ್ಲಿಸಿ ಮಾತನಾಡುತ್ತಾ, "ಮಾಸ್ಟರ್ ಹಿರಣ್ಣಯ್ಯ ಅವರ ಬದುಕು ರಂಗಭೂಮಿಗೆ ಸಮರ್ಪಿಸಿತವಾಗಿತ್ತು. ಅವರ ನಾಟಕಗಳು ಅನೇಕ ಬಾರಿ ರಾಜಕೀಯ ತಲ್ಲಣಗಳಿಗೆ ಕಾರಣವಾಗಿದ್ದವು. ಅವರ ಮಾತಿನ ಶೈಲಿ ಆಕರ್ಷಕವಾಗಿತ್ತು" ಎಂದರು. ಕಸಾಪ ಅಧ್ಯಕ್ಷ ಎಸ್.ಬಿ ಗೊಂಡಬಾಳ ಮಾತನಾಡುತ್ತಾ, "ಸತ್ಯಕ್ಕೆ ಹರಿಶ್ಚಂದ್ರ, ಮುಖ್ಯಮಂತ್ರಿ ಸ್ಥಾನಕ್ಕೆ ಮುಖ್ಯಮಂತ್ರಿ ಚಂದ್ರು, ಹಾಗೆಯೇ ರಂಗಭೂಮಿಗೆ ಮಾಸ್ಟರ್ ಹಿರಣ್ಣಯ್ಯ ಒಬ್ಬರೇ. ಅವರ ನಾಟಕಗಳು ಸಾಮಾಜಿಕ ಕ್ರಾಂತಿಗೆ ಪ್ರೇರಕ ಶಕ್ತಿಯಾಗಿದ್ದವು. ಅವರು ಕಲಾ ಸರಸ್ವತಿಯ ಪುತ್ರರಾಗಿದ್ದರು. ಲಂಚಾವತಾರ ನಾಟಕ ರಂಗಭೂಮಿ ಕ್ಷೇತ್ರದಲ್ಲಿ ದಾಖಲಾರ್ಹ ಸಾಧನೆಯಾಗಿದೆ" ಎಂದರು. ನುಡಿನಮನದಲ್ಲಿ ಶರಣೇಗೌಡ ಪೊಲೀಸ್ ಪಾಟೀಲ್, ಬಸವರೆಡ್ಡಿ ಆಡೂರು, ಸಿ. ಮಹಾಲಕ್ಷ್ಮೀ, ಪಾಮಯ್ಯ ಶರಣರು, ಐ. ಫಕೃಸಾಬ್, ರಮೇಶ ಕುಲಕರ್ಣಿ ಶ್ರದ್ಧಾಂಜಲಿ ಅರ್ಪಿಸಿ ದರು. ಪ್ರಾರಂಭದಲ್ಲಿ ಆ ದಿವ್ಯ ಚೇತನಕ್ಕೆ ಚಿರಶಾಂತಿ ದೊರೆಯಲು ಒಂದು ನಿಮಿಷದ ಮೌನಾಚರಣೆ ಆಚರಿಸಲಾಯಿತು.