ಸಮುದಾಯಿಕ ಉಪಯುಕ್ತ ಫಲಿತಾಂಶ ಪೂರಿತ ಸಂಶೋಧನೆಗಳು ಹೊರಬರಲಿ: ಪ್ರೊ. ಎಂ.ಎಸ್.ಖೊದ್ನಾಪೂರ
ವಿಜಯಪುರ 24: ಯಾವುದೇ ವಿಷಯ, ಸಂಗತಿ, ಸಮಸ್ಯೆಗೆ ಪರಿಹಾರ ಮತ್ತು ಹೊಸ ಜ್ಞಾನವನ್ನು ಪಡೆಯಲು ಅಥವಾ ಅಸ್ತಿತ್ವದಲ್ಲಿರುವ ಜ್ಞಾನವನ್ನು ಸುಧಾರಿಸಲು ಮಾಹಿತಿಯನ್ನು ಸಂಗ್ರಹಿಸಿ, ತನ್ಮೂಲಕ ಕೈಕೊಳ್ಳುವ ತನಿಖೆ ಅಥವಾ ವಿಶ್ಲೇಷಣಾತ್ಮಕ ಮೌಲ್ಯಮಾಪನವೇ ಸಂಶೋಧನೆಯಾಗಿದೆ. ಇದು ಯಾವುದೇ ಕ್ಷೇತ್ರದಲ್ಲಿ ಹೊಸತನವನ್ನು ಕಾಣುವ, ನಾವಿನ್ಯತೆಯನ್ನು ಹೊಂದುವ ಮತ್ತು ಸಿದ್ಧಾಂತಗಳ ಅಭಿವೃದ್ಧಿಗೆ ಸಹಕಾರಿಯಾಗಿದೆ. ಸಂಶೋಧನೆಯು ಆಯ್ಕೆ ಮಾಡಿಕೊಂಡ ವಲಯದಲ್ಲಿ ಎದುರಾಗುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಂಡು, ಸೂಕ್ತ ನಿರ್ಣಯ, ತೀರ್ಮಾನ, ಯೋಜನೆ, ನೀತಿ-ಧೋರಣೆಗಳನ್ನು ರೂಪಿಸಲು ಮಹತ್ವವನ್ನು ಪಡೆದುಕೊಂಡಿದೆ. ಆದ್ದರಿಂದ ಸಂಶೋಧನಾರ್ಥಿಗಳು ಕೈಗೊಳ್ಳುವ ಸಂಶೋಧನೆಯು ಗುಣಾತ್ಮಕವಾಗಿದ್ದು, ಅದು ಸಮುದಾಯಕ್ಕೆ ಏನನ್ನಾದರೂ ಕೊಡುಗೆ ನೀಡುವಂತಹ ಹಾಗೂ ಸಾಮಾಜಿಕ, ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಬಲ್ಲ ಸಂಶೋಧನೆಯಾಗಬೇಕು. ವಿಶೇಷವಾಗಿ ಸಂಶೋಧನಾ ಕಾರ್ಯವಿಧಾನವು ಗುಣಾತ್ಮಕವಾಗಿದ್ದು, ಅದು ಪ್ರಚಲಿತ ಮತ್ತು ಸಂಕೀರ್ಣ ಸಮಸ್ಯೆಗಳ ಬೆಳಕು ಚೆಲ್ಲುತ್ತಾ, ಮಾಹಿತಿ ಸಂಗ್ರಹಿಸುವುದು, ಸಂಖ್ಯಾಶಾಸ್ತ್ರ ಪದ್ಧತಿಗಳ ಮೂಲಕ ವಿಶ್ಲೇಷಿಸುವುದು, ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದು, ಪರಿಹಾರ ಕ್ರಮಗಳನ್ನು ಕೈಗೊಳ್ಳುವುದು ಪ್ರಕ್ರಿಯೆಯನ್ನು ಒಳಗೊಂಡಿರಬೇಕು. ವೈಜ್ಞಾನಿಕ ಆಧಾರಿತ ಸಂಶೋಧನೆಗಳಿಂದ ಕೃಷಿ, ಕೈಗಾರಿಕಾ ಕ್ಷೇತ್ರಗಳಲ್ಲಿ ಸಂಶೋಧನೆಗಳು ನಡೆದು ಅದು ದೇಶದ ಆರ್ಥಿಕ ಪ್ರಗತಿ ಮತ್ತು ಸುಸ್ಥಿರ ಅಭಿವೃದ್ಧಿ ಸಾಧಿಸುವಲ್ಲಿ ಪೂರಕವಾಗಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎಂ.ಎಸ್.ಖೊದ್ನಾಪೂರ ಅಭಿಪ್ರಾಯಪಟ್ಟರು.
ಅವರು ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಬಂಗಾರಮ್ಮ ಸಜ್ಜನ ಮಹಿಳಾ ಕಾಲೇಜಿನಲ್ಲಿ ಎಂ.ಕಾಂ ವಿಭಾಗದ ವತಿಯಿಂದ ಆಯೋಜಿಸಿದ್ದ “ಸಂಶೋಧನಾ ಕಾರ್ಯವಿಧಾನಗಳು” ವಿಷಯ ಕುರಿತ ಒಂದು ದಿನದ ಕಾರ್ಯಾಗಾರವನ್ನು ಸಸಿಗೆ ನೀರುಣಿಸುವದರ ಮೂಲಕ ಪ್ರಥಮ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿ, ಮಾತನಾಡುತ್ತಿದ್ದರು.
ಅವರು ಮಾತನಾಡುತ್ತಾ, ವಿದ್ಯಾರ್ಥಿದೆಸೆಯಲ್ಲಿಯೇ ಸಂಶೋಧನಾ ಆಸಕ್ತಿ, ಅಭಿರುಚಿ ಮತ್ತು ಹವ್ಯಾಸವನ್ನು ಬೆಳೆಸಿಕೊಂಡು ತಾವು ಆಯ್ದುಕೊಂಡ ವಲಯದಲ್ಲಿನ ನೈಜ ಸಮಸ್ಯೆಗಳಿಗೆ ಪರಿಹಾತ್ಮಕ ಸೂಚಿ, ಮಾರ್ಗಸೂಚಿ ಮತ್ತು ಸಮುದಾಯಕ್ಕೆ ಕೊಡುಗೆ ನೀಡವಂತಹ ಸಂಶೋಧನೆಗಳು ಹೊರಬರಬೇಕು. ಸಂಶೋಧನೆ, ಸಮೀಕ್ಷೆ, ಮಾಹಿತಿ ಸಂಗ್ರಹಣೆ, ದತ್ತಾಂಶ ವಿಶ್ಲೇಷಣೆ ಮತ್ತು ಸಂಶೋಧನೆಯನ್ನು ಪರಿಮಾಣಾತ್ಮಕ ಮತ್ತು ಗುಣಾತ್ಮಕವನ್ನಾಗಿ ಕೈಗೊಂಡು ಸಮುದಾಯಿಕ ಉಪಯುಕ್ತ ಫಲಿತಾಂಶ ಹೊರಬರುವಂತೆ ಮಾಡುವಲ್ಲಿ ಸಂಶೋಧನಾ ಕಾರ್ಯವಿಧಾನಗಳನ್ನು ಪರಿಣಾಮಕಾರಿ ಬಳಸಿಕೊಳ್ಳಬೇಕು ಎಂದರು.
ಎರಡನೇಯ ಗೋಷ್ಠಿಯಲ್ಲಿ “ಪ್ರಾಜೆಕ್ಟ ವರದಿ ತಯಾರಿಕೆ” ವಿಷಯ ಕುರಿತು ಉಪನ್ಯಾಸ ನೀಡಿದ ಡಾ. ಸಂತೋು ಕಬಾಡೆ ಅವರು ಸ್ನಾತಕ-ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ಪದವಿ ವಿದ್ಯಾರ್ಥಿಗಳು ಪ್ರಾಜೆಕ್ಟ ವರದಿ ತಯಾರಿಸುವಾಗ ಆಯ್ಕೆ ಮಾಡಿಕೊಂಡ ಕ್ಷೇತ್ರಕ್ಕೆ ಮಾತ್ರ ಸಂಬಂಧಿಸಿದಂತೆ ಉದ್ಧೇಶ ಮತ್ತು ಗುರಿಗಳನ್ನು ನಿಗದಿಪಡಿಸಿ, ಸಂಶೋಧನೆಯಲ್ಲಿ ಏನೆಲ್ಲ ಅಂಶಗಳನ್ನು ಪರಿಗಣಿಸಬೇಕು, ಸಂಖ್ಯಾಶಾಸ್ತ್ರದ ಪದ್ಧತಿಗಳ ಅಳವಡಿಕೆ, ಮಾಹಿತಿ ಸಂಗ್ರಹಿಸಲು ನಡೆಸಬಹುದಾದ ಸಮೀಕ್ಷೆ, ದತ್ತಾಂಶ ವಿಶ್ಲೇಷಣೆ, ಮತ್ತು ಅದರ ಮಹತ್ವದ ಕುರಿತು ಉಪನ್ಯಾಸ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ವೈ.ತಮ್ಮಣ್ಣ ಅವರು ಮಾತನಾಡಿ, ಸಂಶೋಧನಾರ್ಥಿಗಳು ಭವಿಷ್ಯದ ಸಂಶೋಧನೆ ಮತ್ತು ಅಭಿವೃದ್ಧಿಗೆ ಮಾರ್ಗದರ್ಶನ ನೀಡಲು ಹೊಸ ವಿಚಾರಗಳು, ಮತ್ತು ಸಿದ್ದಾಂತಗಳನ್ನು ಸುಧಾರಿಸಲು ಪ್ರಯೋಜನಕಾರಿಯಾಗಬೇಕು. ಸಂಶೋಧನೆಯು ಕೇವಲ ಪದವಿ ಪಡೆಯಲು ಅಥವಾ ವೃತ್ತಿ ಪದೋನ್ನತಿ ಪಡೆಯಲು ಮಾತ್ರ ಸೀಮಿತವಾಗಬಾರದು, ಸಮಾಜಕ್ಕೆ ಮತ್ತು ಸರ್ಕಾರ ಯೋಜನೆಗಳ ಯಶಸ್ವಿ ಕಾರ್ಯಾಚರಣೆಗೆ ಪೂರಕವಾಗುವ ಫಲಿತಾಂಶ ಪೂರಿತ ಸಂಶೋಧನೆಗಳನ್ನು ಕೈಕೊಳ್ಳಬೇಕೆಂದು ಸಲಹೆ ನೀಡಿದರು.
ಸಮಾರಂಭದಲ್ಲಿ ಎಂ.ಕಾಂ ವಿಭಾಗದ ಪ್ರಾಧ್ಯಾಪಕಿ ಸೌಮ್ಯ ಕುಲಕರ್ಣಿ, ನಿವೇದಿತಾ. ಡಿ.ಕೆ. ವೇದಿಕೆಯ ಮೇಲಿದ್ದರು.
ಕಾರ್ಯಕ್ರಮದಲ್ಲಿ ಐ.ಕ್ಯೂ.ಎ.ಸಿ ಸಂಚಾಲಕಿ ಡಾ. ಭಕ್ತಿ ಮಹಿಂದ್ರಕರ, ಡಾ. ಎಂ. ಶ್ರೀನಿವಾಸ್, ಪ್ರೊ. ಕೆ.ಎಂ.ಪಾಟೀಲ, ಪ್ರೊ. ಶೈಲಾ ರೆಬಗೊಂಡ, ಎಸ್.ಎಂ. ತುಪ್ಪದ, ಇನ್ನಿತರರು ಸಹ ಉಪಸ್ಥಿತರಿದರು. ಲಕ್ಷ್ಮೀ ಮಸಳಿ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಸೌಮ್ಯ ಕುಲಕರ್ಣಿ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಎಲ್ಲ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.