4 ಲಕ್ಷ ರೂ. ವೆಚ್ಚದಲ್ಲಿ ಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ
ಹಾನಗಲ್ 06: ಇಲ್ಲಿನ ನವನಗರದಲ್ಲಿನ ಮೌಲಾನಾ ಆಜಾದ್ ಮಾದರಿ ಶಾಲೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ರೂ. ಒಂದು ಕೋಟಿ 4 ಲಕ್ಷ ವೆಚ್ಚದಲ್ಲಿ ಆವರಣ ಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು. ಶಿಕ್ಷಣದಿಂದ ಮಾತ್ರ ವಿಕಾಸ ಸಾಧ್ಯವಿದೆ. ಇತ್ತೀಚೆಗೆ ಪ್ರತಿಯೊಬ್ಬರೂ ಸಹ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಆರ್ಥಿಕ ಸಂಕಷ್ಟದ ನೆಪವೊಡ್ಡಿ ಯಾವುದೇ ಕಾರಣಕ್ಕೂ ಮಕ್ಕಳ ಅಭ್ಯಾಸಕ್ಕೆ ಅನಾನುಕೂಲ ಉಂಟು ಮಾಡಬಾರದು. ರಾಜ್ಯ ಸರ್ಕಾರ ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸಿ, ವಾರ್ಷಿಕ ರೂ. 58 ಸಾವಿರ ಕೋಟಿ ವ್ಯಯಿಸಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಇದರ ಹೊರತಾಗಿಯೂ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಅನುದಾನ ದೊರಕಿಸುತ್ತಿದೆ. ತಾಲೂಕಿನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮೂಲಸೌಕರ್ಯ ಒದಗಿಸಲು ಕಾಳಜಿ ವಹಿಸಲಾಗಿದ್ದು, ಶೌಚಾಲಯ, ಆವರಣ ಗೋಡೆ, ಬಿಸಿಯೂಟ ಕೊಠಡಿ, ಶಾಲಾ ಕೊಠಡಿ ನಿರ್ಮಿಸಲಾಗುತ್ತಿದೆ. ಖಾಸಗಿ ಸಂಘ, ಸಂಸ್ಥೆಗಳು, ಸಹೃದಯಿಗಳ ನೆರವು ಸಹ ಪಡೆದು ಮೂಲಸೌಕರ್ಯ ಕಲ್ಪಿಸಲಾಗುತ್ತಿರುವ ಪರಿಣಾಮ ಶಿಕ್ಷಣ ಕ್ಷೇತ್ರ ಬದಲಾವಣೆ ಹೊಂದುತ್ತಿದೆ ಎಂದು ಇದೇ ಸಂದರ್ಭದಲ್ಲಿ ಶಾಸಕ ಮಾನೆ ತಿಳಿಸಿದರು. ಪುರಸಭೆ ಅಧ್ಯಕ್ಷ ಪರಶುರಾಮ ಖಂಡೂನವರ, ಮಾಜಿ ಅಧ್ಯಕ್ಷರಾದ ನಾಗಪ್ಪ ಸವದತ್ತಿ, ಖುರ್ಷಿದ್ ಹುಲ್ಲತ್ತಿ, ರವಿ ದೇಶಪಾಂಡೆ, ವಿನಾಯಕ ಬಂಕನಾಳ, ಸಂತೋಷ ಸುಣಗಾರ, ಉಮೇಶ ಮಾಳಗಿ, ಮಾಲತೇಶ ಕಾಳೇರ, ನೌಶಾದ ರಾಣೇಬೆನ್ನೂರು, ಇಸ್ಮೈಲ್ ರೆಹೆಮಾನಖಾನವರ, ರಾಮಚಂದ್ರ ಕಲ್ಲೇರ, ಗೌಸ್ ಪಾಳಾ, ಅಮ್ಜ ಗೌರಿಖಾನ, ಜಿಲ್ಲಾ ಅಲ್ಪಸಂಖ್ಯಾತರ ಅಧಿಕಾರಿ ಅಶೋಕ ಗದ್ದಿಗೌಡ್ರ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.