ಡಾಕ್ಟರ್ ಮಹೇಶ್ ಜೋಶಿಗೆ ಪತ್ರ ಬರೆದ ಕರವೇ :ಕಸಾಪ ಜಿಲ್ಲಾಧ್ಯಕ್ಷ ಬೊಮ್ಮುಯ್ಯ ವಿರುದ್ಧ ಕ್ರಮಕ್ಕೆ ಪಟ್ಟು
ಕಾರವಾರ 05 : ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮರಾಠಿ ಭಜನೆ ಮಾಡಿಸಿದ ಹಾಗೂ ಬೆಳಗಾವಿಯಲ್ಲಿ ಕನ್ನಡಿಗ ಬಸ್ ಕಂಡಕ್ಟರ್ ಮೇಲೆ ಮರಾಠಿ ಪುಂಡರು ಹಲ್ಲೆ ಮಾಡಿದ ಘಟನೆಯನ್ನು ಕ್ಷುಲ್ಲಕ ಎಂದಿರುವ ಉತ್ತರ ಕನ್ನಡ ಜಿಲ್ಲಾ ಕಸಾಪ ಜಿಲ್ಲಾಧ್ಯಕ್ಷ ಬೊಮ್ಮಯ್ಯ ಎನ್ . ವಾಸರೆ ಬಹಿರಂಗ ಕ್ಷಮೆ ಯಾಚಿಸಬೇಕು ಹಾಗೂ ಅವರ ರಾಜೀನಾಮೆಯನ್ನು ರಾಜ್ಯಾಧ್ಯಕ್ಷರು ಪಡೆಯಬೇಕೆಂದು ಕರವೇ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಪ್ರವೀಣ ಕೊಠಾರಿ, ವಕೀಲ ರಾಘವೇಂದ್ರ ಗಡೆಪ್ಪನವರ ಆಗ್ರಹಿಸಿದರು.ಕಾರವಾರದ ಪತ್ರಿಕಾ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ಮಾಡಿದ ಅವರು ದಾಂಡೇಲಿ ತಾಲೂಕು ಆಲೂರಿನಲ್ಲಿ ನಡೆದ 3ನೇ ಕನ್ನಡ ಸಾಹಿತ್ಯ ಸಮ್ಮೇಳನ 28 ಫೆಬ್ರವರಿ 2025 ರಂದು ಆಗಿದ್ದು ,ಆ ಸಮ್ಮೇಳನ ಅಧ್ಯಕ್ಷರ ಮರವಣಿಗೆಯಲ್ಲಿ ಮರಾಠಿ ಭಜನೆ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ . ಕನ್ನಡಕ್ಕೆ ಅವಮಾನ ಮಾಡಿರುವ ಕುರಿತು ಸೋಶಿಯಲ್ ಮಿಡೀಯಾದಲ್ಲಿ ಚರ್ಚೆ ಸಹ ಆಗಿದೆ.ಹಾಗೂ ಉ.ಕ.ಜಿಲ್ಲಾ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಬೊಮ್ಮಯ್ಯ. ಎನ್. ವಾಸರೆ ಆಲೂರಿನ ಸಮ್ಮೇಳನದಲ್ಲಿ ಮಾತನಾಡುವ ಸಂದರ್ಭದಲ್ಲಿ, ಬೆಳಗಾವಿ ಯಂತಹ ಊರಿನಲ್ಲಿ ಕೇವಲ ಒಂದು ಬಸ್ ನಿರ್ವಾಹಕನ ಮೇಲೆ ಒಂದು ಕ್ಷುಲ್ಲಕ ಕಾರಣಕ್ಕಾಗಿ ವಿವಾದವನ್ನ ಹುಟ್ಟಿಕೊಂಡಿದೆ. ಜಾತಿಯ ಬಣ್ಣವೋ ಇತ್ಯಾದಿ ಎಂದು ಮಾತನಾಡಿದ್ದಾರೆ.ಬೆಳಗಾವಿಯಲ್ಲಿನಡೆದ ಎಂ. ಈ .ಎಸ್. ಪುಂಡಾಟಿಕೆ ,ಬೊಮ್ಮಯ್ಯ ವಾಸರೆಗೆ ಕ್ಷುಲ್ಲಕವಾಗಿ ಕಂಡಿದೆ. ಬೆಳಗಾವಿ ಘಟನೆಯು ಕ್ಷುಲ್ಲಕ ಕಾರಣ ಎಂದು ಹೇಳುವ ಮೂಲಕ ಅವರು ಕನ್ನಡಪರ ಹೋರಾಟಗಾರರಿಗೆ ಅವಮಾನ ಮಾಡಿದ್ದಾರೆಂದು ಅಪಾದಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಮೂಲ ಉದ್ದೇಶ ಕನ್ನಡ ನಾಡು ನುಡಿ, ಭಾಷೆ ರಕ್ಷಣೆ . ಈ ಮೂಲ ಉದ್ದೇಶವನ್ನು ಉತ್ತರ ಕನ್ನಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಾಸರ ಅವರು ಗಾಳಿಗೆ ತೂರಿದ್ದಾರೆ. ಕನ್ನಡಪರ ಕಲೆ ಮತ್ತು ಸಂಸ್ಕೃತಿಗೆ ಯಾವುದೇ ಪ್ರೋತ್ಸಾಹ ನೀಡದೆ, ಆಲೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಮನಸೋ ಇಚ್ಛೆ ನಡೆಸಿದ್ದಾರೆ. ಆದುದರಿಂದ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು . ರಾಜ್ಯಾಧ್ಯಕ್ಷರಿಗೆ ಈ ಘಟನೆಗಳ ಬಗ್ಗೆ ಪತ್ರ ಬರೆಯಲಾಗಿದೆ . ಅವರು ಕ್ರಮಕೈಗೊಳ್ಳುವ ವಿಶ್ವಾಸ ಇದೆ ಎಂದು ಕರವೇ ಪದಾಧಿಕಾರಿ,ಕಾನೂನು ಸಲಹೆಗಾರ ಗಡೆಪ್ಪನವರ ಹೇಳಿದರು.ಕಾರವಾರ ಕರವೇ ಘಟದ ಅಧ್ಯಕ್ಷ ಅಕ್ಷಯ ನಾಗೇಕರ್ ಮಾತನಾಡಿ ಆಲೂರುಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮರಾಠಿ ಭಜನೆಗೆ ಅವಕಾಶ ಕೊಟ್ಟಿರುವುದು ಹಾಗೂ ತಮ್ಮ ನುಡಿಯಲ್ಲಿ ಬೆಳಗಾವಿ ಹೋರಾಟ ಕ್ಷುಲ್ಲಕ ಎಂದು ಪರಿಗಣಿಸಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಗಂಭೀರವಾಗಿ ಪರಿಗಣಿಸಿದೆ. ವಾಸರೆ ಬಹಿರಂಗ ಕ್ಷಮೆಯಾಚಿಸಿದಿದ್ದರೆ ಹೋರಾಟ ತೀವ್ರವಾಗಲಿದೆ. ಹೋರಟಕ್ಕೆ ರಾಜ್ಯಾಧ್ಯಕ್ಷರು ಬರಲಿದ್ದಾರೆಂದರು.ದಾಂಡೇಲಿ ಹೋರಾಟ ಸಮಿತಿ ಅಧ್ಯಕ್ಷ , ಕಸಾಪ ಅಜೀವ ಸದಸ್ಯ ಅಕ್ರಂಖಾನ್ ಮಾತನಾಡಿ, ಕಸಾಪ ಕೇವಲ ಸಮ್ಮೇಳನ ನಡೆಸಿದರೆ ಸಾಲದು. ಸಮ್ಮೇಳನ ಮಾಡಿವುದಷ್ಟೇ ಸಾಧನೆಯಲ್ಲ. ಕನ್ನಡ ಶಾಲೆಗಳು ಮುಚ್ಚುತ್ತಿವೆ. ಇದರ ಬಗ್ಗೆ ಕಸಾಪ ಧನಿ ಎತ್ತಿಲ್ಲ. ಕನ್ನಡ ಭಾಷೆಗೆ ಕುತ್ತು ಬಂದಾಗ, ಕನ್ನಡಗ ಕಂಡಕ್ಟರ್ ಮೇಲೆ ಮರಾಠಿ ಪುಂಡರು ಹಲ್ಲೆ ಮಾಡಿದಾಗ ಕಸಾಪ ಜಿಲ್ಲಾಧ್ಯಕ್ಷರು ಬಾಯಿ ಬಿಡುವುದಿಲ್ಲ. ಉತ್ತರ ಕನ್ನಡ ಜಿಲ್ಲಾ ಕಸಾಪ ತಾಲೂಕಾ ಘಟಕಗಳು ಘಟನೆಯ ಬಗ್ಗೆ ಖಂಡನೆ ಸಹ ಮಾಡುವುದಿಲ್ಲ.ಇದು ಕನ್ನಡ ರಕ್ಷಿಸುವ ಬಗೆಯೇ ಎಂದು ಪ್ರಶ್ನಿಸಿದರು.ಕಸಾಪ ಜಿಲ್ಲಾಧ್ಯಕ್ಷ ಬೊಮ್ಮಯ್ಯ ನಡೆಯ ಬಗ್ಗೆ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಅವರಿಗೆ ಪತ್ರ ಬರೆಯಲಾಗಿದೆ ಎಂದು ಕರವೇ ಪದಾಧಿಕಾರಿಗಳು ಪತ್ರದ ಪ್ರತಿಯನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದರು. ಕಸಾಪ ಜಿಲ್ಲಾಧ್ಯಕ್ಷರ ಮೇಲೆ ಕ್ರಮ ಆಗಬೇಕೆಂದು ಆಗ್ರಹಿಸಿದರು. ಕರವೇ ದಾಂಡೇಲಿ, ಕಾರವಾರ ಪದಾಧಿಕಾರಿಗಳು ಉಪಸ್ಥಿತರಿದ್ದರು......