‘ಮೊಬೈಲ್ ಗೀಳಿನಿಂದ ಮಕ್ಕಳನ್ನು ಹೊರ ತರುವುದು ಅಗತ್ಯ’
ವಿಜಯಪುರ 03: ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ರೋಗಗಳನ್ನು ನಿಯಂತ್ರಿಸಿ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಲು ಸಾಧ್ಯ ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ. ಶನಿವಾರ ತಿಕೋಟಾ ತಾಲೂಕಿನ ಕನಮಡಿಯಲ್ಲಿ ಮಹಾಶಿವರಾತ್ರಿ ಅಂಗವಾಗಿ ಧರಿದೇವರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಕನಮಡಿ ಕಬಡ್ಡಿ ಉತ್ಸವ- 2025 ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ 14-15 ವರ್ಷದ ಮಕ್ಕಳಲ್ಲಿ ಹೃದಯಾಘಾತ ಉಂಟಾಗುತ್ತಿವೆ. ಇದು ಅಘಾತಕಾರಿಯಾಗಿದೆ. ನಾವು ಚಿಕ್ಕವರಿದ್ದಾಗ ದಿನವೀಡೀ ಮನೆಯ ಹೊರಗಡೆ ಆಟವಾಡುತ್ತಿದ್ದೆವು. ಆಗ ನಮ್ಮ ತಂದೆ-ತಾಯಿ ಊಟಕ್ಕೆ ಕರೆಯಲು ನಮ್ಮನ್ನು ಹುಡುಕಿಕೊಂಡು ಬರುತ್ತಿದ್ದರು. ಆದರೆ, ಈಗ ಮೊಬೈಲ್ ಗೀಳು ಅಂಟಿಸಿಕೊಂಡಿರುವ ಮಕ್ಕಳನ್ನು ಪೋಷಕರು ಮೊಬೈಲನ್ನು ಮನೆಯಲ್ಲಿಟ್ಟು ಹೊರಗಡೆ ಆಟವಾಡಲು ಹೋಗಿ ಎಂದು ತಮ್ಮ ಮಕ್ಕಳಿಗೆ ಬುದ್ಧಿವಾದ ಹೇಳುವ ಕಾಲ ಬಂದಿದೆ. ಮೊಬೈಲ್ ಗೀಳಿನಿಂದ ಮಕ್ಕಳನ್ನು ಹೊರ ತರುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು. ಯೌವನದಲ್ಲಿ ನಾವು ಹಣ ಗಳಿಕೆಗಾಗಿ ಊಟ, ನಿದ್ದೆ ಬಿಟ್ಟು ಉಪವಾಸವಿದ್ದು ದುಡ್ಡುಗಳಿಸುತ್ತೇವೆ. ನಿವೃತ್ತಿಯ ಹೊತ್ತಿಗೆ ಬಿಪಿ ಮತ್ತು ಶುಗರ್ ಕಾಯಿಲೆ ನಿಯಂತ್ರಣ ಮತ್ತು ಚಿಕಿತ್ಸೆಗಾಗಿ ವೈದ್ಯರ ಬಳಿಗೆ ತೆರಳುತ್ತೇವೆ. ಯೌವ್ವನದಲ್ಲಿ ಗಳಿಸಿದ ಸಂಪತ್ತನ್ನು ನಿವೃತ್ತಿಯ ಬಳಿಕ ಓಷದಿಗಾಗಿ ಖರ್ಚು ಮಾಡುತ್ತೇವೆ. ಇದಕ್ಕೆ ಪರ್ಯಾಯವಾಗಿ ಬಾಲ್ಯದಿಂದಲೇ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಸದೃಢ ಆರೋಗ್ಯದತ್ತ ಗಮನಹರಿಸಬೇಕು ಎಂದು ಅವರು ಹೇಳಿದರು. ವಿದೇಶಗಳು ತಮ್ಮ ರಾಷ್ಟ್ರೀಯ ಕ್ರೀಡೆಗಳನ್ನು ಪ್ರೋತ್ಸಾಹಿಸುತ್ತಿವೆ. ಅದೇ ರೀತಿ ನಾವೂ ಕೂಡ ಭಾರತೀಯ ಗ್ರಾಮೀಣ ಕ್ರೀಡೆಗಳಾದ ಕಬಡ್ಡಿ, ಕುಸ್ತಿ, ಹಾಕಿ, ಖೋಖೋ, ವ್ಹಾಲಿಬಾಲ್‌ಗಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ. ಕನಮಡಿ ಯುವಕರು ಕಬಡ್ಡಿ ಉತ್ಸವ ಆಯೋಜಿಸಿರುವುದು ಶ್ಲಾಘನೀಯವಾಗಿದೆ ಎಂದು ಅವರು ಹೇಳಿದರು. ಕಕಮರಿಯ ರಾಯಲಿಂಗೇಶ್ವರ ಸಂಸ್ಥಾನ ಮಠದ ಸದ್ಗುರು ಅಭಿನವ ಗುರುಲಿಂಗ ಜಂಗಮ ಮಹಾಸ್ವಾಮಿಗಳು, ಗ್ರಾ, ಪಂ ಅಧ್ಯಕ್ಷ ಭಾಸ್ಕರ ಹೊಸಮನಿ, ಮುಖಂಡರಾದ ಎ. ಡಿ. ಮುಲ್ಲಾ, ಬಾಪುಗೌಡ ಪಾಟೀಲ, ಶಂಕರಗೌಡ ಬಿರಾದಾರ, ಮಹಾನಿಂಗ ಜವನರ, ಶಂಕರ ಹ್ಯಾಮಗೋಳ, ಸುರೇಶ ಬಾಬಾನಗರ, ಶರಣು ಚಂಡಕಿ, ಶಿವಾನಂದ ಗುಡ್ಡೇವಾಡಿ, ಸುರೇಶ ಬಾಬಾನಗರ, ಗಾಂಧಿಬಾಯಿ ಗಡಾಲೋಟಿ ಮುಂತಾದವರು ಉಪಸ್ಥಿತರಿದ್ದರು.