ಜಮೀನು ಅತಿಕ್ರಮಣ ವಿವಾದ: ಓರ್ವನ ಕೊಲೆಯಲ್ಲಿ ಅಂತ್ಯ

Land encroachment dispute: ends in one's murder

ಜಮೀನು ಅತಿಕ್ರಮಣ ವಿವಾದ: ಓರ್ವನ ಕೊಲೆಯಲ್ಲಿ ಅಂತ್ಯ  

ರಾಣೇಬೆನ್ನೂರ 07:    ಜಮೀನಿನ ರಸ್ತೆ ಅತಿಕ್ರಮಣ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬನ ಕೊಲೆಯಾಗಿರುವ ದುರಂತ ಘಟನೆ ತಾಲೂಕಿನ ಮಾಳನಾಯಕನಹಳ್ಳಿಯಲ್ಲಿ ಶುಕ್ರವಾರ ಮುಂಜಾನೆ ನಡೆದಿರುವ ಕುರಿತು ವರದಿಯಾಗಿದೆ.ಗ್ರಾಮದ ಕರಬಸಪ್ಪ ಗೋವಿಂದಪ್ಪ ಪಾಟೀಲ (55) ಕೊಲೆಯಾದ ವ್ಯಕ್ತಿ.ಇದೇ ಗ್ರಾಮದ ವಸಂತ ಹನುಮಂತಪ್ಪ ಹಿರೇಬಿದರಿ, ಹೊಳಬಸಪ್ಪ ಹನುಮಂತಪ್ಪ ಹಿರೇಬಿದರಿ, ಮಧು ಸುರೇಶಪ್ಪ ಹಿತ್ತಲಮನಿ, ಪುಷ್ಪಾ ಸುರೇಶಪ್ಪ ಹಿತ್ತಲಮನಿ ಕೊಲೆ ಮಾಡಿರುವ ಆರೋಪಿಗಳಾಗಿದ್ದು, ಪೊಲೀಸರು ಪುಷ್ಪಾಳನ್ನು ಹೊರತು ಪಡಿಸಿ ಮೂವರನ್ನು ಬಂಧಿಸಿದ್ದಾರೆ. 

ಬೆಳಗಿನ ಜಾವ ಕರಬಸಪ್ಪ ಜಮೀನಿಗೆ ಹೋದಾಗ ವಸಂತ ಎಂಬುವವರ ಜತೆ ಜಮೀನಿನಲ್ಲಿ ಕಲ್ಲುಗೂಟ ಹಾಕಿರುವ ವಿಚಾರಕ್ಕೆ ಜಗಳವಾಗಿದೆ. ಎರಡು ಕುಟುಂಬದವರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋಗಿದೆ. ಈ ಸಮಯದಲ್ಲಿ ಕರಬಸಪ್ಪನನ್ನು ಮೂವರು ಬಲವಾಗಿ ದೂಡಿದ್ದು ಆತ ಹಿಂಬದಿಯಿಂದ ಸಿಸಿ ರಸ್ತೆಗೆ ಬಿದ್ದಿದ್ದಾನೆ. ಇದರಿಂದ ತಲೆಗೆ ಬಲವಾದ ಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ಕೂಡಲೇ ಆತನನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಸಾಗಿಸುತ್ತಿದ್ದ ಸಮಯದಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರೀಶೀಲಿಸಿದ್ದಾರೆ. ಕೊಲೆ ಆರೋಪಿಗಳಾದ ವಸಂತ ಸೇರಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.