ಗಾಂಧೀನಗರದಲ್ಲಿ ಮಹಾಶಿವರಾತ್ರಿ ವಿಶೇಷ ಪ್ರವಚನ ಆರಂಭ
ಧಾರವಾಡ 23: ಇಲ್ಲಿಯ ಗಾಂಧೀನಗರದಲ್ಲಿರುವ ಈಶ್ವರ ದೇವಸ್ಥಾನ ವಿಶ್ವಸ್ಥ ಮಂಡಳಿ ಟ್ರಸ್ಟ್ ವತಿಯಿಂದ ಮಹಾಶಿವರಾತ್ರಿ ಅಂಗವಾಗಿ ತಾಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಶ್ರೀಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅವರಿಂದ ಮಹಾಶಿವರಾತ್ರಿ ಮಹಾತ್ಮೆ ಕುರಿತು ಫೆ.23 ರವಿವಾರ ಸಂಜೆ 7-30 ಗಂಟೆಗೆ ಆರಂಭಗೊಂಡಿದ್ದು, ಫೆ.26ರವರೆಗೆ 4 ದಿನಗಳ ಪ್ರವಚನ ಮಾಲಿಕೆ ಜರುಗಲಿದೆ. ಫೆ.26 ರಂದು ನಡೆಯುವ ಸಮಾರೋಪ ಸಮಾರಂಭ ಶ್ರೀಈಶ್ವರ ದೇವಸ್ಥಾನ ವಿಶ್ವಸ್ಥ ಮಂಡಳಿ ಟ್ರಸ್ಟ್ ಅಧ್ಯಕ್ಷ ಗುರುರಾಜ ಹುಣಸಿಮರದ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಖ್ಯಾತ ವೈದ್ಯ ಡಾ.ನಿತಿನ್‌ಚಂದ್ರ ಹತ್ತಿಕಾಳ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಸಮಾರಂಭದ ನಂತರ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳು ಮಹಿಳಾ ಮಂಡಳಗಳಿಂದ ಜರುಗಲಿವೆ. ಅದೇ ದಿನ ರಾತ್ರಿ 9 ಗಂಟೆಗೆ ನವಲಗುಂದದ ಅಜಾತ ಶ್ರೀನಾಗಲಿಂಗ ಲೀಲೆ ಎಂಬ ಭಕ್ತಿ ಪ್ರಧಾನ ನಾಟಕ ಪ್ರದರ್ಶನಗೊಳ್ಳಲಿದೆ. ಫೆ.26 ರಂದು ಮಹಾಶಿವರಾತ್ರಿಯ ಪ್ರಾತಃಕಾಲ 5 ಗಂಟೆಗೆ ಏಕಾದಶ ಮಹಾರುದ್ರಾಭಿಷೇಕ ಹಾಗೂ ವಿಶೇಷ ಪೂಜಾಕೈಂಕರ್ಯಗಳು ಜರುಗಲಿವೆ. ದಿ.27 ರಂದು ರಾತ್ರಿ 8 ಗಂಟೆಗೆ ಅರವಿಂದ ಹುಣಸಿಮರದ, ಮನೋಜ ಸಂಗೊಳ್ಳಿ ಹಾಗೂ ಸಂತೋಷ ಪಟ್ಟಣಶೆಟ್ಟಿ ಅವರು ದೇವಸ್ಥಾನದ ಸಮಸ್ತ ಭಕ್ತಗಣಕ್ಕೆ ಮಹಾಪ್ರಸಾದದ ದಾಸೋಹ ಸೇವೆ ನಡೆಸುವರೆಂದು ದೇವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.