ಕಷ್ಟ-ನಷ್ಟಗಳನ್ನು ಸಮನಾಗಿ ಸ್ವೀಕರಿಸಿದರೆ ಬಾಳೇ ಬಂಗಾರ: ಕೊಟ್ಟೂರು ಸ್ವಾಮೀಜಿ
ಬಳ್ಳಾರಿ 26: ಶಿವಶರಣರು ಬೋಧಿಸಿದ ವಚನಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಎಲ್ಲರ ಬಾಳು ಬಂಗಾರವಾಗುತ್ತದೆ. ಇದರಲ್ಲಿ ಯಾವುದೇ ಸಂಶಯವಿಲ್ಲವೆಂದು ಬಳ್ಳಾರಿ-ಹೊಸಪೇಟೆ-ಹಾಲಕೆರೆ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನ ಮಠದ ಜಗದ್ಗುರು ಡಾ.ಕೊಟ್ಟೂರು ಬಸವಲಿಂಗ ಸ್ವಾಮೀಜಿ ಹೇಳಿದರು.
ಜಗದ್ಗುರು ಕೊಟ್ಟೂರು ಸ್ವಾಮಿ ಮಠದ ಅಕ್ಕನ ಬಳಗದ ಸಹಯೋಗದಲ್ಲಿ ಇಲ್ಲಿನ ಶ್ರೀಮಠದಲ್ಲಿ ಆಯೋಜಿಸಿದ್ದ ಮಾಸಿಕ ಶಿವಾನುಭವ ಸಂಪದ-3 ರ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಶರಣರು ಸಮಾಜಮುಖಿಯಾಗಿ ಎಲ್ಲ ಅನುಭವಗಳನ್ನು ವಚನಗಳ ಅಮೃತವಾಣಿಯಲ್ಲಿ ತಿಳಿಸಿದ್ದಾರೆ. ಜನರು ಶರಣರ ವಾಣಿಗಳನ್ನು ಆಲಿಸಿ ಬಾಳುವ ಕಲೆ ಕರಗತ ಮಾಡಿಕೊಳ್ಳಬೇಕು. ಬದುಕಿನಲ್ಲಿ ಬರುವ ಸಿಹಿ, ಕಹಿಗಳನ್ನು ಸಮನಾಗಿ ಹಂಚಿಕೊಂಡು ಸನ್ಮಾರ್ಗದತ್ತ ಹೆಜ್ಜೆಯಿಟ್ಟಲ್ಲಿ ನೆಮ್ಮದಿ ತಾನಾಗಿಯೇ ಲಭಿಸುತ್ತದೆ ಎಂದರು.
ತೋರಣಗಲ್ಲಿನ ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕಿ ಡಾ.ಉಮಾ ಹೆಚ್.ಎಂ. ಅವರು ‘ವಚನಗಳಲ್ಲಿ ಮಹಿಳಾ ಸಬಲೀಕರಣ’ ವಿಷಯವಾಗಿ ಉಪನ್ಯಾಸ ನೀಡುತ್ತ, ಶರಣರು ಕ್ರಿ.ಶ.12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಯನ್ನೇ ಸೃಷ್ಟಿಸಿದ್ದರು. ಅಂದಿನ ಶರಣ ಸಾಹಿತ್ಯ ಕಾಲದಲ್ಲೇ ಮಹಿಳೆಗೆ ಸ್ವಾತಂತ್ರ್ಯ ದೊರಕಿಸಿಕೊಟ್ಟಿದ್ದರು. ಮಹಿಳೆಯರು ಅಬಲೆಯರಲ್ಲ, ಸಬಲೆಯರು. ಇದನ್ನು ಬಸವಣ್ಣನವರೇ ಹೇಳಿದ್ದು, ಅಂದಿನ ಶರಣರೊಂದಿಗೆ ಶರಣೆಯರೂ ಸಾರಿ ಹೇಳಿದ್ದಾರೆ ಎಂದರು.
ಎರಡು ದಿನ ನಡೆದ ಕಾರ್ಯಕ್ರಮದಲ್ಲಿ ನಿರಂಜನ ಜಗದ್ಗುರು ಡಾ.ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳ ದಿವ್ಯ ಸಾನಿಧ್ಯ ಹಾಗೂ ಜಗದ್ಗುರು ಕೊಟ್ಟೂರುಸ್ವಾಮಿ ಮಠದ ಅಕ್ಕನಬಳಗದ ಸಹಯೋಗದಲ್ಲಿ ಬೆಂಗಳೂರಿನ ವೈದೇಹಿ ಆಸ್ಪತ್ರೆ, ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಹೃದಯ ಸಂಬಂಧಿ ಖಾಯಿಲೆಗಳು, ನರರೋಗ, ಎಲುಬು-ಕೀಲುಗಳ ತೊಂದರೆ, ಕಣ್ಣು, ಕಿಡ್ನಿಯಲ್ಲಿ ಕಲ್ಲು, ಕ್ಯಾನ್ಸರ್, ಮುಂತಾದ ಖಾಯಿಲೆಗಳಿಗೆ ಉಚಿತವಾಗಿ ತಪಾಸಣೆ ನಡೆಸಲಾಯಿತು.
ಸಂಗೀತ ಸೇವೆಯನ್ನು ದೊಡ್ಡಬಸವೇಶ ಗವಾಯಿಗಳು ಹಾಗೂ ಸಂಗಡಿಗರು ನಡೆಸಿಕೊಟ್ಟರು. ಬಳ್ಳಾರಿ ಜಗದ್ಗುರು ಕೊಟ್ಟೂರು ಸಂಸ್ಥಾನಮಠದ ಅಡಿ, ಅಕ್ಕನ ಬಳಗದ ಸಹಯೋಗದೊಂದಿಗೆ ಕರ್ನಾಟಕ ಲೇಖಕಿಯರ ಸಂಘದ ಸಹಭಾಗಿತ್ವದಲ್ಲಿ ಬಳ್ಳಾರಿ ಲೇಖಕಿಯರ ಸಂಘದ ನೂತನ ಪದಗ್ರಹಣ ಸಮಾರಂಭವೂ ಜರುಗಿತು.
ಗೌರವಾಧ್ಯಕ್ಷರಾಗಿ ಡಾ. ಅಂಜನಾ ಕೃಷ್ಣಪ್ಪ, ಅಧ್ಯಕ್ಷರಾಗಿ ಮಧುಮತಿ ರಮೇಶ್ ಪಾಟೀಲ್, ಉಪಾಧ್ಯಕ್ಷರಾಗಿ ವೆಂಕಮ್ಮ, ಹಿರಿಯ ಸಲಹೆಗಾರರಾಗಿ ಸುಶೀಲಾ ಶಿರೂರು, ಕಾರ್ಯದರ್ಶಿಯಾಗಿ ಈರಮ್ಮ, ಕೋಶಾಧ್ಯಕ್ಷರಾಗಿ ಸಂಧ್ಯಾ ಶಾನ್ ಭಾಗ್, ಸಹ ಕಾರ್ಯದರ್ಶಿಯಾಗಿ ಮುಕ್ತಾ ವೇಣಿ ದೀಕ್ಷಿತ್, ಸಂಘಟನಾ ಕಾರ್ಯದರ್ಶಿಯಾಗಿ ಡಾ. ಭ್ರಮರಾಂಬಾ, ಸದಸ್ಯರಾಗಿ ಲಕ್ಷ್ಮೀ ಪವನ್ ಕುಮಾರ್, ಡಾ. ಸುಮ, ಲಲಿತಾ ಕಪ್ಪರಮಠ, ಲಕ್ಷ್ಮಿ, ಲತಾ ಏ, ಯು ನೀಲಮ್ಮ, ನೂರ್ ಜಹಾನ್, ಶಿವಲೀಲಾ ಅರವಿಂದ, ಭಾವನಾ ಹೊಟ್ಟೆಗೌಡ್ರು ಅವರು ಅಧಿಕಾರ ವಹಿಸಿಕೊಂಡರು.ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ಮಧುಮತಿ ಪಾಟೀಲ್ ನಿರ್ವಹಿಸಿದರೆ, ವಂದನಾರೆ್ಣಯನ್ನು ಅಕ್ಕನ ಬಳಗದ ಈರಮ್ಮ ನೆರವೇರಿಸಿದರು. ಜಗದ್ಗುರು ಕೊಟ್ಟೂರುಸ್ವಾಮಿ ಮಠದ ಅಕ್ಕನಬಳಗದ ಎಲ್ಲಾ ಪದಾಧಿಕಾರಿಗಳು, ಸರ್ವ ಸದಸ್ಯರು ಕಾರ್ಯಕ್ರಮಗಳ ಯಶಸ್ಸಿಗೆ ಸಹಕರಿಸಿದರು.