30ರಿಂದ ಖಿಳೇಗಾಂವಿ ಬಸವೇಶ್ವರ ಜಾತ್ರೆ

Khilegaon Basaveshwara Fair from 30th

30ರಿಂದ ಖಿಳೇಗಾಂವಿ ಬಸವೇಶ್ವರ ಜಾತ್ರೆ 

ಸಂಬರಗಿ 24: ಕರ್ನಾಟಕ ಮಹಾರಾಷ್ಟ್ರದ ಗಡಿ ಭಾಗದಲ್ಲಿ ಇರುವ ಸುಕ್ಷೇತ್ರ ಖಿಳೇಗಾಂವಿ ಬಸವೇಶ್ವರ ಜಾತ್ರಾ ಮಹೋತ್ಸವ ಭಾನುವಾರ ಮಾರ್ಚ 30ರಿಂದ ಗುರುವಾರ 3 ಎಪ್ರೀಲವರೆಗೆ ನಡೆಯುತ್ತಿದೆ.  

ದಿ. 29 ಶನಿವಾರ ಅಮಾವಾಸ್ಯೆಯಂದು ಜಾತ್ರೆ ಪ್ರಾರಂಭ. ದಿ. 30ರಂದು ಯುಗಾದಿ ಪಾಡ್ಯೆ ಬೆಳಿಗ್ಗೆ ವಿಜಯಪೂರ ಇಂಡಿ ತಾಲೂಕಿನ ನಾಗಠಾಣ ಉದಯ ಲಿಂಗೇಶ್ವರ ಹಿರೇಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಮಿರಜ ತಾಲೂಕಿನ ಬೆಳ್ಳಂಕಿ ಹಿರೇಮಠ ಸಂಸ್ಥಾನ ಮಠದ ಗುರು ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ನೇತೃತ್ವದಲ್ಲಿ ಸಹಸ್ರ ಕುಂಭಮೇಳದೊಂದಿಗೆ ವಿಶೇಷ ಕಲಾ ತಂಡಗಳ, ಸಕಲ ವಾದ್ಯ ಮೇಳಗಳೊಂದಿಗೆ ಬಸವಣ್ಣ ಬೆಳ್ಳಿ ಪಲ್ಲಕ್ಕಿಯ ಮೆರವಣಿಗೆಯೊಂದಿಗೆ ಖಿಳೆಗಾಂವ ಗ್ರಾಮಕ್ಕೆ ಪಲ್ಲಕ್ಕಿ ಹೊರಡುವುದು. ಗ್ರಾಮದಲ್ಲಿ ಸಾಯಂಕಾಲ ಗ್ರಾಮಸ್ಥರಿಂದ ಹಾಗೂ ಭಕ್ತರಿಂದ ಬಸವಣ್ಣ ದೇವರಿಗೆ ಸಕ್ಕರೆ ನೈವೇದ್ಯ ಅರೆ​‍್ಣ, ಮಧ್ಯರಾತ್ರಿ ನಂತರ ಸಕಲ ವಾದ್ಯ ಮೇಳದೊಂದಿಗೆ ದೇವಸ್ಥಾನಕ್ಕೆ ಪಲ್ಲಕ್ಕಿ ಹಿಂದಿರುಗುವುದು. ಸೋಮವಾರದಿಂದ ಗುರುವಾರದವರೆಗೆ ಪ್ರತಿ ನಿತ್ಯ ಬಸವಣ್ಣ ಪಲ್ಲಕ್ಕಿ ಸಕಲ ವಾದ್ಯ ಮೇಳದೊಂದಿಗೆ ಅಗ್ರಾಣಿ ಸಂಗಮನಾಥನ ದರ್ಶನಕ್ಕೆ ಹೋಗಿ ಬರುವುದು. ಪ್ರತಿ ನಿತ್ಯ ಮಹಾರುದ್ರಾಭಿಷೇಕ, ತದ ನಂತರ ದಾಸೋಹ ಅನ್ನದಾನ ಇರುತ್ತದೆ.  

ಮಾರ್ಚ 31 ರಿಂದ ಎಪ್ರೀಲ 3ರವರೆಗೆ ಪ್ರತಿನಿತ್ಯ ಸಾಯಂಕಾಲ 6ರಿಂದ 7ಗಂಟೆಯವರೆಗೆ ಅಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ, ಸಾಂಸ್ಕೃತಿಕ ಮತ್ತು ಮನೋರಂಜನ ಕಾರ್ಯಕ್ರಮಗಳು ನಡೆಯುತ್ತವೆ. ದಿವ್ಯ ಸಾನಿಧ್ಯವನ್ನು ಟಾಕಳಿ ಗುರುದೇವ ತಪೋವನದ ಶಿವದೇವ ಸ್ವಾಮಿಗಳು, ಗುಣದಾಳ ಕಲ್ಯಾಣ ಹಿರೇಮಠದ ಡಾ. ವಿವೇಕಾನಂದ ದೇವರು ಇವರಿಂದ ಗುರುವಾರ 3ರಂದು ಮಹಾ ನೈವೇದ್ಯ ಹಾಗೂ ರಾತ್ರಿ ಆಶೀರ್ವಾದ ಪರ ಶ್ರೀಫಲಗಳು ಲಿಲಾವು ಹಾಗೂ ಸಮೀಣ (ಪಲ್ಲಕ್ಕಿ ಉತ್ಸವ)ದೊಂದಿಗೆ ಜಾತ್ರಾ ಉತ್ಸವ ಸಂಪೂರ್ಣಗೊಳ್ಳುವುದು.  

ಜಾತ್ರಾ ಮಹೋತ್ಸವದ ವೇಳೆ ವಿಶೇಷ ದಾನಿಗಳಿಂದ ವಿಶೇಷ ಮಹಾಪ್ರಸಾದ ಇರುತ್ತದೆ. ಜಾತ್ರೆಗೆ ಬರುವ ಭಕ್ತರಿಗೆ ಅಥಣಿ, ಮಿರಜ, ಸಾಂಗಲಿ, ಕವಟೆಮಹಾಂಕಾಳ ಘಟಕದಿಂದ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಬಸವೇಶ್ವರ ದೇವಸ್ಥಾನ ಜಾತ್ರಾ ಕಮೀಟಿ ವತಿಯಿಂದ ಸುವ್ಯವಸ್ಥೆ ಕಲ್ಪಿಸಲಾಗಿದೆ.