ಶ್ರೀನಗರ, ಜೂನ್ 12 : ಜಮ್ಮು ಕಾಶ್ಮೀರದಲ್ಲಿ ಬಂದೂಕಿನ ಬುಲೆಟ್ ನಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಕೇವಲ ಬ್ಯಾಲೆಟ್ (ಮತಪತ್ರ) ಇಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ ಎಂದು ಅಲ್ಲಿನ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಹಿಂಸಾಚಾರದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತ ನಂತರವೂ ಪಾಕಿಸ್ತಾನ ಉಗ್ರರಿಗೆ ತರಬೇತಿ ನೀಡಿ ಜಮ್ಮು ಕಾಶ್ಮೀರಕ್ಕೆ ಕಳುಹಿಸುತ್ತಿರುವುದು ಅಚ್ಚರಿ ತರುತ್ತದೆ. ಉಗ್ರ ಪಡೆಗೆ ಹೊಸ ಸ್ಥಳೀಯ ಯುವಕರ ನೇಮಕಾತಿ ಪ್ರಮಾಣ ಕಡಿಮೆಯಾಗಿದೆ ಎಂದರು. ತೀವ್ರ ಸಂಕಷ್ಟದಲ್ಲಿರುವ ಪಾಕಿಸ್ತಾನ ವಿನಾಕಾರಣ ಮತ್ತೆಮತ್ತೆ ಉಗ್ರರನ್ನು ರಾಜ್ಯಕ್ಕೆ ಕಳುಹಿಸುತ್ತಿದೆ. ಆದರೆ, ನಮ್ಮ ಸೈನಿಕರು ಗಡಿ ನಿಯಂತ್ರಣ ರೇಖೆ ಬಳಿ ಅವರನ್ನು ತಡೆಯುತ್ತಿದ್ದಾರೆ. ವಸತಿ ಪ್ರದೇಶಗಳನ್ನು ತಲುಪಿದ್ದ ಉಗ್ರರನ್ನು ಸೈನಿಕರು ಹತ್ಯೆ ಮಾಡಿದ್ದಾರೆ ಎಂದರು. ಶ್ರೀಲಂಕಾದಲ್ಲಿ ಹತ್ತು ರಾಷ್ಟ್ರಗಳ ಬೆಂಬಲ ಹೊಂದಿದ್ದ ಪ್ರಬಲ ಎಲ್ ಟಿಟಿ ಇ ಉಗ್ರರು ಏನನ್ನೂ ಸಾಧಿಸದೆ ಅಂತ್ಯ ಕಾಣಬೇಕಾಯಿತು. ಕಾಶ್ಮೀರದಲ್ಲಿ ಈಗ ಉಗ್ರರು ಅಷ್ಟೇನು ಶಕ್ತಿಶಾಲಿಗಳಾಗಿಲ್ಲ. ಅವರು ತಮ್ಮ ಉಗ್ರವಾದ ತೊರೆದು ಮುಖ್ಯವಾಹಿನಿಗೆ ಬರಲು ಆಸಕ್ತಿ ತೋರಬೇಕು ಎಂದು ಕರೆ ನೀಡಿದರು. ಸ್ಥಳೀಯರು ಹಾಗೂ ಇತರರ ಪ್ರಯತ್ನದಿಂದ ರಾಜ್ಯದಲ್ಲಿ ಉಗ್ರತಂಡವನ್ನು ಸೇರುತ್ತಿದ್ದ ಕಾಶ್ಮೀರಿ ಯುವಕರ ಸಂಖ್ಯೆ ಇಳಿಮುಖವಾಗಿದೆ. ಅವರೂ ಕೂಡ ಹಿಂಸಾಚಾರದಿಂದ ಪ್ರಯೋಜವಿಲ್ಲ ಎಂಬುದನ್ನು ಅರಿತಿದ್ದಾರೆ. ಈ ಯುವಕರ ಪುನರ್ವಸತಿಗಾಗಿ ಕೇಂದ್ರ ಸಕರ್ಾರದಿಂದ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದರು. ರಾಜ್ಲದಲ್ಲಿ ಶೇ.5ರಿಂದ 10ರಷ್ಟು ಮಾತ್ರ ಮತದಾನವಾಗುತ್ತಿರುವುದು ವಿಷಾದನೀಯ. ಜನರನ್ನು ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕಿದೆ ಎಂದರು. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಸಾಧ್ಯತೆ ಕುರಿತ ಪ್ರಶ್ನೆಗೆ ಅವರು, ಇದು ಚುನಾವಣಾ ಆಯೋಗಕ್ಕೆ ಸಂಬಂಧಪಟ್ಟ ವಿಷಯ ಎಂದರು.