ಆರೋಗ್ಯ ವ್ಯವಸ್ಥೆ ಉನ್ನತೀಕರಿಸಲು ಕೈಜೋಡಿಸಿ: ಡಿಹೆಚ್‌ಒ ಡಾ.ಯಲ್ಲಾ ರಮೇಶ್ ಬಾಬು
ಬಳ್ಳಾರಿ 15: ಆರೋಗ್ಯ ಇಲಾಖೆ ಮತ್ತು ಮಾಧ್ಯಮಗಳು ಸಮಾಜದಲ್ಲಿ ಸಂಪರ್ಕ ಸೇತುವೆಯಂತೆ ಕಾರ್ಯನಿರ್ವಹಿಸುತ್ತಿದ್ದು, ಆರೋಗ್ಯ ವ್ಯವಸ್ಥೆಯನ್ನು ಇನ್ನಷ್ಟು ಉನ್ನತೀಕರಿಸಲು ಮಾಧ್ಯಮ ಪ್ರತಿನಿಧಿಗಳು ಕೈಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಮಾಹಿತಿ ಶಿಕ್ಷಣ ಸಂವಹನ ವಿಭಾಗ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಶನಿವಾರ ಏರಿ್ಡಸಿದ್ದ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಕುರಿತು ಪರಿಚಯ ಮತ್ತು ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಕೈಗೊಳ್ಳಲಾಗುತ್ತಿರುವ ಎಲ್ಲಾ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ದಿನಂಪ್ರತಿ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿರುವ ಕುರಿತು ಬಳ್ಳಾರಿ ಜಿಲ್ಲೆಗೆ ರಾಜ್ಯಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಕಳೆದ ನವೆಂಬರ್ ತಿಂಗಳಲ್ಲಿ ನಡೆದ ಬಾಣಂತಿಯರ ಸಾವು ಪ್ರಕರಣ ಘಟನೆಯು ಸಾಕಷ್ಟು ಪರಿಣಾಮ ಬೀರಿತು. ಇದರಿಂದ ಸಾರ್ವಜನಿಕರು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತೆಗೆ ಬರುವುದು ಸಹ ಕುಗ್ಗಿತ್ತು. ಆದರೆ ಮಾಧ್ಯಮದವರು ಜನರಲ್ಲಿ ಜಾಗೃತಿ ಮೂಡಿಸುವ ವರದಿಗಳನ್ನು ಪ್ರಕಟಿಸಿದ ಕಾರಣದಿಂದಾಗಿ ಬರುತ್ತಾ ಕ್ರಮೇಣವಾಗಿ ಸುಧಾರಣೆ ಹೊಂದುತ್ತಿದೆ ಎಂದು ತಿಳಿಸಿದರು. ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಹಾಗೂ ತುರ್ತು ಸಂದರ್ಭಗಳಲ್ಲಿಯೂ ಜಿಲ್ಲಾ ಆರೋಗ್ಯ ಇಲಾಖೆಯು ಉತ್ತಮ ಸೇವೆ ನೀಡುತ್ತಿದೆ. ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇದರ ಜೊತೆಗೆ ಮಾರಕ ರೋಗಗಳನ್ನೂ ಸಹ ತಡೆಗಟ್ಟಲು ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು. ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆಗೆ ರೂಪುರೇಷೆ: ಮಾಧ್ಯಮ ಪ್ರತಿನಿಧಿಗಳ ಆರೋಗ್ಯವು ಮುಖ್ಯವಾಗಿದ್ದು, ಅವರ ಸುರಕ್ಷತೆಗಾಗಿ ವರ್ಷದಲ್ಲಿ ಒಂದು ಬಾರಿಯಾದರೂ ಅವರ ಸಾಮಾನ್ಯ ಆರೋಗ್ಯ ತಪಾಸಣೆ ಕೈಗೊಳ್ಳಲು ರೂಪುರೇಷೆ ಕೈಗೊಳ್ಳಲಾಗುವುದು. ಈ ಕುರಿತು ಚರ್ಚಿಸಿ ಪ್ರತಿನಿಧಿಗಳ ಮಾಹಿತಿ ಪಡೆದುಕೊಂಡು ನೋಂದಾಯಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ತಿಂಗಳಿಗೊಮ್ಮೆ ಆರೋಗ್ಯ ಕಾರ್ಯಕ್ರಮಗಳ ಕುರಿತು ವಿಶೇಷ ವರದಿ ಸಿದ್ಧಪಡಿಸಿ ಬಿಡುಗಡೆಗೊಳಿಸಿ ಹೆಚ್ಚಿನ ರೀತಿಯಲ್ಲಿ ಕಾರ್ಯಕ್ರಮಗಳ ಕುರಿತು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗುವುದು ಎಂದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆಯು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದೆ. ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಆರೋಗ್ಯ ಸೇವೆಗಳು ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಮಾಧ್ಯಮ ಪ್ರತಿನಿಧಿಗಳು ಹೆಚ್ಚಿನ ರೀತಿಯಲ್ಲಿ ಪ್ರಚಾರ ನೀಡಬೇಕು ಎಂದು ಕೋರಿದರು. ಜಿಲ್ಲೆಯಲ್ಲಿ ಹೆರಿಗೆ ಪ್ರಕರಣಗಳು ಜಿಲ್ಲಾ ಆಸ್ಪತ್ರೆ ಮತ್ತು ವಿಮ್ಸ್ ಆಸ್ಪತ್ರೆಯಲ್ಲಿ ಹೆಚ್ಚು ಆಗುತ್ತಿರುವುದರಿಂದ, ಶಿಶು ಮತ್ತು ತಾಯಿ ಮರಣ ತಡೆಗೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಯಾವುದೇ ಆರೋಗ್ಯ ಸೇವೆಗಳು, ಸೌಲಭ್ಯಗಳು ಹಾಗೂ ಇತರೆ ಕುಂದು ಕೊರತೆಗಳು ಕಂಡು ಬಂದಲ್ಲಿ ಸಂಬಂಧಿಸಿದ ವಿಭಾಗದ ಅಧಿಕಾರಿಗಳ ಗಮನಕ್ಕೆ ತರಬಹುದು ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಸಲಹೆ ನೀಡಿದರು. ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಹನುಮಂತಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅನುಷ್ಠಾನಗೊಳ್ಳುವ ಆರೋಗ್ಯ ಕಾರ್ಯಕ್ರಮಗಳು, ಸೌಲಭ್ಯಗಳು ಮತ್ತು ಆರೋಗ್ಯ ಜಾಗೃತಿ ಸಂದೇಶಗಳ ಕುರಿತು ಸಕಾಲದಲ್ಲಿ ಸಾರ್ವಜನಿಕರಿಗೆ ತಲುಪಿಸಲು ಮಾಧ್ಯಮಗಳ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು. ಇದೇ ವೇಳೆ, ಆರೋಗ್ಯ ಇಲಾಖೆಯಿಂದ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನೊಳಗೊಂಡಂತಹ ಸಂಕ್ಷಿಪ್ತ ಮಾಹಿತಿಯುಳ್ಳ ಕಿರುಹೊತ್ತಿಗೆಯನ್ನು ಗಣ್ಯರು ಅನಾವರಣಗೊಳಿಸಿದರು. ಕಾರ್ಯಾಗಾರದಲ್ಲಿ ಮಾನಸಿಕ ಆರೋಗ್ಯ ಕಾರ್ಯಕ್ರಮ, ಕುಷ್ಠರೋಗ ನಿರ್ಮೂಲನೆ, ಮೆದುಳಿನ ಆರೋಗ್ಯ ಉಪಕ್ರಮ, ತಂಬಾಕು ನಿಯಂತ್ರಣ, ಪುರುಷ ಸಂತಾನನಿರೋಧ ಶಸ್ತ್ರಚಿಕಿತ್ಸೆ, ರೇಬಿಸ್ ನಿಯಂತ್ರಣ ಸೇರಿದಂತೆ ಇತರೆ ಆರೋಗ್ಯ ಕಾರ್ಯಕ್ರಮಗಳ ಕುರಿತು ಸಂಬಂಧಿಸಿದ ವೈದ್ಯಾಧಿಕಾರಿಗಳು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ., ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ವೀರೇಂದ್ರ ಕುಮಾರ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಆರ್.ಅಬ್ದುಲ್ಲಾ, ಮನೋರೋಗ ತಜ್ಞ ಡಾ.ರೋಹನ್ ವನಗುಂದಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶಾಂತಮ್ಮ ಸೇರಿದಂತೆ ಮಾಧ್ಯಮ ಪ್ರತಿನಿಧಿಗಳು, ಜಿಲ್ಲಾ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.