ಜಾನಪದ ಕಲಾ ಶ್ರೀಮಂತಿಕೆಯನ್ನು ಮುಂದಿನ ಪೀಳಿಗೆಗೆ ಉಳಿಸಿ, ಬೆಳೆಸುವುದು ಅವಶ್ಯ
ಧಾರವಾಡ 18 : ಆಧುನಿಕತೆಯ ಭರಾಟೆಯಲ್ಲಿ ನಮ್ಮ ಶ್ರೀಮಂತ ಜನಪದ ಸಂಸ್ಕೃತಿ ಮರೆಯಾಗುತ್ತಿರುವುದು ವಿಷಾದನೀಯ. ಜಾನಪದ ಕಲಾ ಶ್ರೀಮಂತಿಕೆಯನ್ನು ಮುಂದಿನ ಪೀಳಿಗೆಗೆ ಉಳಿಸಿ, ಬೆಳೆಸುವುದು ಅವಶ್ಯ ಎಂದು ಹೆಬ್ಬಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸುರೇಶ ಬನ್ನಿಗಿಡದ ಅಭಿಪ್ರಾಯಪಟ್ಟರು. ಅವರು ನಗರದ ಕ.ಸಾ.ಪ. ಭವನದಲ್ಲಿ ಬೇಡರ ಕಣ್ಣಪ್ಪ ಸಾಂಸ್ಕೃತಿಕ ಮಹಿಳಾ ಸಂಘ, ಬಿ. ಗುಡಿಹಾಳ ಹಾಗೂ ಶರಣಬಸವೇಶ್ವರ ಸಾಂಸ್ಕೃತಿಕ ಸಂಘ ರೊಟ್ಟಿಗವಾಡ ಜಂಟಿಯಾಗಿ ಆಯೋಜಿಸಿದ್ದ ಜಾನಪದ ಕಲಾವೈಭವ-25 ಉದ್ಘಾಟಿಸಿ ಮಾತನಾಡುತ್ತಿದ್ದರು. ಜನಪದ ಹಾಡುಗಳು ಕಾವ್ಯಮಯವೂ ಹಾಗೂ ಭಾವಮಯವೂ ಆಗಿರುವುದರಿಂದ ಮೂಲಜಾನಪದ ಸಾಹಿತ್ಯಕ್ಕೆ ಪೆಟ್ಟಾಗದಂತೆ ಹಾಡಿ ಜಾನಪದದ ಶ್ರೀಮಂತಿಕೆ ಹೆಚ್ಚಿಸಲು ಪ್ರತಿಯೊಬ್ಬ ಕಲಾವಿದರು ಶ್ರಮಿಸಬೇಕೆಂದು ಹೇಳಿದರು. ಲೂಸಿ ಸಾಲ್ಡಾನಾ ಸೇವಾ ಸಂಸ್ಥೆಯ ಗೌರವಾಧ್ಯಕ್ಷ ಭೀಮಪ್ಪ ಕಾಸಾಯಿ ಮಾತನಾಡಿ ನಮ್ಮ ಜನಪದರು ವಿದ್ಯಾವಂತರಲ್ಲದಿದ್ದರೂ ತಾವು ಅನುಭವಿಸಿದ ನೋವು-ನಲಿವುಗಳನ್ನು ಹಾಡಾಗಿ ಪರಿವರ್ತಿಸಿ ಬೇಸರವನ್ನು ನಿಗಿಸಿಕೊಂಡು, ಪುನಶ್ಚೇತನ ಪಡೆದುಕೊಳ್ಳುತ್ತಿದ್ದರೆಂದು ಹೇಳಿದರು. ಕ.ವಿ.ವ. ಸಂಘದ ಕಾರ‌್ಯಕಾರಿ ಸಮಿತಿ ಸದಸ್ಯ ವೀರಣ್ಣ ಒಡ್ಡೀನ ಮಾತನಾಡಿ, ಜಾನಪದ ಸಾಹಿತ್ಯ ನಮ್ಮ ಪಿತ್ರಾರ್ಜಿತರಿಂದ ಬಂದ ಬಹುದೊಡ್ಡ ಆಸ್ತಿ. ಜಾನಪದ ಸಾಹಿತ್ಯದಲ್ಲಿ ಮಹಿಳೆಯರದೇ ಸಿಂಹಪಾಲು. ಜಾನಪದ ಸಾಹಿತ್ಯ ಶಿಷ್ಠಪದ ಸಾಹಿತ್ಯಕ್ಕೆ ತಾಯಿ. ಈ ಸಾಹಿತ್ಯದಲ್ಲಿ ನಮ್ಮ ಜನಪದರ ಕೌಟುಂಬಿಕ ಸಂಬಂಧ ಗಟ್ಟಿಗೊಳಿಸುವ ಜೀವನ ಮೌಲ್ಯಗಳಿವೆ. ಇಂತಹ ಮನಮೋಹಕ ಸಾಹಿತ್ಯವನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಬೇಕಿದೆ. ಎಂದು ಹೇಳಿದರು. ತಾಲೂಕಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಕಾಳಪ್ಪ ಬಡಿಗೇರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಮೀಳಾ ಜಕ್ಕಣ್ಣವರ ಜಾನಪದ ಗೀತೆಗಳನ್ನು ಹಾಡಿ ಕಲಾವಿದರನ್ನು ಪ್ರೇರೆಪಿಸಿದರು. ಕುಂದಗೋಳ ಹಾಗೂ ಕಲಘಟಗಿ ತಾಲೂಕಿನ ಜಾನಪದ ಕಲಾ ತಂಡಗಳು ಜಾನಪದ ವೈಭವ ಕಾರ್ಯಕ್ರಮ ನಡೆಸಿಕೊಟ್ಟು ಜನಮನ ಸೂರೆಗೊಂಡರು. ಯಕ್ಕೇರ್ಪ ನಡುವಿನಮನಿ (ಶಾನವಾಡ ಮಾಸ್ತರ) ಸ್ವಾಗತಿಸಿ, ನಿರೂಪಿಸಿದರು. ರಾಮಚಂದ್ರ ಭಜಂತ್ರಿ, ಐ.ಐ. ಮುಲ್ಲಾನವರ, ಬಸವಂತಪ್ಪ ರೋಣದ ಕರೆವ್ವ ಕರೆಣ್ಣವರ ವೇದಿಕೆಯಲ್ಲಿದ್ದರು.