ಡಿ.9 ರಂದು ಬೆಳೆ ಪರಿಹಾರಕ್ಕೆ ಒತ್ತಾಯಿಸಿ ಬೃಹತ್ ಪ್ರತಿಭಟನೆ : ಎ ಎಸ್ ಪಾಟೀಲ್
ತಾಳಿಕೋಟಿ07 : ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲೂಕು ವ್ಯಾಪ್ತಿಯಲ್ಲಿ ಶೇ.80 ರಷ್ಟು ತೊಗರಿ ಬೆಳೆ ಹಾನೀಗೀಡಾಗಿದ್ದು ರೈತರು ಆತಂಕದಲ್ಲಿದ್ದಾರೆ ಸರ್ಕಾರ ತೊಗರಿ ಬೆಳೆದ ರೈತರ ಬೆಳೆಯ ಸಮೀಕ್ಷೆಯನ್ನು ಮಾಡಿ ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸಿ ರೈತ ಸಂಘಟನೆಗಳ ವತಿಯಿಂದ ಡಿ.9 ರಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲು ರೈತ ಸಂಘಟನೆಗಳ ಮುಖ್ಯಸ್ಥರ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸ ಲಾಯಿತು. ಪಟ್ಟಣದ ವಿಠಲ ಮಂದಿರದಲ್ಲಿ ಶನಿವಾರ ನಡೆದ ರೈತ ಮುಖಂಡರ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ, ಮಾಜಿ ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ವಹಿಸಿದ್ದರು. ಸಭೆಯಲ್ಲಿ ಮಾತನಾಡಿದ ಅವರು ವಿಜಯಪುರ ಜಿಲ್ಲೆಯಲ್ಲಿ ಒಟ್ಟು 5.34ಲಕ್ಷ ಹೆಕ್ಟರ್ ತೊಗರಿ ಬೆಳೆ ಬಿತ್ತಣಿಕೆಯಾಗಿದ್ದು ಇದರಲ್ಲಿ ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲೂಕಿನಲ್ಲಿ 1.24 ಲಕ್ಷ ಹೆಕ್ಟೇರ್ ತೊಗರಿ ಬೆಳೆ ಬಿತ್ತಣಿಕೆಯಾಗಿದೆ. ಆಡಳಿತ ಪಕ್ಷದ ಶಾಸಕರೇ ತಿಳಿಸುವಂತೆ ಶೇ.80 ರಷ್ಟು ಬೆಳೆ ಹಾನಿಯಾಗಿದೆ ಇದರಲ್ಲಿ ಕೇವಲ ಶೇ.20 ರಷ್ಟು ರೈತರು ಮಾತ್ರ ವಿಮೆ ಮಾಡಿಸಿದ್ದಾರೆ, ಬೆಳೆ ನಷ್ಟಕ್ಕೆ ಅಧಿಕಾರಿಗಳು ನೀಡುವ ವರದಿ ಸಂಪೂರ್ಣ ಸತ್ಯಕ್ಕೆ ದೂರವಾಗಿದೆ.ಕೇವಲ ಹವಾಮಾನ ವೈಪರಿತ್ಯದಿಂದಾಗಿದೆ ಎಂಬುದು ಶುದ್ಧ ಸುಳ್ಳು. ಖಾಸಗಿ ಕಂಪನಿಗಳಿಂದ ಖರೀದಿ ಮಾಡಿದ ಕಳಪೆ ಬೀಜಗಳು ಇದಕ್ಕೆ ಬಹುಅಂಶ ಕಾರಣವಾಗಿದೆ, ಇದರಲ್ಲಿ ದೊಡ್ಡ ಮಟ್ಟದ ಬ್ರಷ್ಟಾಚಾರ ನಡೆದಿದೆ ಎಂದು ಅವರು ರೈತರಿಗಾದ ಈ ಅನ್ಯಾಯವನ್ನು ಸರಿಪಡಿಸಿ ಅವರಿಗೆ ಪರಿಹಾರವನ್ನು ನೀಡಲು ನಾವು ಡಿಸೆಂಬರ್ 3 ರಿಂದ ಜಿಲ್ಲೆಯಲ್ಲಿ ಹೋರಾಟವನ್ನು ನಡೆಸುತ್ತಿದ್ದೇವೆ ಇದರ ಮುಂದುವರಿದ ಭಾಗವಾಗಿ ಡಿ. 9 ರಂದು ಪಟ್ಟಣದಲ್ಲಿ ತಾಳಿಕೋಟಿ ತಾಲೂಕಿನ ಎಲ್ಲಾ ಗ್ರಾಮಗಳಿಂದ ನಷ್ಟಕ್ಕೆ ಒಳಗಾದ ರೈತರು ಸ್ವಯಂ ಪ್ರೇರಿತರಾಗಿ ಈ ಪ್ರತಿಭಟನಾ ಮೆರಣಿಯಲ್ಲಿ ತಮ್ಮ ತಮ್ಮ ಟ್ರಾಕ್ಟರ್ ಗಳ ಜೊತೆಯಲ್ಲಿ ಆಗಮಿಸಬೇಕು ಎಂದು ವಿನಂತಿಸಿಕೊಂಡರು. ಸಭೆಯಲ್ಲಿ ಉಪಸ್ಥಿತರಿರುವ ರೈತ ಮುಖಂಡರು ತಮ್ಮ ತಮ್ಮ ಸಲಹೆ ಸೂಚನೆ ಅಭಿಪ್ರಾಯಗಳನ್ನು ಮಂಡಿಸಿದರು. ಸಭೆಯ ತೀರ್ಮಾನದಂತೆ ಅಂದು ಬೆಳಿಗ್ಗೆ 10.30 ಗಂಟೆಯಿಂದ ಪಟ್ಟಣದ ನಾಲ್ಕು ಮಾರ್ಗಗಳಿಂದ ತಾಲೂಕಿನ ಸಾವಿರಾರು ರೈತರು ತಮ್ಮ ತಮ್ಮ ಟ್ರಾಕ್ಟರ್ ಸಮೇತ ಈ ಪ್ರತಿಭಟನೆಯಲ್ಲಿ ಭಾಗವಹಿಸುತ್ತಾರೆ, ಪ್ರತಿಭಟನಾ ಮೆರವಣಿಗೆ ಬಸ್ ಡಿಪೋದಿಂದ ಆರಂಭವಾಗಲಿದ್ದು ಸರ್ಕಾರ ತೊಗರಿ ಬೆಳೆ ನಾಶಕ್ಕೆ ಶೀಘ್ರದಲ್ಲಿ ಸಮೀಕ್ಷೆಯನ್ನು ಮಾಡಿ ಪರಿಹಾರವನ್ನು ಕೊಡಬೇಕು ಎಂದು ಒತ್ತಾಯಿಸಲಾಗುವದು.ಈ ಹೋರಾಟ ರೈತರಿಗೆ ನ್ಯಾಯ ಸಿಗುವವರೆಗೂ ನಡೆಯುವುದು ಜೊತೆಗೆ ಅಂದಿನಿಂದಲೇ ಸಾವಿರಾರು ರೈತರು ಕಳಪೆ ಬಿಜೆಪಿ ವಿತರಿಸಿದ ಕಂಪನಿಯ ವಿರುದ್ಧ ಕ್ರಮ ಜರುಗಿಸಲು ಹಾಗೂ ಈ ಕಾರ್ಯದಲ್ಲಿ ನಿರ್ಲಕ್ಷೆತೋರಿದ ಜಿಲ್ಲಾಧಿಕಾರಿ ಹಾಗೂ ಜಂಟಿ ಕೃಷಿ ನಿರ್ದೇಶಕರ ಮೇಲೆ ಲೋಕಾಯುಕ್ತ ಕಚೇರಿಯಲ್ಲಿ ಮುಕದ್ದಮೆ ದಾಖಲಿಸುವ ಅಭಿಯಾನ ನಡೆಯುವುದು ಎಂದು ತೀರ್ಮಾನಿಸಲಾಯಿತು. ಸಭೆಯಲ್ಲಿ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಸನಗೌಡ ಮಾಡಗಿ, ಮುಖಂಡರಾದ ಎಂ.ಎಸ್. ಪಾಟೀಲ ನಾಲತವಾಡ,ಕಾಶಿರಾಯ ಮೋಹಿತೆ,ಕಾಶಿನಾಥ ಮುರಾಳ, ಮುರಿಗೆಪ್ಪ ಸರಸೆಟ್ಟಿ, ಪ್ರಕಾಶ ಹಜೇರಿ,ಕಾಶಿನಾಥ ಸಜ್ಜನ,ದ್ಯಾಮನಗೌಡ ಪಾಟೀಲ,ಪುರಸಭೆ ಸದಸ್ಯರಾದ ವಾಸುದೇವ ಹೆಬಸೂರ,ಡಿ.ವಿ.ಪಾಟೀಲ, ಮುದುಕಪ್ಪ ಬಡಿಗೇರ, ನಿಂಗಣ್ಣ ಕುಂಟೋಜಿ,ಮಾಜಿ ಟಿ.ಪಿ. ಪ್ರಭುಗೌಡ ಬಿರಾದಾರ, ಎಂ.ಆರ್.ಕತ್ತಿ,ರಾಮು ಜಗತಾಪ,ಹರಿ ಸಿಂಗ್ ಮೂಲಿಮನಿ,ರಾಜು ಸೊಂಡೂರ,ತಮ್ಮಣ್ಣ ದೇಶಪಾಂಡೆ,ಶಿವಶಂಕರ ಹಿರೇಮಠ, ಗಂಗಾರಾಮಸಿಂಗ್ ಕೊಕಟನೂರ, ಮೇಟಿ ಮಲ್ಲು, ಈಶ್ವರ ಹೂಗಾರ, ಮಹಾಂತೇಶ ಮುರಾಳ, ಹಣಮಂತ ಢವಳಗಿ, ವಿಠಲ ಮೋಹಿತೆ,ಬಿ.ಎಂ.ಪಾಟೀಲ, ಕಳಕೂಸ ರಂಗರೇಜ, ಬಸವರಾಜ ಕಶಟ್ಟಿ, ನದೀಂ ಕಡು, ಇದ್ದರು.