ಕೆಂಗೊಂಡ ಜಾತ್ರೆ: ಅದ್ದೂರಿಯಾಗಿ ಆಚರಿಸಲು ನಿರ್ಧಾರ
ಬ್ಯಾಡಗಿ 15: ತಾಲೂಕಿನ ಕೆಂಗೊಂಡ ಗ್ರಾಮದಲ್ಲಿ ಜನವರಿ 17 ರಿಂದ 21 ರವರೆಗೆ ನಡೆಯುವ ನಾಡಿನ ದೇವತೆ ದುರ್ಗಾದೇವಿ ಜಾತ್ರೆಯನ್ನು ಅತ್ಯಂತ ವಿಜೃಂಭಣೆ ಹಾಗೂ ಅದ್ದೂರಿಯಿಂದಆಚರಿಸಲು ತಾಲೂಕಿನ ಅಧಿಕಾರಿಗಳು ಹಾಗೂ ಭಕ್ತರು ದೇವಸ್ಥಾನ ಸಮಿತಿಯೊಂದಿಗೆ ಸಹಕರಿಸುವಂತೆ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.ಅವರು ಪಟ್ಟಣದ ತಹಶೀಲ್ದಾರರ ಕಾರ್ಯಾಲಯದ ಸಭಾಭವನದಲ್ಲಿ ನಡೆದ ಕೆಂಗೊಂಡ ಗ್ರಾಮದಶ್ರಿ? ದುರ್ಗಾದೇವಿ ದೇವಸ್ಥಾನ ಸೇವಾ ಸಮಿತಿ ಹಾಗೂ ತಾಲೂಕಿನ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಹಾ ಜಾತ್ರೆಯು ಜನವರಿ 21 ರಂದು ನಡೆಯಲಿದ್ದು, ಅಂದು ನಮ್ಮ ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದ ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಚಕ್ಕಡಿ, ಟಾಂಟಾಂ ಗಾಡಿ, ಸೈಕಲ್ ಮೋಟಾರ್, ಬಸ್ ಗಳು ಸೇರಿದಂತೆ ವಿವಿಧ ವಾಹನಗಳ ಮೂಲಕ ಕಿಕ್ಕಿರಿದು ಜನ ಸಾಗರ ಬಂದು ಸೇರಲಿದೆ ಎಂದರು.ದುರ್ಗಾದೇವಿ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಚಂದ್ರಣ್ಣ ಗುಡುಗೂರ ಮಾತನಾಡಿ ಪ್ರತಿ ವರ್ಷಕ್ಕಿಂತ ಈ ವರ್ಷದಲ್ಲಿ ಹೆಚ್ಚಿನ ಭಕ್ತರು ಆಗಮಿಸಲಿದ್ದು, ಅಧಿಕಾರಿಗಳು ಹೆಚ್ಚು ಕಾಳಜಿ ವಹಿಸಿ ಯಾವುದೇ ಸಮಸ್ಯೆ ತಲೆದೊರದಂತೆ ಶ್ರೀದೇವಿ ಜಾತ್ರೆಯನ್ನು ಶಾಂತಿ ಸುವ್ಯವಸ್ಥೆಯಿಂದ ಹೆಮ್ಮೆ ಪಡುವಂತೆ ಆಚರಿಸಲು ನಮ್ಮೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಜಾತ್ರೆಗೆ ಬರಲಿರುವ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ, ಬರುವ ಭಕ್ತರ ವಾಹನಗಳಿಗೆ ಉತ್ತಮ ರಸ್ತೆಗಳ ನಿರ್ಮಾಣ, ಶೌಚಾಲಯದ ವ್ಯವಸ್ಥೆ, ಆಸ್ಪತ್ರೆಯ ವ್ಯವಸ್ಥೆ, ಸಂಚರಿಸಲು ಬಸ್ ಗಳ ವ್ಯವಸ್ಥೆ, ವಿದ್ಯುತ್ ದೀಪ ಹಾಗೂ ವಿದ್ಯುತ್ ಸರಬರಾಜು ವ್ಯವಸ್ಥೆ, ಸಾರ್ವಜನಿಕರ ಹಾಗೂ ಸರ್ಕಾರದ ವಾಹನ ನಿಲುಗಡೆಗೆ ಸೂಕ್ತ ಸ್ಥಳ ವ್ಯವಸ್ಥೆ ಮಾಡುವ ಜೊತೆಗೆ ಪೋಲಿಸ್ ಇಲಾಖೆಯ ಬಂದೋಬಸ್ತ್ ಸೇರಿದಂತೆ ಇನ್ನಿತರೇ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಅಧಿಕಾರಿಗಳು ನಿರ್ವಹಿಸಬೇಕೆಂದರು.ಯಾವ್ಯಾವ ಅಧಿಕಾರಿಗಳಿಗೆ ಯಾವ್ಯಾವ ಜವಾಬ್ದಾರಿಗಳನ್ನು ಹಂಚಲಾಗಿದೆಯೋ ಆ ಜವಾಬ್ದಾರಿಯಲ್ಲಿ ಲೋಪ ದೋಷವಾಗದಂತೆ ಜಾತ್ರಾ ಸಮಿತಿಯ ಜೊತೆಗೆ ಸಮನ್ವಯ ಸಾಧಿಸಿ ಜಾತ್ರೆಗೆ ಮೆರುಗು ತರುವ ಮೂಲಕ ಯಶಸ್ವಿಗೆ ಶ್ರಮಿಸಬೇಕೆಂದು ಅಧಿಕಾರಿಗಳಿಗೆ ಹೇಳಿದರಲ್ಲದೇ ಯಾವ್ಯಾವ ಅಧಿಕಾರಿಗಳಿಗೆ ಯಾವ್ಯಾವ ಜವಾಬ್ದಾರಿಗಳನ್ನು ನೀಡಿಲಾಗಿದೆಯೋ ಆ ಜವಾಬ್ದಾರಿಯಲ್ಲಿ ವಿಫಲವಾದಲ್ಲಿ ಅಂಥಹ ಅಧಿಕಾರಿಗಳನ್ನೆ ಹೊಣೆಗಾರರನ್ನಾಗಿ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.
ರಾಣೆಬೆನ್ನೂರು, ಗುತ್ತಲ, ಹಾವೇರಿ ಹಾಗೂ ಬ್ಯಾಡಗಿಯಿಂದ ಬಸ್ ಗಳ ಸೌಲಭ್ಯಗಳನ್ನು ಮಾಡಲಾಗಿದ್ದು ಡಿಪೋ ಮ್ಯಾನೇಜರರು ಜನರಿಗೆ ತೊಂದರೆಯಾಗದಂತೆ ವಾಹನಗಳನ್ನು ಆಡಿಸುವಂತೆ ಹೇಳಿದರು. ಈ ಸಂದರ್ಭದಲ್ಲಿ ತಹಶೀಲ್ದಾರ ಫಿರೋಜಾಷಾ ಸೋಮನಕಟ್ಟಿ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಮಲ್ಲಿಕಾರ್ಜುನ, ಸಿಪಿಐ ಮಹಾಂತೇಶ ಲಂಬಿ, ಪಿಎಸ್‌ಐ ಬಿ.ಎಸ್. ಅರವಿಂದ, ಇಂಜೀನೀಯರ ಉಮೇಶ ನಾಯಕ, ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್ ಮುನಾಫ್ ಎರೇಸಿಮಿ, ದೇವಸ್ಥಾನ ಸಮಿತಿಯ ಉಪಾಧ್ಯಕ್ಷ ರಾಜಶೇಖರ ಬಣಕಾರ, ಕಾರ್ಯದರ್ಶಿ ದ್ಯಾಮನಗೌಡ ಪಾಟೀಲ, ದ್ಯಾಮಣ್ಣ ರಿತ್ತಿ, ಈರಣ್ಣ ಪೂಜಾರ, ಸಿದ್ದನಗೌಡ ಪಾಟೀಲ, ಈರ್ಪ ಬಣಕಾರ, ರಮೇಶ ಕುರಿ ಸೇರಿದಂತೆ ಇತರರಿದ್ದರು.