ಲೋಕದರ್ಶನ ವರದಿ
ಗಂಗಾವತಿ 17: ಜಿಲ್ಲೆಯಲ್ಲಿ ಜನರಿಗೆ ಧವಸ ಧಾನ್ಯಗಳನ್ನು, ಆಹಾರದ ಪೊಟ್ಟಣಗಳನ್ನು ದಾನ ನೀಡುವ ನೆಪದಲ್ಲಿ ದೈಹಿಕ ಅಂತರ ಕಾಪಾಡಿಕೊಳ್ಳುವ ನಿಯಮಗಳನ್ನು ಉಲ್ಲಂಘಿಸುತ್ತಿರುವ ಹಲವು ಘಟನೆಗಳು ನಡೆಯುತ್ತಿವೆ. ಶಾಸಕರು, ಅವರ ಹಿಂದೆ ಇರುವ ರಾಜಕಾರಣಿಗಳು, ಕಾರ್ಯಕರ್ತರು, ಭಾವಿ ರಾಜಕಾರಣಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹೀಗೆ ಹಲವರು ಲಾಕ್ಡೌನ್ ನಿಯಮಗಳನ್ನು ಮೀರುತ್ತಿದ್ದಾರೆ.
ಜಿಲ್ಲೆಗೆ ಭೇಟಿ ನೀಡಿದ ಸಚಿವರೂ ಇದಕ್ಕೆ ಹೊರತಾಗಿಲ್ಲ. ಗುಜರಾತಿನ ಕಾಂಗ್ರೆಸ್ ಶಾಸಕನೋರ್ವನಿಗೆ ಕೊರೊನಾ ಭಾದಿಸಿರುವುದನ್ನು ಸುದ್ದಿ ಮಾದ್ಯಮಗಳು ವರದಿ ಮಾಡಿವೆ. ಇನ್ನಾದರೂ ಶಾಸಕರು, ಸಚಿವರು, ಸಂಸದರು ನಿಯಮಗಳನ್ನು ಮೀರದಿರಲಿ.
ಪೋಲಿಸರು, ವೈದ್ಯರು, ಫಾಮರ್ಾಸಿಸ್ಟಗಳು, ಔಷಧ ವ್ಯಾಪಾರಿಗಳು, ನರ್ಸಗಳು, ಪೌರ ಕಾರ್ಯಕರ್ತರು ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲಾ ಆಡಳಿತ ಹಗಲು-ರಾತ್ರಿ ಎನ್ನದೆ ಕೋವಿಡ್-19 ತಡೆಗಾಗಿ ಶ್ರಮಿಸುತ್ತಿದೆ. ಆದರೂ ಜನ ಪ್ರತಿನಿಧಿಗಳನೇಕರು ಸರಕಾರ ಹೊರಡಿಸಿದ ನಿಯಮಗಳನ್ನು ಮೀರಿ ನಡೆದುಕೊಳ್ಳುತ್ತಿದ್ದಾರೆ. ಕೆಲವರಂತೂ ಮನೆಯಲ್ಲಿ ಕೂಡದೆ ಹೊರಗೆ ಬರಲು ಹಾತೊರಿಯುತ್ತಿದ್ದಾರೆ.ಹಾಲು, ಮಾಂಸ, ಕಿರಾಣಿ, ಕಾಯಿಪಲ್ಯ, ಔಷಧ ಹೀಗೆ ಹಲವು ಕಾರಣಗಳನ್ನು ಹೇಳಿಕೊಂಡು ಜನ ಹೊರ ಬೀಳುತ್ತಿದ್ದಾರೆ. ದಂಡಮ್ ದಶಗುಣಮ್ ಎನ್ನುವಂತೆ ಲಾಠಿ ಏಟು ಬಿದ್ದರೇನೆ ಜನ ಮಾತು ಕೇಳುತ್ತಾರೆ ಎಂಬುದು ಸುಳ್ಳಲ್ಲ.
ಮೇ ಅಂತ್ಯದವರೆಗೂ ಕೆಲವು ರಿಯಾಯಿತಿ ಸಿಕ್ಕರೂ ಲಾಕ್ಡೌನ್ ಮುಂದುವರೆಯುವ ಲಕ್ಷಣಗಳಿವೆ. ಜೂನ್ ನಂತರ ಶಾಲಾ ಕಾಲೇಜುಗಳು ಆರಂಭವಾಗುವ ಸಾದ್ಯತೆಗಳಿವೆ.ಡಿಸೆಂಬರ್ ತಿಂಗಳವರೆಗೂ ದೈಹಿಕ ಅಂತರ ಕಾಪಾಡಿಕೊಳ್ಳಬೇಕಾಗಬಹುದು ಎಂದು ಕೆಲವು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.ಕೆಲವು ಜಿಲ್ಲೆಯಲ್ಲಿ ಮಾಂಸ ಮಾರಾಟಕ್ಕೆ ಅನುಮತಿ, ಕಟಿಂಗ್ ಮಾಡಿಸಿಕೊಳ್ಳಲು ಅನುಮತಿಸಲಾಗಿದೆ.ಇದು ಗಭೀರವಾದ ವಿಚಾರ. ಈಗಾಗಲೇ ಕ್ಷೌರ ಮಾಡಿಸಿಕೊಂಡಿದ್ದರಿಂದ ಕೊರೊನಾ ಪಾಸಿಟಿವ್ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ.ಅಷ್ಟಕ್ಕೂ ಇವು ಜೀವನಕ್ಕೆ ಬೇಕೆ ಬೇಕಾದವುಗಳು ಅಲ್ಲವೇ ಅಲ್ಲ.
ಕೊಪ್ಪಳ ಜಿಲ್ಲೆಯ ಮಟ್ಟಿಗೆ ಹೇಳುವುದಾದರೆ ಗಂಗಾವತಿ ತಾಲ್ಲೂಕಿನಲ್ಲಿ ಅತೀ ಹೆಚ್ಚಿನ ಸಂಖ್ಯೆಯ ದಾನಿಗಳು ಹೆಸರು ಮಾಡುತ್ತಿದ್ದಾರೆ ಆದರೆ ನಿಯಮಗಳನ್ನು ಪಾಲಿಸಿ, ಸಾರ್ವಜನಿಕರ ಜೊತೆಯಲ್ಲಿ ಅವರು ಸಹ ಜಾಗ್ರತೆಯಿಂದ ಇರಬೇಕಾದ ಅನಿವಾರ್ಯತೆ ಇದೆ. ಲಾಕ್ ಡೌನ್ ಆರಂಭದಲ್ಲಿಯೇ ಧೀಡೀರನೆ ದಾನಿಗಳು ಹೊರ ಬಂದಿದ್ದು ಆಶ್ಚರ್ಯಕರ. ಆಹಾರದ ಪಾಕೇಟಗಳ ಮೇಲೂ ಭಾವಚಿತ್ರಗಳ ಪ್ರದರ್ಶನವಾದದ್ದು ಕಾಕತಾಳೀಯವೇನೂ ಅಲ್ಲ ಎಂಬುದು ಸತ್ಯ.
ದಾನ ಧರ್ಮ ಮಾಡುವವರಿಗೆ ಮಾದ್ಯಮಗಳು ಪ್ರಚಾರ ನೀಡುತ್ತವೆ. ಪ್ರಚಾರ ನೀಡುವುಕೆಯಿಂದ ಯಾರೂ ವಂಚಿತರಾಗುವುದಿಲ್ಲ. ಮಿಗಿಲಾಗಿ ಸಾಮಾಜಿಕ ಜಾಲ ತಾಣಗಳು ದಾನ ಮಾಡುವವರ ಕೈಗಳಲ್ಲಿಯೇ ಇವೆ ಹೀಗಾಗಿ ಪ್ರಚಾರಕ್ಕಾಗಿ ಯಾರೂ ಸಣ್ಣ ಪಾಕೆಟ್ ಗಳಿಗೂ ಫೋಟೊ ಅಟ್ಟಿಸಿಕೊಂಡು ಹೋಗುವುದೇನೂ ಬೇಕಾಗುವುದಿಲ್ಲ.