ಆಂಜನೇಯ ಸ್ವಾಮಿಯ ಕಾರ್ತಿಕೋತ್ಸವ
ರಾಣೇಬೆನ್ನೂರು 21: ತಾಲೂಕಿನ ಹುಲ್ಲತ್ತಿ ಗ್ರಾಮದ ಆಂಜನೇಯ ಸ್ವಾಮಿಯ ದೇವಸ್ಥಾನದಲ್ಲಿ ಶ್ರೀ ಆಂಜನೇಯ ಸ್ವಾಮಿಯ ಕಾರ್ತಿಕೋತ್ಸವದ ನಿಮಿತ್ತ ಗ್ರಾಮದ 50ಕ್ಕೂ ಹೆಚ್ಚು ಯುವಕರು ಹನುಮನ ಮಾಲೆಯನ್ನು ಧಾರಣೆ ಮಾಡಿ, ಧರ್ಮ ಜಾಗೃತಿ ಮೆರೆದರು. ಹುಲ್ಲತ್ತಿ ಗ್ರಾಮದ ಯುವಕರು,ಸತತ ಒಂಬತ್ತು ದಿನಗಳ ಕಾಲವು ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ತಣ್ಣೀರಿನಿಂದ ಸ್ನಾನ ಮಾಡಿ ನಾಲ್ಕು ಮೂವತ್ತರಿಂದ ಐದು ಮೂವತ್ತರ ವರೆಗೂ ಹನುಮ ಜಪ ಮಾಡುತ್ತಾ ಮತ್ತು ಸಂಜೆ 6 ಗಂಟೆಗೆ ಸ್ನಾನ ಮಾಡಿ 6:30 ರಿಂದ 7:30ರ ವರೆಗೂ ಹನುಮ ಧ್ಯಾನ, ಹನುಮ ಭಜನೆ, ಹನುಮ ಸತ್ಸಂಗ, ಹಾಗೂ ಹನುಮನ ಕಠಿಣ ವೃತ ಆಚರಿಸಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿಯೇ ಹಗಲು ರಾತ್ರಿ ವಸತಿ ಮಾಡಿದ್ದರು. ಇಂದು ಹನುಮ ಹುಟ್ಟಿದ ಸ್ಥಳವಾದ ಅಂಜನಾದ್ರಿ ಬೆಟ್ಟಕ್ಕೆ ತೆರಳಿ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಘೋಷಣೆಯೊಂದಿಗೆ 542 ಮೆಟ್ಟಿಲುಗಳನ್ನು ಹತ್ತಿ ಶ್ರೀ ಆಂಜನೇಯ ಸ್ವಾಮಿಯ ದರ್ಶನ ಪಡೆದು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ, ಬೆಟ್ಟದಲ್ಲಿರುವ ಹನುಮಾ ದೇವಸ್ಥಾನದ ಅರ್ಚಕರಿಂದ ಮಾಲೆಯನ್ನು ತೆಗೆಸಲಾಯಿತು. ಧಾರ್ಮಿಕ ಆಚರಣೆ ನಿಮಿತ್ತವಾಗಿ ಗ್ರಾಮದಲ್ಲಿ 9 ದಿನಗಳವರೆಗೆ ಯಾರೊಬ್ಬರೂ ಮಾಂಸಹಾರ ಸೇವನೆ ಮುಕ್ತಗೊಳಿಸಿದ್ದರು. ಅಂಜನಾದ್ರಿ ಬೆಟ್ಟಕ್ಕೆ ತೆರಳುವ ಮುನ್ನ ಎಲ್ಲಾ ಮಾಲಾಧಾರಿಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಧರ್ಮ ಜಾಗೃತಿ ಗೊಳಿಸುವಲ್ಲಿ ಮುಂದಾಗಿದ್ದರು. ಅಲ್ಲದೆ ನಿತ್ಯವೂ ಗ್ರಾಮದ ರಸ್ತೆಗಳನ್ನು ಸ್ವಚ್ಛ, ಸುಂದರವಾಗಿ, ರಂಗೋಲಿಗಳನ್ನು ಬಿಡಿಸಿ ಮಾವಿನ ತೋರಣಗಳನ್ನು ಕಟ್ಟಿ ಮದುವಣಗಿತ್ತಿಯಂತೆ ಅಲಂಕಾರಗೊಳಿಸುತ್ತಿದ್ದರು.
ಈ ಧರ್ಮ ಸಂಸ್ಕಾರದಿಂದಾಗಿ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು ಪ್ರತಿಯೊಬ್ಬ ಮಾಲಾ ದಾರಿಯೂ ಮಾನಸಿಕವಾಗಿ ದೈಹಿಕವಾಗಿ ಸದೃಢವಾದ ಸಂಕಲ್ಪ ಸಿದ್ಧಿ ಮಾಡಿ ಹನುಮನ ಭಕ್ತನಾಗಿ ಕಾಯ, ವಾಚ, ಮನಸಾ ಆಸ್ತಿಕನಾಗಿ ಸಕಲ ಸದ್ಗುಣವುಳ್ಳ ಮಾನವ ಜೀವನ ನಡೆಸುತ್ತೇನೆ ಹಾಗೂ ನಮ್ಮಲ್ಲಿರುವ ಎಲ್ಲಾ ದುಶ್ಚಟಗಳನ್ನೂ ದೂರವಿಟ್ಟು ಮನೆಗೆ ಮಗನಾಗಿ, ಪತ್ನಿಗೆ ಪತಿಯಾಗಿ, ಮಕ್ಕಳಿಗೆ ತಂದೆಯಾಗಿ ದೇಶಕ್ಕೆ ಉತ್ತಮ ಪ್ರಜೆಯಾಗಿ ಜೀವನ ಸಾಗಿಸುತ್ತೇನೆ ಎಂದು ಸಂಕಲ್ಪ ಮಾಡಿ ವೃತ ಆಚರಿಸಿದ್ದು ಗ್ರಾಮದ ಇತರೆ ಯುವಕರಿಗೆ ಪ್ರೇರಣೆ ನೀಡಿದ್ದರು. ಈ ಸಂದರ್ಭದಲ್ಲಿ ಮಂಜಪ್ಪ ಗುಗ್ಗರಿ - ಮಾರುತಿ ದೊಡ್ಡಮನಿ, ಆಂಜನೇಯ, ಶಿವಪ್ಪ ಕೆರೊಡಿ, ಗುರುಸ್ವಾಮಿಗಳಾಗಿ ಮಾಲಾಧಾರಿಗಳಿಗೆ ಮಾರ್ಗದರ್ಶನ ನೀಡಿದರು. ಭರ್ಮಪ್ಪ ಕಂಬಳಿ, ನೀಲಪ್ಪ ಛತ್ರ,ಮಲ್ಲಪ್ಪ ಜ್ಯೋತಿ, ಪರಮೇಶಪ್ಪ ಹೆಸರೋರು, ಅಭಿ ಜ್ಯೋತಿ, ಮಾರುತಿ ಹಳ್ಳಿ, ಮಂಜಪ್ಪ ಗಂಗಮ್ಮನವರ, ಹನುಮಂತ ಗುತ್ತಲ್, ಕುಮಾರ್ ವಡ್ಡರ್, ಸುರೇಶ್ ದೊಡ್ಮನಿ ಕುಮಾರ ಗಂಗಮ್ಮನವರ, ಸೇರಿದಂತೆ ಮತ್ತಿತರ ಯುವಕರು ಹಾಗೂ ಗುರುಗಳು, ಗುರು ಸ್ವಾಮಿಗಳು ಪಾಲ್ಗೊಂಡಿದ್ದರು.