ಸಿಸಿರಸ್ತೆ ಹಾಗೂ ಗಟಾರ ನಿರ್ಮಾಣ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ
ಹಾನಗಲ್ 23 : ತಾಲೂಕಿನ ಕ್ಯಾಸನೂರು ಗ್ರಾಮದಲ್ಲಿ 2023-24 ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮದಡಿ 20 ಲಕ್ಷ ರೂ. ವೆಚ್ಚದಲ್ಲಿ ಸಿಸಿರಸ್ತೆ ಹಾಗೂ ಗಟಾರ ನಿರ್ಮಾಣ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯ ಮೂಲಸೌಕರ್ಯ ಒದಗಿಸಿದಾಗ ಜನತೆ ನೆಮ್ಮದಿಯಿಂದ ಬದುಕು ಸಾಗಿಸಲು ಸಾಧ್ಯವಿದೆ. ಹಾಗಾಗಿ ಹಂತ, ಹಂತವಾಗಿ ಮೂಲಸೌಕರ್ಯ ಒದಗಿಸಲು ಗಮನ ನೀಡಲಾಗಿದೆ. ಬೆಲೆ ಏರಿಕೆಯ ಬಿಸಿಯಿಂದ ಬಸವಳಿದಿದ್ದ ಜನಸಾಮಾನ್ಯರಿಗೆ ಗ್ಯಾರಂಟಿ ಯೋಜನೆಗಳು ನೆಮ್ಮದಿ ತರಿಸಿವೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜೊತೆಗೆ ಗ್ರಾಮಗಳ ಅಭಿವೃದ್ಧಿಗೂ ಸರಕಾರ ಕಾಳಜಿ ವಹಿಸಿದೆ ಎಂದು ಹೇಳಿದ ಶಾಸಕ ಮಾನೆ ಕೇಂದ್ರ ಸರಕಾರ ನಮ್ಮ ಕರ್ನಾಟಕಕ್ಕೆ ಕೊಡಬೇಕಿರುವ ನ್ಯಾಯಯುತ ತೆರಿಗೆ ಪಾಲನ್ನು ನೀಡಿದರೆ ಅಭಿವೃದ್ಧಿ ಕಾರ್ಯಗಳು, ಜನೋಪಯೋಗಿ ಚಟುವಟಿಕೆಗಳಿಗೆ ಇನ್ನಷ್ಟು ಬಲ ಬರಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಗ್ರಾಮಸ್ಥರ ಅಹವಾಲು ಆಲಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿ ಸೂಕ್ತ ಕ್ರಮಕ್ಕೆ ನಿರ್ದೇಶಿಸಿದರು. ತಾಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಚಿಕ್ಕಾಂಶಿ ಹೊಸೂರು ಗ್ರಾಪಂ ಅಧ್ಯಕ್ಷ ವೀರಭದ್ರಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮರಗಡಿ, ಮುಖಂಡರಾದ ನಾಗರಾಜ ಗಾಜಿಪೂರ, ರಾಘು ಹಾನಗಲ್, ಮಂಜಣ್ಣ ಶೃಂಗೇರಿ ಸೇರಿದಂತೆ ಗ್ರಾಪಂ ಸದಸ್ಯರು, ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.