ಜನಸಾಮಾನ್ಯರಿಗೆ ಕಾನೂನು ಅರಿವು ಅತ್ಯವಶ್ಯಕವಾಗಿದೆ: ನ್ಯಾ. ಚಂದ್ರಶೇಖರ ಸಿ
ಕೊಪ್ಪಳ 17: ಜನಸಾಮಾನ್ಯರಿಗೆ ಕಾನೂನು ಅರಿವು ಅತ್ಯವಶ್ಯಕವಾಗಿದೆ ಎಂದು ಕೊಪ್ಪಳ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಶೇಖರ ಸಿ ಹೇಳಿದರು.
ಅವರು ಮಂಗಳವಾರ ಕೊಪ್ಪಳ ನಗರಸಭೆ ಹಿಂದುಗಡೆಯ ಕ್ರಿಸ್ತ ಜ್ಯೋತಿ ಚರ್ಚ್‌ನಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ನವ ದೆಹಲಿ, ರಾಷ್ಟ್ರೀಯ ಮಹಿಳಾ ಆಯೋಗ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಿ, ಕೊಪ್ಪಳ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ವಿಧಾನ ಸೆ ಸಮಾಧಾನ'' ಎಂಬ ಮಹಿಳೆಯರಿಗಾಗಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ವಿಧಾನ ಸೆ ಸಮಾಧಾನ'' ಎಂದರೆ ಕಾನೂನು ಮೂಲಕ ಪರಿಹಾರ ಪಡೆಯುವುದೇ ಆಗಿದೆ. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ಕಾನೂನು ಅರಿವು ಮೂಡಿಸಲು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ವೈವಾಹಿಕ ಸಂಬಂಧಗಳಲ್ಲಿ ಬರುವ ತೊಂದರೆಗಳು, ಆಸ್ತಿಗೆ ಸಂಬಂಧಿಸಿದ ಪ್ರಕರಣಗಳು, ಜೀವನಾಂಶ ಪ್ರಕರಣಗಳಲ್ಲಿ ಬರುವ ಅಪ್ರಾಪ್ತ ಮಕ್ಕಳನ್ನು ನೋಡಿಕೊಳ್ಳದೆ ಇರುವುದು, ಹೆಂಡತಿ ಮತ್ತು ತಂದೆ ತಾಯಿನ್ನು ನೋಡಿಕೊಳ್ಳದಿದ್ದಾಗ ಯಾವ ರೀತಿ ಕಾನೂನು ನೆರವು ಪಡೆಯಬೇಕು ಎಂಬುವುದರ ಬಗ್ಗೆ ಎಲ್ಲರು ತಿಳಿದುಕೊಂಡಿರಬೇಕು ಎಂದರು.
ಕಾನೂನು ಮೂಲಕ ಜನರ ಕಷ್ಟಗಳನ್ನು, ಸಮಸ್ಯೆಗಳನ್ನು ಬಗೆಹರಿಸುವುದು ಕಾನೂನು ಸೇವಾ ಪ್ರಾಧಿಕಾರದ ಮುಖ್ಯ ಉದ್ದೇಶವಾಗಿದ್ದು, ಜನರಿಗೆ ಕಾನೂನು ಅರಿವು ನೆರವು ನೀಡಲಾಗುತ್ತಿದೆ ಎಂದು ಹೇಳಿದರು.
ಕೊಪ್ಪಳ ತಾಲ್ಲೂಕು ಪಾಸ್ಟರ್ಸ ಅಸೋಸಿಯೇಷನ ಅಧ್ಯಕ್ಷರಾದ ರೆವೆರೆಂಡ ಜೆ.ರವಿಕುಮಾರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಸರಸ್ವತಿದೇವಿ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ಎಸ್ ದರಗದ, ಪ್ರಧಾನ ದಿವಾಣಿ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ಭಾಗ್ಯಲಕ್ಷ್ಮೀ, ಹಿರಿಯ ವಕೀಲರಾದ ಶ್ಯಾಮಸುಂದರ ಹುಣಸಿಮರದ ಅವರು ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಕೊಪ್ಪಳ ಕಲ್ವಾರಿ ಚಾಪಲ ಟ್ರಸ್ಟ್ ಮುಖ್ಯಸ್ಥರಾದ ರೆವೆರೆಂಡ ನವನೀತ ಕುಮಾರ, ಕ್ರಿಸ್ತ ಜ್ಯೋತಿ ಇ ಸಿ ಐ ಚರ್ಚ್‌ನ ಕಾರ್ಯದರ್ಶಿ ಶಾಂತರಾಜ್ ಎಮ್ ಮುರ್ತೋಟಿ ಹಾಗೂ ಚರ್ಚ್‌ನ ಸಿಬ್ಬಂದಿಗಳು ಹಾಗೂ ಮಹಿಳೆಯರು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.