ನಾಗಾವಿ ಗ್ರಾಮದ ಯಲ್ಲಮ್ಮದೇವಿಯ ಭಕ್ತಿಗೀತೆ ಲೋಕಾರೆ​‍್ಣ

Lokarena is a devotional song of Yallammadevi of Nagavi village

ನಾಗಾವಿ ಗ್ರಾಮದ ಯಲ್ಲಮ್ಮದೇವಿಯ ಭಕ್ತಿಗೀತೆ ಲೋಕಾರೆ​‍್ಣ                

ಗದಗ 17: ಹಲವು ಶತಮಾನಗಳ ಪೌರಾಣಿಕ, ಐತಿಹಾಸಿಕ ಹಿನ್ನೆಲೆಯುಳ್ಳ ನಾಗಾವಿಯ ಶ್ರೀಯಲ್ಲಮ್ಮದೇವಿ ದೇವಸ್ಥಾನಕ್ಕೆ ಲಕ್ಷೋಪಲಕ್ಷ ಭಕ್ತರು ನಡೆದುಕೊಳ್ಳುತ್ತಿದ್ದಾರೆ. ಭಕ್ತರ ಪಾಲಿನ ಭಾಗ್ಯದೇವತೆಯಾಗಿರುವ ಈ ತಾಯಿಯ ಮಹಿಮೆ ಅಪಾರ. ಇಲ್ಲಿಗೆ ಆಗಮಿಸುವ ಭಕ್ತರ ಹರಕೆಗಳು ಈಡೇರುವುದು ಶತಸಿದ್ಧ ಎಂಬುದು ಹಲವಾರು ಬಾರಿ ಸಾಬೀತಾಗಿದೆ. ಇಂತಹ ಯಲ್ಲಮ್ಮದೇವಿಯ ಪುಣ್ಯಕ್ಷೇತ್ರದ ಮಹಿಮೆಯನ್ನು ಎಷ್ಟು ಕೊಂಡಾಡಿದರೂ ಕಡಿಮೆ ಅನಿಸುವುದಿಲ್ಲ ಎಂದು ಬೆಳದಡಿ ಗ್ರಾಮದ ದೇವಿ ಆರಾಧಕರಾದ ಶಂಭುಲಿಂಗಯ್ಯ ಕಲ್ಮಠ ಹೇಳಿದರು. 

ತಾಲೂಕಿನ ನಾಗಾವಿ ಗ್ರಾಮದ ಸೋಮೇಶ ಹಿರೇಮಠ ಪ್ರತಿಷ್ಠಾನ ಹಾಗೂ ನಾಗಾವಿ ನಾನಾ ಯೂಟ್ಯೂಬ್ ವತಿಯಿಂದ ನಾಗಾವಿ ಗ್ರಾಮದ ಯಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವದ ಶುಭ ಸಂದರ್ಭದಲ್ಲಿ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ದೇವಸ್ಥಾನದ ಪ್ರಾಂಗಣದಲ್ಲಿ ನಾಗಾವಿ ನಾನಾ ಎಂಬ ಯುಟ್ಯೂಬ್ ಹಾಗೂ ಯಲ್ಲಮ್ಮದೇವಿಯ ಭಕ್ತಿಗೀತೆಯನ್ನು ಲೋಕಾರೆ​‍್ಣ ಮಾಡಿ ಅವರು ಮಾತನಾಡಿದರು. 

ದೇವಸ್ಥಾನ ಕಮೀಟಿಯ ಪ್ರಮುಖರಾದ ಕೆ.ಬಿ. ಮರಡ್ಡಿ ಮಾತನಾಡಿ, ಭಕ್ತರ ಸಹಕಾರ ಜನಪ್ರತಿನಿಧಿಗಳ ಇಚ್ಛಾಶಕ್ತಿಯಿಂದ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ಸಾಗುತ್ತಿವೆ. ಇನ್ನಷ್ಟು ಭಕ್ತರನ್ನು ಆಕರ್ಷಣೆಗೊಳಿಸಲು ನಮ್ಮೂರಿನ ಸೋಮೇಶ ಹಿರೇಮಠ ಪ್ರತಿಷ್ಠಾನದವರು ಭಕ್ತಿ ಗೀತೆಯನ್ನು ಹೊರತರುತ್ತಿರುವುದು ಸಂತೋಷದ ವಿಷಯ. ನಾಗಾವಿ ನಾನಾ ಯೂಟ್ಯೂಬ್‌ನವರು ಬಿಡುಗಡೆಗೊಳಿಸಿದ ಭಕ್ತಿಗೀತೆಯನ್ನು ಲಕ್ಷಾಂತರ ಜನ ವೀಕ್ಷಿಸಿ  ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಹೇಳಿದರು. 

ಸೋಮೇಶ  ಹಿರೇಮಠ ಪ್ರತಿಷ್ಠಾನದ ಅಧ್ಯಕ್ಷ ಶಿಶುವಿನಹಳ್ಳಿಯ ಬಸವಣ್ಣೆಯ್ಯಸ್ವಾಮಿ ಹಿರೇಮಠ ಮಾತನಾಡಿ, ಸರ್ಕಾರದ ಶಕ್ತಿ ಯೋಜನೆಯಿಂದ ನಾಗಾವಿ ಯಲ್ಲಮ್ಮದೇವಿ ದೇವಸ್ಥಾನ ಸೇರಿದಂತೆ  ರಾಜ್ಯದ ಮಠ-ಮಂದಿರಗಳಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತ ಸಾಗಿದ್ದು, ಪ್ರವಾಸೋದ್ಯಮ ಹಾಗೂ ಮುಜರಾಯಿ ಇಲಾಖೆಯವರು ಭಕ್ತರಿಗೆ ಅನುಕೂಲವಾಗುವಂತೆ ನಾಗಾವಿ ಕ್ಷೇತ್ರದಲ್ಲಿ ಯಾತ್ರಿನಿವಾಸವನ್ನು ನಿರ್ಮಿಸಬೇಕು. ನಾಗಾವಿ ನಾನಾ ಯೂಟ್ಯೂಬ್‌ನಿಂದ ಪ್ರಸಾರವಾಗುವ  ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಜನ ಶೇರ್ ಮಾಡಿ ದೇಶದ ಜನತೆಗೆ ದೇವಿಯ ಮಹಿಮೆ   ಗೊತ್ತಾಗುವಂತೆ ಲೈಕ್, ಶೇರ್ ಸಬ್‌ಸ್ಕ್ರೈಬ್ ಮಾಡುವರೊಂದಿಗೆ ತಾಯಿಯ ಭಕ್ತಿಗೆ ಪಾತ್ರಬೇಕೆಂದು ಹೇಳಿದರು. 

ನಾಗಾವಿ ನಾನಾ ಯೂಟ್ಯೂಬ್ ಹಾಗೂ ಭಕ್ತಿಗೀತೆಯನ್ನು ಲೋಕಾರೆ​‍್ಣ ಗೊಳಿಸುವ ಈ ಸಂದರ್ಭದಲ್ಲಿ ಶ್ರೀರೇಣುಕಾ ಯಲ್ಲಮ್ಮದೇವಿ ದೇವಸ್ಥಾನದ ಕಮೀಟಿಯ ಪ್ರಮುಖರಾದ ಗವಿಯಪ್ಪಗೌಡ ಪಾಟೀಲ, ತುಳಸಿಗಿರಿ ಮರಡ್ಡಿ, ಕ್ರಿಷ್ಟಗೌಡ ರಂಗನಗೌಡ್ರ ಸೇರಿದಂತೆ ನಾಗಾವಿ ಗ್ರಾಮದ ಷಣ್ಮುಖಗೌಡ ಪಾಟೀಲ. ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮೈಲಾರ​‍್ಪ ತಾಮ್ರಗುಂಡಿ, ಯಮನೂರಸಾಬ್ ನದಾಫ, ಚಂದ್ರಶೇಖರಯ್ಯ, ರಾಮಚಂದ್ರಸಾ ಶಿದ್ಲಿಂಗ್, ಕರಿಯಪ್ಪ ಹವಳೆಪ್ಪನವರ, ರಾಘವೇಂದ್ರ ಹಬೀಬ ಮುಂತಾದವರು ಉಪಸ್ಥಿತರಿದ್ದರು.  

 ಬಸವಣ್ಣೆಯ್ಯಸ್ವಾಮಿ ಹಿರೇಮಠ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.