ಸವಣೂರು ಆಯುರ್ವೇದ ಮಹಾವಿದ್ಯಾಲಯಕ್ಕೆ ತಾಲೂಕು ಆಸ್ಪತ್ರೆ ಸ್ಥಳಾಂತರಕ್ಕೆ ಸಂಸದ ಬಸವರಾಜ ಬೊಮ್ಮಾಯಿ ವಿರೋಧ
ಶಿಗ್ಗಾವಿ 11 : ಹಾವೇರಿ ಜಿಲ್ಲೆ ಸವಣೂರ ಪಟ್ಟಣದಲ್ಲಿ ಸರಕಾರಿ ಆಯುರ್ವೇದಿಕ್ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಈಗಾಗಲೇ ಮಂಜೂರಾಗಿದ್ದು, ಈ ಕಟ್ಟಡದಲ್ಲಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯನ್ನು ಸ್ಥಳಾಂತರಿಸಬೇಕೆಂದು ಇಲಾಖೆ ತೀರ್ಮಾನಿಸುತ್ತಿರುವುದನ್ನು ಕೈಬಿಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಪತ್ರ ಬರೆದಿರುವ ಅವರು, ಹಾವೇರಿ ಜಿಲ್ಲೆ ಸವಣೂರ ಪಟ್ಟಣದಲ್ಲಿ ಸರಕಾರಿ ಆಯುರ್ವೇದಿಕ್ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಈಗಾಗಲೇ ಮಂಜೂರಾಗಿದ್ದು, ರೂ. 44.00 ಕೋಟಿಗಳ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದೆ.
ಈ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯನ್ನು ರದ್ದುಪಡಿಸಿ, ಈ ಕಟ್ಟಡದಲ್ಲಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯನ್ನು ಸ್ಥಳಾಂತರಿಸಬೇಕೆಂದು ಇಲಾಖೆ ತೀರ್ಮಾನಿಸುತ್ತಿರುವುದು ತಿಳಿದುಬಂದಿದೆ. ಈ ಕಟ್ಟಡವು ಸವಣೂರ ಪಟ್ಟಣದಿಂದ ದೂರದಲ್ಲಿದ್ದು, ಈ ಸ್ಥಳಾಂತರದಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತದೆ. ಆದ್ದರಿಂದ ಸ್ಥಳಾಂತರ ನಿರ್ಧಾರವನ್ನು ಕೈಬಿಟ್ಟು ಆಯುರ್ವೇದಿಕ್ ಮಹಾ ವಿದ್ಯಾಲಯ ಹಾಗೂ ಆಸ್ಪತ್ರೆಯನ್ನು ಇದೆ ಕಟ್ಟಡದಲ್ಲಿಯೇ ಪ್ರಾರಂಭಿಸುವುದಲ್ಲದೇ ಈ ಕಟ್ಟಡಕ್ಕೆ ಇನ್ನೂ ಅವಶ್ಯವಿರುವ ಅನುದಾನವನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಕೋರಿದ್ದಾರೆ. ತಾಲೂಕಾ ಸಾರ್ವಜನಿಕ ಆಸ್ಪತ್ರೆಯನ್ನು ಸಧ್ಯ ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲಿಯೇ ಮುಂದುವರೆಸುವುದಲ್ಲದೇ ಈ ಕಟ್ಟಡಕ್ಕೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಅನುದಾನ ಮಂಜೂರಾತಿ ನೀಡಬೇಕೆಂದು ಮನವಿ ಮಾಡಿದ್ದಾರೆ.