ರಾಯಬಾಗ 05: ತಾಲೂಕಿನ ಯಡ್ರಾಂವ ಗ್ರಾಮದಲ್ಲಿ ಶುಕ್ರವಾರ ಮಹೇಶ ಬಾಗಡಿ ಎಂಬ ನಾಲ್ಕು ವರ್ಷದ ಬಾಲಕನ ಸಾವಿಗೆ ಕಾರಣರಾದ ಆರೋಪಿ ಪರಶುರಾಮ ಜಾಧವ (38) ಎಂಬಾತನನ್ನು ಪೊಲೀಸರು ಶನಿವಾರದಂದು ಸಂಕೇಶ್ವರದಲ್ಲಿ ಬಂಧಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬಾಲಕ ಮಹೇಶ ಬಾಗಡಿ ಸಂಬಂಧಿಕರು ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ದಾಖಲಿಸಿದ ದೂರಿನ ಆಧಾರದ ಮೇಲೆ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದ ಪೊಲೀಸರು, ಸಂಕೇಶ್ವರ ಪೊಲೀಸರ ಸಹಾಯದಿಂದ ಬಂಧಿಸಿ, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮೃತ ಬಾಲಕನ ತಾಯಿ ವಿಚ್ಛೇದಿತ ಲಕ್ಷ್ಮೀ ಬಾಗಡಿ ಇತಳು ತನ್ನ ಪ್ರಿಯಕರ ಪರಶುರಾಮ ಜಾಧವನೊಂದಿಗೆ ಸಂಬಂಧ ಹೊಂದಿದ್ದು, ಇವರು ಯಡ್ರಾಂವ ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು. ಶುಕ್ರವಾರ ಬಾಲಕನ ತಾಯಿ ಲಕ್ಷ್ಮೀ ಮನೆಯಲ್ಲಿ ಇಲ್ಲದ ವೇಳೆಯಲ್ಲಿ ಆರೋಪಿ ಪರಶುರಾಮ ಕ್ಷುಲ್ಲಕ ಕಾರಣಕ್ಕಾಗಿ ಬಾಲಕನ ಮೇಲೆ ಲಟ್ಟನಿಕೆಯಿಂದ ಹಲ್ಲೆ ಮಾಡಿದ ಪರಿಣಾಮ ಸರಕಾರಿ ಆಸ್ಪತ್ರೆ ತರುವ ವೇಳೆಯಲ್ಲಿ ಬಾಲಕ ಸಾವನ್ನಪ್ಪಿದ್ದನು. ಆರೋಪಿಯು ಬಾಲಕನನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಅಲ್ಲಿಂದ ಪರಾರಿಯಾಗಿದ್ದನು. ಆರೋಪಿ ಪರಶುರಾಮ ಮತ್ತು ಬಾಲಕನ ತಾಯಿ ಲಕ್ಷ್ಮೀ ವಿರುದ್ಧ ರಾಯಬಾಗ ಪೊಲೀಸ್ ಠಾಣೆಯಲ್ಲಿ ಬಾಲಕನ ತಂದೆ ಹಾಗೂ ಸಂಬಂಧಿಕರು ದೂರನ್ನು ದಾಖಲಿಸಿದ್ದರು.