ಬ್ಯಾಂಕ ವ್ಯವಹಾರಗಳ ಮೇಲೆ ಹೆಚ್ಚಿನ ನಿಗಾವಹಿಸಿ: ಮಧು ಮಹಾಜನ

ಧಾರವಾಡ22:  ಹೆಚ್ಚುವರಿ ಮದ್ಯ ದಾಸ್ತಾನು, ಮಾರಾಟ ಹಾಗೂ 1 ಲಕ್ಷ ದಿಂದ 10 ಲಕ್ಷದವರೆಗೆ ವ್ಯವಹಾರ ಆಗುವ ಸಂಶಯಾಸ್ಪದವಿರುವ ಬ್ಯಾಂಕ್ ಖಾತೆಗಳ ಮೇಲೆ ವಿಶೇಷ ನಿಗಾವಹಿಸಿ ಎಂದು ಧಾರವಾಡ ಲೋಕಸಭಾ ಚುನಾವಣೆ ಕ್ಷೇತ್ರದ ವೆಚ್ಚ ವಿಶೇಷ ವೀಕ್ಷಕರಾದ ಮಧು ಮಹಾಜನ ಹೇಳಿದರು.

ಅವರು ಇಂದು ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ಜರುಗಿಸಿ, ಮಾತನಾಡಿದರು.

ಜಿಲ್ಲಾ ಸಹಕಾರಿ ಬ್ಯಾಂಕ್ ಹಾಗೂ ರಾಷ್ಟ್ರೀಕೃತ, ಖಾಸಗಿ ಬ್ಯಾಂಕ್ಗಳ ಮೇಲೆ ವಿಶೇಷ ಗಮನವಿಡಬೇಕು. 1 ಲಕ್ಷ ದಿಂದ 10 ಲಕ್ಷದ ವರಗೆ ಆಗುವ ಬ್ಯಾಂಕ್ ವ್ಯವಹಾರಗಳನ್ನು ಪರಿಶೀಲಿಸಬೇಕು. ಅನುಮತಿಗಿಂತ ಹೆಚ್ಚು ಮದ್ಯ ದಾಸ್ತುನು, ಮಾರಾಟ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಉದ್ಯಮಿಗಳ ಬ್ಯಾಂಕ್ ವ್ಯವಹಾರಗಳನ್ನು  ಸಹ ಪರಿಶೀಲಿಸಬೇಕು ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿಗಳು ಆಗಿರುವ ಜಿಲ್ಲಾ ಚುನಾವಣಾಧಿಕಾರಿ ದೀಪಾ ಚೋಳನ್ ಮಾತನಾಡಿ, ಧಾರವಾಡ ಲೋಕಸಭಾ ಮತಕ್ಷೇತ್ರದ ಕುರಿತು, ಮತದಾರ ಸಂಖ್ಯೆ, ಮತಗಟ್ಟೆಗಳು, ಸಿಬ್ಬಂದಿ ನೇಮಕ, ಎಫ್ಎಸ್ಟಿ-ಎಸ್ಎಸ್ಟಿ ತಂಡಗಳು, ಭದ್ರತೆಗಾಗಿ ನೇಮಿಸಿದ ಪೊಲೀಸ್ ಸಿಬ್ಬಂದಿ, ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಸೇರಿದಂತೆ ಕೈಗೊಂಡ ಕ್ರಮ ಹಾಗೂ ಚುನಾವಣಾ ಸಿದ್ಧತೆಗಳ ಕುರಿತು ವಿವರಿಸಿದರು ಮಹಾನಗರ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಜಿ, ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕ ಕೆ.ಈಶ್ವರ ಹಾಗೂ ವೆಚ್ಚ ವೀಕ್ಷಕರಾದ ಪಿ.ವಿ.ವೆಂಕಟೇಶ್ವರನ್ ಮತ್ತು ಆನಂದಕುಮಾರ ಮಾತನಾಡಿ, ಸಭೆಗೆ ಪೂರಕ ಮಾಹಿತಿ ನೀಡಿದರು.

ಸಭೆಯಲ್ಲಿ ಜಿ.ಪಂ. ಸಿಇಓ ಡಾ.ಬಿ.ಸಿ.ಸತೀಶ, ಅಪರ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಸೇರಿದಂತೆ ಅಬಕಾರಿ ಇಲಾಖೆ, ಎಫ್ಎಸ್ಟಿ-ಎಸ್ಎಸ್ಟಿ,  ವೆಚ್ಚ ತಂಡಗಳ ಸದಸ್ಯರು ಪಾಲ್ಗೊಂಡಿದ್ದರು.

ಸಭೆಯ ಪೂರ್ವದಲ್ಲಿ ಮಧು ಮಹಾಜನ ಅವರು ಚುನಾವಣಾ ವಿಭಾಗ, ಮತದಾರರ ದೂರು ಸ್ವೀಕಾರ ಕೇಂದ್ರ, ಸಿವಿಜಲ್ ಕೇಂದ್ರ, ಮಾಧ್ಯಮ ವಿಕ್ಷಣಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾ ಚುನಾವಣಾಧಿಕಾರಿ ದೀಪಾ ಚೋಳನ್ ಮಾಹಿತಿ ನೀಡಿದರು.