ಬದುಕು ಒತ್ತಡದಿಂದ ಬಿಡುಗಡೆ ಹೊಂದಲು ಹಾಸ್ಯ ಅವಶ್ಯಕ- ಎನ್‌. ಮಂಜುನಾಥ್‌

Humor is necessary to get rid of the stress of life - N. Manjunath

ಬದುಕು ಒತ್ತಡದಿಂದ ಬಿಡುಗಡೆ ಹೊಂದಲು ಹಾಸ್ಯ ಅವಶ್ಯಕ- ಎನ್‌. ಮಂಜುನಾಥ್‌

ಹೂವಿನ ಹಡಗಲಿ 08: ಹಾಸ್ಯ ದಿಂದ ಗಂಭೀರ ಸಂದರ್ಭಗಳನ್ನು  ತಿಳಿಗೊಳಿಸಬಹುದು. ಹಾಸ್ಯ ಸಾಹಿತ್ಯ ಲಘುವಲ್ಲ ಗಂಭೀರವಾದದ್ದು. ಪ್ರಸ್ತುತ ದಿನಮಾನಗಳಲ್ಲಿ  ಮಾನವನ ಬದುಕು ಅನೇಕ ಒತ್ತಡಗಳಿಂದ ಜರ್ಜರಿತ ವಾಗುತ್ತಿದೆ. ಒತ್ತಡದಿಂದ ಬಿಡುಗಡೆ ಹೊಂದಲು ಹಾಸ್ಯ ಅವಶ್ಯಕ ಎಂದು ಶಿಕ್ಷಕ ಎನ್‌. ಮಂಜುನಾಥ್ ಅಭಿಪ್ರಾಯ ಪಟ್ಟರು.   

ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹಿರೇಹಡಗಲಿ ಹೋಬಳಿ ಘಟಕ ಗಿರಿಯಾಪುರ ಮಠದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಕಂಪ್ಲಿ ತೋಟದ್ದೇವರ ಹಿರೇಮಠದ ಕೊಟ್ರಯ್ಯ ಸ್ಮಾರಕ ದತ್ತಿ, ಷಾ ವನೇ ಚಂದ್ ಪೋಜಾಜಿ ಸ್ಮಾರಕ ದತ್ತಿ, ಕೆ.ಎಂ.ಕೃಷ್ಣಪ್ಪ ಸ್ಮಾರಕ ದತ್ತಿ ಉಪನ್ಯಾಸ ಹಾಗೂ ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿಗಳ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ’ಕನ್ನಡ ಸಾಹಿತ್ಯದಲ್ಲಿ ಹಾಸ್ಯ’ ಹಾಗೂ ’ಅಹಿಂಸೋ ಪರಮೋಧರ್ಮ’ವಿಷಯ ಕುರಿತು ಮಾತನಾಡಿದರು. ಕನ್ನಡ ಸಾಹಿತ್ಯದ ಪ್ರಾಚೀನ ಗ್ರಂಥಗಳಲ್ಲಿ ಹಾಸ್ಯ ಪ್ರಸಂಗಗಳ ಉಲ್ಲೇಖಗಳಿವೆ. ಹಾಸ್ಯ ಸಾಹಿತ್ಯದ ಸುವರ್ಣ ಯುಗ ಪ್ರಾರಂಭವಾದದ್ದು 20ನೇ ಶತಮಾನದಲ್ಲಿ. ಈ ಅವಧಿಯಲ್ಲಿ ಅನೇಕ ಕನ್ನಡ ಸಾಹಿತಿಗಳು ಹಾಸ್ಯ ಪ್ರಧಾನ ಕೃತಿಗಳನ್ನು ರಚನೆ ಮಾಡಿದ್ದಾರೆ.  

ಪುತಿನ, ಮುದ್ದಣ, ಡಿವಿಜಿ, ದಾಶರತಿ ದೀಕ್ಷಿತ್ ಟಿ.ಪಿ.ಕೈಲಾಸಂ, ರಾಶಿ,ಅ.ರಾ.ಮಿತ್ರ, ದುಂಡಿರಾಜ್, ಟಿ.ಸುನಂದಮ್ಮ, ನರಸಿಂಹಮೂರ್ತಿ, ನಾ.ಕಸ್ತೂರಿ ಮುಂತಾದವರು ಹಾಸ್ಯ ಸಾಹಿತ್ಯದಲ್ಲಿ ಕೃಷಿ ಮಾಡಿದ್ದಾರೆ. ವಿಡಂಬನೆ ಮೂಲಕ ವೈಚಾರಿಕತೆ ಬೆಳೆಸುವ ಕಾರ್ಯವನ್ನು ಹಾಸ್ಯ ಸಾಹಿತ್ಯ ಮಾಡುತ್ತದೆ ಎಂದರು.  ಪ್ರಾರಂಭದಲ್ಲಿ ಸಾಹಿತಿ, ದತ್ತಿ ದಾನಿಗಳಾದ ತೋ.ಮ. ಶಂಕ್ರಯ್ಯ ಕಾರ್ಯಕ್ರಮ ಉದ್ಘಾಟಿಸಿ ಹಾಸ್ಯ ಸಾಹಿತ್ಯದ ವಿಶೇಷತೆಯನ್ನು ತಿಳಿಸಿದರು. ಕಸಾಪ ತಾಲೂಕು ಘಟಕದ ಅಧ್ಯಕ್ಷರಾದ ಟಿ.ವೀರೇಂದ್ರ ಪಾಟೀಲ್ ಏಕೀಕರಣದ ಶಾಸ್ತ್ರಿಗಳೆಂದೇ ಹೆಸರಾದ ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿಗಳ ಬದುಕು ಬರಹಗಳ ಕುರಿತು ಮಾತನಾಡಿದರು. ವಸತಿ ಶಾಲೆಯ ಪ್ರಾಚಾರ್ಯರಾದ ಎಂ. ಎಸ್‌. ಪಾಟೀಲ್ ಮಾತನಾಡಿ ಇಂಥ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿದ್ದು ಸಾರ್ಥಕವಾಗಿದೆ. ನಮ್ಮ ವಿದ್ಯಾರ್ಥಿಗಳಿಗೆ ಸಾಹಿತ್ಯದ ಅಭಿರುಚಿಯನ್ನು ಬೆಳೆಸಲು ಪೂರಕವಾಗಿದೆ ಎಂದರು.  

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಸಂಜನಾ, ತೇಜಸ್ವಿನಿ, ದೀಪಾಶ್ರೀ ಇವರು ಕವನಗಳನ್ನು ವಾಚಿಸಿದರು.ಕಸಾಪ ಹಿರೇಹಡಗಲಿ ಹೋಬಳಿ ಘಟಕದ ಅಧ್ಯಕ್ಷ ಜಿ.ಎಸ್‌.ಸತೀಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಕರಿಯಪ್ಪ ಕೊಪ್ಪದ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ  ಮಮತಾ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ರೋಷನ್ ಜಮೀರ್ ಸ್ವಾಗತಿಸಿದರು. ದೈಹಿಕ ಶಿಕ್ಷಕ ಸಿದ್ದಲಿಂಗಪ್ಪ ವಂದಿಸಿದರು. ಕನ್ನಡ ಶಿಕ್ಷಕ ರಮೇಶ್ ಕಾರ್ಯಕ್ರಮ ನಿರ್ವಹಿಸಿದರು.