ಬಾಗಲಕೋಟೆ: ನಗರದ ವಿದ್ಯಾಗಿರಿ 22ನೇ ಮುಖ್ಯ ರಸ್ತೆಯಲ್ಲಿರುವ ಬೆಂಡಿಗೇರಿ ಮತ್ತು ಸೂಳಿಭಾವಿ ಕಾಲೋನಿಯಲ್ಲಿ 49.90 ಲಕ್ಷ ರೂ. ಒಳಚರಂಡಿ ಕಾಮಗಾರಿಗೆ ಶಾಸಕ ವೀರಣ್ಣ ಚರಂತಿಮಠ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಸೋಮವಾರ ವಿದ್ಯಾಗಿರಿಯ ಸೂಳಿಭಾವಿ ಕಾಲೇಜಿಯಲ್ಲಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಕಾಮಗಾರಿ ಪರಿಶೀಲನೆಗಾಗಿ ಬಸವೇಶ್ವರ ಸಂಘದಿಂದ ಗುಣಮಟ್ಟವನ್ನು ಪರೀಕ್ಷಿಸಲಾಗುತ್ತದೆ. ಸ್ಥಳೀಯರು ಕೂಡಾ ಕಾಮಗಾರಿಗಳ ಬಗ್ಗೆ ತಮ್ಮ ಮನೆ ಕಾರ್ಯಗಳಂತೆ ಗಮನಿಸಬೇಕು. ಒಮ್ಮೆ ಮಾಡಿದ ಈ ಕಾರ್ಯಗಳು ಮತ್ತೆ ಮತ್ತೆ ಮಾಡಲಾಗುವುದಿಲ್ಲ. ಇಂದು ಹಾಕಿಕೊಟ್ಟ ಕಾಮಗಾರಿಗಳು 10 ವರ್ಷಗಳಾದರೂ ಗುಣಮಟ್ಟ ಕಳೆದುಕೊಳ್ಳದಂತಹ ಕಾರ್ಯವಾಗಬೇಕೆಂದರು.
ಈ ಹಿಂದೆ ಅವೈಜ್ಞಾನಿಕವಾಗಿ ನಿಮರ್ಿಸಲಾಗಿರುವ ಒಳಚರಂಡಿಯಿಂದ ಆಗುತ್ತಿರುವ ತೊಂದರೆಯಿಂದ ಪುನಃ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಆದ್ದರಿಂದ ಹಾಗಾಗದಂತೆ ಕಾಮಗಾರಿ ಉತ್ತಮ ರೀತಿಯಲ್ಲಿ ನಿರ್ವಹಿಸಬೇಕು. ಇದಲ್ಲದೇ ಇನ್ನು 99.39 ಕೋಟಿ ರೂ.ಗಳಿಗೆ ಅಭಿವೃದ್ದಿ ಕಾರ್ಯಗಳಿಗೆ ಟೆಂಡರ ಕರೆಯಲಾಗಿದ್ದು, ಶೀಘ್ರದಲ್ಲಿಯೇ ಚಾಲನೆ ನೀಡಲಾಗುವುದೆಂದರು. ಈ ಹಿಂದೆ ನಗರಸಭೆಗೆ ನೀಡಲಾಗಿದ್ದ 132 ಕೋಟಿ ಅನುದಾನವನ್ನು ನಗರ ಅಭಿವೃದ್ದಿಗೆ ಬಳಸಲಾಗುತ್ತಿದ್ದು, ಈ ಅನುದಾನದಲ್ಲಿ ಉಳಿದಿರುವ ಅಭಿವೃದ್ದಿ ಕಾಮಗಾರಿಗಳ ಕ್ರೀಯಾ ಯೋಜನೆ ರೂಪಿಸುವಂತೆ ಬಿಟಿಡಿಎ ಇಂಜಿನೀಯರರಿಗೆ ಸೂಚಿಸಿದರು.
ನಗರ ಪ್ರದೇಶದವರಿಗೆ ಮುಖ್ಯವಾಗಿ ನೀಡಬೇಕಾದ ಮುಲಭೂತ ಸೌಕರ್ಯಗಳಾದ 24*7 ಕುಡಿಯುವ ನೀರು, ರಸ್ತೆ ಹಾಗೂ ಒಳಚರಂಡಿ ಒದಗಿಸಬೇಕು. ಈಗಾಗಲೇ ಬಡಾವಣೆಗಳಲ್ಲಿ ವಿದ್ಯುತ್ ಕಂಬಗಳು ವಾಲಿದ್ದು, ಕೂಡಲೇ ಅವುಗಳನ್ನು ಸರಿಪಡಿಸಲು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದೇ ಸಂದರ್ಭದಲ್ಲಿ ಕಾಲೋನಿಯ ಇನ್ನೀತರ ಸಮಸ್ಯೆಗಳನ್ನು ನಾಗರಿಕರಿಂದ ಆಲಿಸಿ ಅವುಗಳನ್ನು ಸಹ ಸರಿಪಡಿಸಲಾಗುವುದೆಂದು ಶಾಸಕರು ತಿಳಿಸಿದರು. ಪ್ರಾಸ್ತಾವಿಕವಾಗಿ ಬಿಟಿಡಿಎ ಇಂಜಿನೀಯರ್ ಗದಗ ಕಾಮಗಾರಿಯ ವಿವರಣೆ ನೀಡಿದರು.
ಕಾರ್ಯಕ್ರಮದಲ್ಲಿ ಬಸವೇಶ್ವರ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ನಗರಸಭೆಯ ಸದಸ್ಯರಾದ ದ್ಯಾಮವ್ವ ಸೂಳಿಕೇರಿ, ಶೋಭಾ ವೆಂಕಟೇಶರಾವ್, ಕುಪ್ತಸ್ತ, ಬಾಗಲಕೋಟ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಮುಖ್ಯ ಇಂಜಿನೀಯರ್ ಸಯ್ಯದ ಇಪ್ತಾಕ್ ಅಖ್ತರ, ಇಂಜಿನೀಯರಗಳಾದ ಹಲಗತ್ತಿ, ವಿಜಯಶಂಕರ ಹೆಬ್ಬಳ್ಳಿ, ಶಿವು ಶಿರೂರ, ಚಿನ್ನಣ್ಣವರ ಸೇರಿದಂತೆ ನಗರದ ಪ್ರಮುಖರಾದ ಕುಪ್ತಸ್ತ, ಮಲ್ಲೇಶಪ್ಪ ಜಿಗಜಿನ್ನಿ, ನಿಂಗಣ್ಣ ದಾವಣಗೇರಿ, ಎಸ್.ಸಿ.ಬಿರಾದಾರ, ಆರ್.ಎನ್.ಅಂಗಡಿ, ಸಂಗಣ್ಣ ಚಿತ್ತರಗಿ, ವೆಂಕಟೇಶ ಮಠ, ತಳವಾಗಿ, ಯಲ್ಲಪ್ಪ ಕ್ಯಾದಿಗೇರಿ ಹಾಗೂ ಇತರರು ಉಪಸ್ಥಿತರಿದ್ದರು.