ಮಹಿಳೆಯರು ಸಮಾಜಮುಖಿಯಾಗಿ ಬೆಳೆಯಲಿ : ರತ್ನಪ್ರಭಾ ಬೆಲ್ಲದ
ಬೆಳಗಾವಿ 11: ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತವಾಗದೆ, ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದುಕೊಂಡು ಸಮಾಜಮುಖಿಯಾಗಿ ಬೆಳೆಯಬೇಕೆಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷೆ ರತ್ನಪ್ರಭಾ ಬೆಲ್ಲದ ಕರೆ ನೀಡಿದರು. ಅವರು ಇಂದು ನಗರದ ಕನ್ನಡ ಭವನದಲ್ಲಿ ಮಹಾಲಕ್ಷ್ಮಿ ಮಹಿಳಾ ಮಂಡಳ ಹಾಗೂ ಕನ್ನಡ ಭವನದ ಸಂಯುಕ್ತ ಆಶ್ರಯದಲ್ಲಿ ಜರುಗಿದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು. ಮುಂದುವರೆದು ಮಾತನಾಡಿದ ಅವರು ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಅವಳದೇ ಆದ ವಿಶೇಷ ಗೌರವ, ಸ್ಥಾನಮಾನಗಳಿವೆ. ಆಧುನಿಕತೆಯ ಭರಾಟೆಯಲ್ಲಿ ಮಹಿಳೆಯರು ಇವುಗಳಿಗೆ ಧಕ್ಕೆ ಬಾರದಂತೆ ತಮ್ಮ ಜೀವನ ರೂಪಿಸಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಮಹಾಲಕ್ಷ್ಮಿ ಮಹಿಳಾ ಮಂಡಳದ ಅಧ್ಯಕ್ಷೆ ವೀಣಾ ಚಿನ್ನಣ್ಣವರ ಮಾತನಾಡಿ ಮಹಿಳೆಯರು ಸಂಘಟಿತರಾಗಿದ್ದರೆ ಸಮಾಜ ಸದೃಢವಾಗಿ ಬೆಳೆಯುತ್ತದೆ. ಕಾರಣ ಎಲ್ಲರೂ ಅವರವರ ಅಭಿರುಚಿಗೆ ತಕ್ಕಂತೆ ವಿವಿಧ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದರು. ರಾಜ್ಯದ ಹೆಮ್ಮೆಯ ರೈತ ಮಹಿಳೆಯರಾದ ಸುಜಾತಾ ಮರಡಿ ಹಾಗೂ ರೂಪಾ ಮರಡಿ ಅವರನ್ನು ಸನ್ಮಾನಿಸಲಾಯಿತು. ಉದ್ಘಾಟನಾ ಸಮಾರಂಭದ ನಂತರ ಮಹಿಳೆಯರ ಹಾಸ್ಯಮಿಶ್ರಿತ ನಾಟಕ ಹಾಳು ಹರಟೆ, ನೃತ್ಯ, ಸಂಗೀತ ಮುಂತಾದ ವರ್ಣಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಮನಸೂರೆಗೊಂಡವು. ಸುನಿತಾ ಪಾಟೀಲ, ಶೋಭಾ ಪಾಟೀಲ, ಶಾರದಾ ಪಾಟೀಲ, ವೀಣಾ ಗೌಡರ, ಶೀಲಾ ಗುಡಸ, ಲಕ್ಷ್ಮೀ ಪಾಟೀಲ, ರೂಪಾ ಪ್ರಸಾದ ಸೇರಿದಂತೆ ಇತರರು ಉಪಸ್ಥಿತರಿದ್ದರು. ಮಹಾಲಕ್ಷ್ಮಿ ಮಹಿಳಾ ಮಂಡಳದ ಕಾರ್ಯದರ್ಶಿ ಜ್ಯೋತಿ ಎ.ಆರ್. ನಿರೂಪಿಸಿದರು. ಉಪಾಧ್ಯಕ್ಷೆ ಪ್ರೇಮಾ ಕಣಕತ್ರೆ ವಂದಿಸಿದರು.