ಸರ್ಕಾರದ ಸೌಲಭ್ಯಗಳು ವಿಕಲಚೇತನರಿಗೆ ದೊರಕುವಂತೆ ಕಾಳಜಿ ವಹಿಸಿ: ಆಯುಕ್ತ ದಾಸ್ ಸೂರ್ಯವಂಶಿ
ಧಾರವಾಡ 18: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿ ಇಲಾಖೆಯಲ್ಲಿ ಅನುಷ್ಠಾನಗೊಳಿಸುವ ಬಡತನ ನಿಮೂರ್ಲನಾ ಕಾರ್ಯಕ್ರಮಗಳಲ್ಲಿ ಶೇ. 5 ರಷ್ಟು ಅನುದಾನವನ್ನು ಅಂಗವಿಕಲರ ಕಲ್ಯಾಣಕ್ಕಾಗಿ ಮೀಸಲುಗೊಳಿಸಿವೆ. ಇದರ ಸದ್ಬಳಕೆಯಾಗಲಿ ಮತ್ತು ಸರ್ಕಾರದ ಸೌಲಭ್ಯಗಳು ಅರ್ಹತೆಗೆ ಅನುಗುಣವಾಗಿ ಪ್ರತಿ ವಿಕಲಚೇನರಿಗೆ ತಲುಪುವಂತೆ ಅಧಿಕಾರಿಗಳು ಕಾಳಜಿ ವಹಿಸಬೇಕೆಂದು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮಗಳ ರಾಜ್ಯ ಆಯುಕ್ತರಾದ ದಾಸ್ ಸೂರ್ಯವಂಶಿ ಅವರು ಹೇಳಿದರು.
ಅವರು ಇಂದು (ಫೆ.18) ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಭವನದಲ್ಲಿ ಕರ್ನಾಟಕ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮಗಳ ಕುರಿತು ವಿವಿಧ ಇಲಾಖೆಗಳ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಪ್ರಗತಿ ಪರೀಶೀಲನಾ ಸಭೆ ಜರುಗಿಸಿ, ಮಾತನಾಡಿದರು.
ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ಕೇಂದ್ರ ಮತ್ತು ರಾಜ್ಯದಲ್ಲಿ ಜಾರಿಗೆ ಬಂದಾಗಿನಿಂದ ಅಂಗವಿಕಲರ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಭಾರತ ಸರ್ಕಾರವು ಮತ್ತು ರಾಜ್ಯ ಸರ್ಕಾರವು ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳಲ್ಲಿ ಶೇ. 4 ರಷ್ಟು ಹುದ್ದೆಗಳನ್ನು ಮತ್ತು ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳಲ್ಲಿ ಶೇ. 5 ರಷ್ಟು ಹುದ್ದೆಗಳನ್ನು ಅಂಗವಿಕಲರಿಗೆ ಮೀಸಲಿರಿಸಲು ಅಧಿನಿಯಮದಲ್ಲಿ ಆದೇಶಿಸಲಾಗಿದೆ. ಇದನ್ನು ಎಲ್ಲ ಇಲಾಖೆಗಳು ಕಡ್ಡಾಯವಾಗಿ ಪಾಲಿಸಬೇಕೆಂದು ಆಯುಕ್ತರು ತಿಳಿಸಿದರು.
ರಾಜ್ಯದಲ್ಲಿ ಸುಮಾರು ಎಳು ಸಾವಿರ ಅಂಗವಿಕಲರು ಸರ್ಕಾರಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯದ ಎಲ್ಲ ಧಾರ್ಮಿಕ ಸ್ಥಳ ಹಾಗೂ ಪ್ರವಾಸಿ ತಾಣಗಳನ್ನು ಸುಧಾರಣಾ ಯಾತ್ರೆಯಡಿ ಅಂಗವಿಕಲ ಸ್ನೇಹಿ ಸ್ಥಳಗಳನ್ನಾಗಿ ರೂಪಿಸಲು ಪ್ರಯತ್ನಿಸಲಾಗುತ್ತಿದೆ. ಇಂತಹ ಸ್ಥಳಗಳಲ್ಲಿ ಹಾಗೂ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಅಂಗವಿಕಲರಿಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ತಪ್ಪದೇ ಕಲ್ಪಿಸಬೇಕೆಂದು ಅವರು ಹೇಳಿದರು.
ಶಾಲಾ ಶಿಕ್ಷಣದ ಅಧಿನಿಯಮದ ಪ್ರಕಾರ ಶಾಲೆಗಳಲ್ಲಿ 6ನೇ ತರಗತಿಯಿಂದ 10ನೇ ತರಗತಿವರೆಗೆ ಯಾವುದೇ ಪ್ರವೇಶ ಪರೀಕ್ಷೆ ಇಲ್ಲದೆ 5ನೇ ತರಗತಿಯಲ್ಲಿ ಉತ್ತೀರ್ಣರಾದ ಅಂಕಪಟ್ಟಿ ಆಧಾರದಲ್ಲಿ ನೇರವಾಗಿ ಆರನೇ ತರಗತಿಗೆ ಪ್ರವೇಶವನ್ನು ಪಡೆಯಬಹುದಾಗಿದೆ ಎಂದು ಅವರು ಹೇಳಿದರು.
ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ ಅಂಗವಿಕಲರ ಅನುಕೂಲಕತೆಗಾಗಿ ವಿಶೇಷವಾಗಿ ಸಂಜ್ಞೆ ಭಾಷೆಯನ್ನು ಬಲ್ಲವರು ಇರಬೇಕಾಗುತ್ತದೆ. ಯಾರಾದರೂ ಅಂಗವಿಕಲರು ಮಾತು ಬಾರದೆ ಕಿವಿಯು ಕೇಳದೆ ಹೋದವರಿಗೆ ಆ ಭಾಷೆಯ ಮುಖಾಂತರ ವರದಿಯನ್ನು ಪಡೆಯಬೇಕು ಎಂದು ಆಯುಕ್ತರು ಹೇಳಿದರು.
ಸರ್ಕಾರದ ಎಲ್ಲ ಇಲಾಖೆ ಹಾಗೂ ಗ್ರಾಮ ಪಂಚಾಯತ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಶೇ. 5 ರಷ್ಟು ಅನುದಾನವನ್ನು ಮೀಸಲು ಇಡಲಾಗಿರುತ್ತದೆ. ಆದರೆ ಅರ್ಹ ಅಂಗವಿಕಲರಿಗೆ ಮತ್ತು ಮೀಸಲು ಪ್ರಮಾಣಕ್ಕೆ ಅನುಗುಣವಾಗಿ ಅನುದಾನ ವೆಚ್ಚವಾಗುತ್ತಿಲ್ಲ. ಆದ್ದರಿಂದ ಸರ್ಕಾರದ ಯೋಜನೆಗಳ ಮತ್ತು ಅಂಗವಿಕಲರ ಮೀಸಲಾತಿ ಕುರಿತು ಸಾರ್ವಜನಿಕರಲ್ಲಿ ವ್ಯಾಪಕ ಪ್ರಚಾರ ಮಾಡಿ, ಜಾಗೃತಿ ಮೂಡಿಸಬೇಕೆಂದು ಆಯುಕ್ತರು ಸೂಚಿಸಿದರು.
ಕರ್ನಾಟಕ ರಾಜ್ಯ ಸರ್ಕಾರವು ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ಮೊದಲ ರಾಜ್ಯವಾಗಿ ಹೊಸ ಯೊಜನೆಯೊಂದನ್ನು ಅಂಗವಿಕಲರ ಪಾಲಕರಿಗೆ ಜಾರಿಗೊಳಿಸುತ್ತಿದೆ. ಅಂಗವಿಕಲರನ್ನು ಪಾಲನೆ, ಪೊಷಣೆ ಮಾಡುವ ತಾಯಿ, ತಂದೆ ಅಥವಾ ಪಾಲಕರಿಗೆ ಮಾಸಿಕ ಪಿಂಚಣಿ ನೀಡುವ ವಿನೂತನ ಯೋಜನೆಯನ್ನು ಸಧ್ಯದಲ್ಲಿಯೆ ರಾಜ್ಯದಲ್ಲಿ ಅನುಷ್ಠಾನಗೊಳ್ಳಲಿದೆ ಎಂದು ಅವರು ಹೇಳಿದರು.
ಭಾರತ ಸರ್ಕಾರದ ರಾಷ್ಟ್ರೀಯ ದಿವ್ಯಾಂಗಜನ್ ಡೆವಲ್ಪಮೆಂಟ್ ಕಾರ್ೋರೆಷನ್ ಶಾಖೆಯನ್ನು ರಾಜ್ಯದಲ್ಲಿ ಆರಂಭಿಸಲಾಗುತ್ತಿದ್ದು, ಈ ಮೂಲಕ ಅಂಗವಿಕಲರಿಗೆ ರಿಯಾಯಿತಿ ದರದಲ್ಲಿ ರೂ. 50 ಸಾವಿರದಿಂದ ರೂ. 50 ಲಕ್ಷದವರೆಗೆ ಸಾಲವನ್ನು ನೀಡಬಹುದು. ಇದು ಶಿಕ್ಷಣ, ಉದ್ಯೋಗ ಮತ್ತು ಸ್ವಯಂ ಉದ್ಯಮ ಸ್ಥಾಪಿಸಲು ಸಹಾಯವಾಗಲಿದೆ ಎಂದು ಆಯುಕ್ತರು ಹೇಳಿದರು.
ಆರೋಗ್ಯ ಇಲಾಖೆಯ ಆರ್‌ಬಿಎಸ್ ಯೋಜನೆಯ ಮೂಲಕ ಹುಟ್ಟಿದ ಮಗುವಿನಿಂದ ಹಿಡಿದು 18 ವರ್ಷ ಪೂರೈಸುವರೆಗೆ ಪ್ರತಿ ವರ್ಷ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಇಲ್ಲಿ ಗುರುತಿಸುವ ಮಕ್ಕಳಿಗೆ ಅಗತ್ಯವಿರುವ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತದೆ. ಧಾರವಾಡ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯು ಅಂಗವಿಕಲರಿಗೆ ಇಲಾಖೆಯ ಆರೋಗ್ಯ ಸೇವೆಗಳನ್ನು ಮತ್ತು ಆರ್‌ಬಿಎಸ್ ಕಾರ್ಯಕ್ರಮಗಳನ್ನು ನಿಯಮಿತವಾಗಿ, ತೃಪ್ತಿಕರವಾಗಿ ತಲುಪಿಸುತ್ತಿದೆ. ಆದರೆ ಶಿಕ್ಷಣ ಇಲಾಖೆಯ ಸರ್ವಶಿಕ್ಷಣ ಅಭಿಯಾನದಡಿ ಅಂಗವಿಕಲರಿಗೆ ಸಕಾಲಕ್ಕೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಇಲಾಖೆಯ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಮೂರು ಸಾವಿರ ಅಂಗವಿಕಲ ಮಕ್ಕಳು ಶಾಲೆಗೆ ದಾಖಲಾಗಿದ್ದು ಪ್ರತಿ ತಾಲೂಕಿಗೆ ಕೇವಲ ಮೂರು ಜನ ಶಿಕ್ಷಕರು ಮಾತ್ರ ಇದ್ದು, ಸರಿಯಾದ ನಿರ್ವಹಣೆ ಆಗುತ್ತಿಲ್ಲ. ಈ ಕುರಿತು ಇಲಾಖೆಯ ಅಧಿಕಾರಿಗಳು ಹೆಚ್ಚು ಗಮನ ಹರಿಸಬೇಕೆಂದು ತಿಳಿಸಿದರು.
ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮಗಳ ಆಯುಕ್ತಾಲಯವು ಅಂಗವಿಕಲರ ಕುರಿತು ದಾಖಲಾಗುವ ಪ್ರಕರಣಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಅಂಗವಿಕಲರಿಗೆ ಅಗತ್ಯ ಆರೈಕೆ, ಶೈಕ್ಷಣಿಕ, ಆರೋಗ್ಯ ಸೇವೆ, ಉದ್ಯೋಗ ಮತ್ತು ಆರ್ಥಿಕ ಸೌಲಭ್ಯಗಳು ಸಕಾಲಕ್ಕೆ ಸೀಗುವಂತೆ ಮಾಡಲು ಪ್ರಯತ್ನಿಸುತ್ತಿದೆ ಎಂದು ಆಯುಕ್ತ ದಾಸ್ ಸೂರ್ಯವಂಶಿ ಅವರು ಹೇಳಿದರು. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಅಂಗವಿಕಲರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಅಂಗವಿಕಲರು ಭಾಗವಹಿಸಿದ್ದರು.