ಧರ್ಮದ ಪ್ರತಿಷ್ಠಾಪನೆಯಲ್ಲಿ ಶ್ರೀಕೃಷ್ಣನ ಪಾತ್ರ ಮಹತ್ವದ್ದಾಗಿದೆ : ಶಾಸಕ ಶ್ರೀನಿವಾಸ ಮಾನೆ
ಹಾನಗಲ್ 13: ಧರ್ಮ ಮತ್ತು ಅಧರ್ಮದ ನಡುವಿನ ಯುದ್ಧದಲ್ಲಿ ಧರ್ಮದ ವಿಜಯಕ್ಕೆ ಕಾರಣನಾಗಿದ್ದು ಶ್ರೀಕೃಷ್ಣ ಪರಮಾತ್ಮ. ಧರ್ಮದ ಪ್ರತಿಷ್ಠಾಪನೆಯಲ್ಲಿ ಶ್ರೀಕೃಷ್ಣನ ಪಾತ್ರ ಮಹತ್ವದ್ದಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ತಾಲೂಕಿನ ಜಂಗಿನಕೊಪ್ಪ ಗ್ರಾಮದಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ 5 ಲಕ್ಷ, ಆರಾಧನಾ ಯೋಜನೆಯಡಿ 3 ಲಕ್ಷ ಹಾಗೂ ಮುಜರಾಯಿ ಇಲಾಖೆಯಿಂದ ಬಿಡುಗಡೆ ಮಾಡಿದ 1.5 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀಕೃಷ್ಣನ ದೇವಸ್ಥಾನ ಉದ್ಘಾಟಿಸಿ ಅವರು ಮಾತನಾಡಿದರು. ಶ್ರೀಕೃಷ್ಣನ ದೇವಸ್ಥಾನಗಳು ವಿರಳ. ಅಂಥದೊಂದು ದೇವಸ್ಥಾನವನ್ನು ಜಂಗಿನಕೊಪ್ಪ ಗ್ರಾಮದಲ್ಲಿ ನಿರ್ಮಿಸಿರುವುದು ಖುಷಿ ತಂದಿದೆ ಎಂದು ಹೇಳಿದ ಅವರು ದೇವಸ್ಥಾನಗಳು ಶ್ರದ್ಧೆ, ಭಕ್ತಿಯ ಕೇಂದ್ರಗಳಾಗಿವೆ. ಇವುಗಳನ್ನು ಮುಂದಿನ ಪೀಳಿಗೆವರೆಗೆ ಸಂರಕ್ಷಿಸಬೇಕಿರುವ ಗುರುತರ ಜವಾಬ್ದಾರಿ ಯುವ ಸಮೂಹದ ಮೇಲಿದೆ. ಧರ್ಮದ ಮಾರ್ಗದಲ್ಲಿ ನಡೆಯುವ ಸಂಕಲ್ಪ ಪ್ರತಿಯೊಬ್ಬರೂ ತೊಡಬೇಕಿದೆ. ಇನ್ನೊಬ್ಬರನ್ನು ನೋಯಿಸದೇ ಎಲ್ಲರ ಕಷ್ಟಸುಖಗಳಲ್ಲಿ ಭಾಗಿಯಾಗುವ ಮೂಲಕ ಆದರ್ಶ ಜೀವನ ಸಾಗಿಸುವಂತೆ ಕರೆ ನೀಡಿದರು.
ಶಿರಗೋಡ ಗ್ರಾಪಂ ಅಧ್ಯಕ್ಷೆ ರೂಪಾ ಮಾಳಾಪೂರ,ಉಪಾಧ್ಯಕ್ಷ ಮುಸ್ತಫಾ ಮುಜಾವರ, ಸದಸ್ಯ ಕುಮಾರ ಲಮಾಣಿ ಮುಖಂಡರಾದ ಜಯರಾಮ ಮಾಳಾಪೂರ, ನಿಂಗನಗೌಡ ಪಾಟೀಲ, ಚಂದ್ರ್ಪ ಅವಲಗೇರಿಕೊಪ್ಪ, ನಾಗೇಶ ಆನವಟ್ಟಿ, ರಾಮಣ್ಣ ಪೂಜಾರ, ಗಣೇಶ ಗಿರಿಸಿನಕೊಪ್ಪ, ಲಕ್ಷ್ಮಣ ನೆಲ್ಲಿಬೀಡ, ಗಂಗಪ್ಪ ಆಲೂರ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಇದಕ್ಕೂ ಮೊದಲು ಕೃಷ್ಣನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಹೋಮ,ಹವನ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಕೃಷ್ಣನ ಮೂರ್ತಿಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು.